ಅಂತರಾಷ್ಟ್ರೀಯ

ಭೂಕಂಪಕ್ಕೂ ಹೆದರದೆ ಶಸ್ತ್ರಕ್ರಿಯೆ ನಡೆಸಿ ಗರ್ಭಿಣಿಯ ಪ್ರಾಣ ಉಳಿಸಿದ ವೈದ್ಯ!

Pinterest LinkedIn Tumblr

ram nepal

ಕಠ್ಮಂಡು: ನೇಪಾಳದಲ್ಲಿ ಶನಿವಾರ ಭೀಕರ ಭೂಕಂಪ ಸಂಭವಿಸಿದ ಸಂದರ್ಭದಲ್ಲೇ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಶಸ್ತ್ರಕ್ರಿಯೆ ನಡೆಸಿದ ಗರ್ಭಿಣಿಯೊಬ್ಬಳ ಪ್ರಾಣ ಉಳಿಸಿರುವ ಇಲ್ಲಿನ ‘ಪ್ರಸೂತಿ ಗೃಹ’ದ ವೈದ್ಯ 33ರ ಹರೆಯದ ರಾಮ್‌ಪ್ರಸಾದ್ ಸಪ್ಕೋಟಾ ಓರ್ವ ಆದರ್ಶ ವ್ಯಕ್ತಿಯಾಗಿ ಮನೆಮಾತಾಗಿದ್ದಾರೆ.

ಭೂಕಂಪ ಸಂಭವಿಸುತ್ತಿದ್ದಂತೆ ಆಸ್ಪತ್ರೆಯ ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ಪ್ರಾಣ ರಕ್ಷಣೆಗಾಗಿ ತೆರವುಗೊಂಡರೂ, ರೋಗಿಗಳ ಪ್ರಾಣ ರಕ್ಷಣೆಯೇ ತಮ್ಮ ಕರ್ತವ್ಯವೆಂದು ತಿಳಿದಿದ್ದ ರಾಮ್ ಪ್ರಸಾದ್ ಹಾಗೂ ಅವರ ಸಹಾಯಕರು ಅಷ್ಟರಲ್ಲೇ ತನ್ನ ಜನಿಸಿರದ ಪ್ರಾಣ ಕಳೆದುಕೊಂಡಿದ್ದ ಮಗುವನ್ನು ಗರ್ಭದಲ್ಲಿರಿಸಿಕೊಂಡಿದ್ದ ಮಹಿಳೆಯನ್ನು ಶಸ್ತ್ರಕ್ರಿಯೆ ಕೊಠಡಿಯಲ್ಲಿ ಬಿಟ್ಟು ತೆರಳಲು ನಿರಾಕರಿಸಿ ಆದರ್ಶ ಮೆರೆದಿದ್ದರು.

ತಾಯಿಯ ಹೊಟ್ಟೆಯಲ್ಲೇ ಮೃತಪಟ್ಟಿದ್ದ ಮಗುವಿನ ತೂಕವು ಐದು ಕಿ.ಗ್ರಾಂ ಇದ್ದು, ಅದನ್ನು ಹೊರತೆಗೆಯದಿರುತ್ತಿದ್ದಲ್ಲಿ ಮಹಿಳೆಯ ಸಾವೂ ಖಚಿತವಾಗುತ್ತಿತ್ತು. ‘‘ಭೂಕಂಪನವಾದಾಗ ನಾನು ಆಕೆಯ ಗರ್ಭಾಶಯವನ್ನು ಹೊಲಿಯುತ್ತಿದ್ದೆ. ತೀವ್ರ ರಕ್ತಸ್ರಾವ ನಿಲ್ಲಿಸಲು ನಾನದನ್ನು ತಕ್ಷಣ ಮಾಡಬೇಕಿತ್ತು. ಇಲ್ಲವಾದಲ್ಲಿ ಕೆಲವೇ ನಿಮಿಷಗಳಲ್ಲಿ ಆಕೆಯ ಸಾಯಬೇಕಾದ ಪರಿಸ್ಥಿತಿಯಿದ್ದುದರಿಂದ ಆಕೆಯನ್ನು ಬಿಟ್ಟೋಡುವಂತಿರಲಿಲ್ಲ’’ ಎಂದು ವೈದ್ಯ ರಾಮ್ ಪ್ರಸಾದ್ ವಿವರಿಸುತ್ತಾರೆ.

‘‘ಸುತ್ತಲೂ ಭೂಕಂಪದಿಂದಾಗಿ ಸಾವಿನ ಆಕ್ರಂದನ ಮುಗಿಲು ಮುಟ್ಟಿದ್ದರೆ ರೋಗಿಯ ಜೀವವೊಂದು ನನ್ನ ಕೈಯಲ್ಲಿತ್ತು’’ ಎಂದವರು ಹೇಳುತ್ತಾರೆ. ಕೊನೆಗೂ ಶಸ್ತ್ರಕ್ರಿಯೆ ಯಶಸ್ವಿಯಾಗಿತ್ತು. ಪ್ರತ್ಯೇಕ ಪ್ರಕರಣವೊಂದರಲ್ಲಿ, ಭೂಕಂಪ ಸಂಭವಿಸಿದ ಆರು ತಾಸುಗಳ ಬಳಿಕವೂ ಈ ವೈದ್ಯರು ಅದೇ ಶಸ್ತ್ರಕ್ರಿಯೆ ಟೇಬಲ್ ಮೇಲೆ ಜೀವನ್ಮರಣ ಸ್ಥಿತಿಯಲ್ಲಿದ್ದ ಗರ್ಭಿಣಿ ಮಹಿಳೆಯೊಬ್ಬಳ ಪ್ರಾಣ ಉಳಿಸಿದ್ದಾರೆ. ‘‘ಆಕೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾಳೆ. ಪ್ರಕೃತಿಯ ನಿಯಮಗಳನ್ನು ಭೇದಿಸಲಾಗದು’’ ಎಂದವರು ಅಭಿಪ್ರಾಯಿಸಿದ್ದಾರೆ. ನೇಪಾಳದ ಅತಿದೊಡ್ಡ ಹಾಗೂ ದಟ್ಟಣೆಯ 415 ಹಾಸಿಗೆಗಳ ಹೆರಿಗೆ ಆಸ್ಪತ್ರೆಯಲ್ಲಿ ಎಪ್ರಿಲ್ 25ರಿಂದ 29ರ ನಡುವೆ 185 ಶಿಶುಗಳು ಜನಿಸಿರುವುದನ್ನು ದಾಖಲೆಗಳು ತಿಳಿಸುತ್ತವೆ.

ರಾಮ್‌ಪ್ರಸಾದ್ ಅವರು ತನ್ನ ವೃತ್ತಿಧರ್ಮ, ಕರ್ತವ್ಯಪರತೆ ಹಾಗೂ ಬದ್ಧತೆಯನ್ನು ಮೆರೆದು ಎಲ್ಲ ವೈದ್ಯರಿಗೂ ಒಂದು ಆದರ್ಶವಾಗಿದ್ದಾರೆ ಎಂದು ‘ಪ್ರಸೂತಿ ಗೃಹ’ದ ನಿರ್ದೇಶಕ ಡಾ. ಜೋಗೇಶ್ವರ್ ಗೌತಮ್(52) ಅಭಿಪ್ರಾಯಿಸುತ್ತಾರೆ.

Write A Comment