ರಾಷ್ಟ್ರೀಯ

ಎಲ್‌ಟಿಟಿಇ ಉಗ್ರರ ಸೆಣಸಾಟದ ಬಿಂಬಗಳು

Pinterest LinkedIn Tumblr

psmec14RajivGandhi5

ದೇಶದ ಜನರ ಮನಕಲುಕಿದ ದುರಂತ ಪ್ರಕರಣಗಳಲ್ಲಿ ರಾಜೀವ್‌ ಗಾಂಧಿ ಹತ್ಯೆ ಪ್ರಮುಖವಾದದ್ದು.

ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ಕಾಂಗ್ರೆಸ್‌ನ ಚುಕ್ಕಾಣಿ ಹಿಡಿದು ನಂತರ ಪ್ರಧಾನಿಯೂ ಆದರು. 1987 ಶ್ರೀಲಂಕಾಕ್ಕೆ ಶಾಂತಿ ಸೇನೆ ಕಳಿಸುವುದರ ಮೂಲಕ ಉಗ್ರ ಸಂಘಟನೆ ಎಲ್‌ಟಿಟಿಇ ಕೆಂಗಣ್ಣಿಗೆ ಗುರಿಯಾದರು. ರಾಜೀವ್‌ ಅವರ ಈ ರಾಜಕೀಯ ನಡೆಯೇ 1991ರಲ್ಲಿ ಅವರ ಪ್ರಾಣಕ್ಕೆ ಎರವಾಯಿತು.

ರಾಜೀವ್‌ ಗಾಂಧಿ ಸಾವಿನ ಕಹಿ ನೆನಪು..
1991ರ ಮೇ ತಿಂಗಳಲ್ಲಿ ರಾಜೀವ್‌ ಗಾಂಧಿ ಮುಂಬರುವ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ಮೇ 21ರಂದು ವಿಶಾಖಪಟ್ಟಣದಲ್ಲಿ ಯಶಸ್ವಿ ಪ್ರಚಾರಸಭೆಯನ್ನು ಮುಗಿಸಿದ ರಾಜೀವ್‌ ತಮಿಳು ನಾಡಿನ ಶ್ರೀಪೆರಂಬದೂರ್‌ಗೆ ತೆರಳಿದರು. ಅಲ್ಲಿ ಪ್ರಚಾರ ಸಭೆಗೆ ನಿಗದಿತವಾಗಿದ್ದ ಸ್ಥಳಕ್ಕೆ ತಲುಪಿ ಕಾರಿನಿಂದ ಇಳಿದು ವೇದಿಕೆಯತ್ತ ಸಾಗುತ್ತಿದ್ದಂತೆಯೇ ಪಕ್ಷದ ಕಾರ್ಯರ್ತರು ಮತ್ತು ಶಾಲಾ ಮಕ್ಕಳು ಹೂವಿನ ಹಾರ ಹಾಕುವುದರ ಮೂಲಕ ಅವರನ್ನು ಸ್ವಾಗತಿಸಿದರು.

ಹೀಗೆ ಅವರನ್ನು ಮಾಲೆ ಹಾಕಿ ಸ್ವಾಗತಿಸುತ್ತಿದ್ದವರ ನಡುವೆಯೇ ಧನು ಎಂಬ ಎಲ್‌ಟಿಟಿಇ ಸಂಘಟನೆ ಕಾರ್ಯಕರ್ತೆ ಮೃತ್ಯುರೂಪದಲ್ಲಿ ತನಗಾಗಿ ಕಾಯುತ್ತಿದ್ದಾಳೆ ಎಂಬ ಸಣ್ಣ ಸುಳಿಯೂ ಅವರಿಗಿರಲಿಲ್ಲ.

ರಾಜೀವ್‌ ಗಾಂಧಿಯನ್ನು ಹತ್ಯೆಗೈಯಲು  ಎಲ್‌ಟಿಟಿಇ ಕರಾರುವಕ್ಕಾಗಿ ಸಂಚು ರೂಪಿಸಿತ್ತು. ಆ ಸಂಚಿನ ಭಾಗವಾಗಿದ್ದ ಧನು ತನ್ನ ಬಟ್ಟೆಯ ಒಳಗೆ ಆರ್‌ಡಿಎಕ್ಸ್‌ ಸ್ಫೋಟಕವನ್ನು ಅಡಗಿಸಿಟ್ಟುಕೊಂಡಿದ್ದಳು.

ರಾಜೀವ್‌ ಹತ್ಯೆಯ ಸಂಚುಕೋರರನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಕರ್ನಾಟಕ ಪೊಲೀಸರ ಶ್ರಮಕ್ಕೆ ದೇಶದಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಬೆಂಗಳೂರಿನ ಪೊಲೀಸ್‌ ಆಯುಕ್ತ ಆರ್‌. ರಾಮಲಿಂಗಂ, ಉಪ ಪೊಲೀಸ್ ಆಯುಕ್ತ ಕೆಂಪಯ್ಯ, ಸಹಾಯಕ ಪೊಲೀಸ್‌ ಆಯುಕ್ತ ಅಶ್ವತ್ಥರಾಮಯ್ಯ, ಕೇಂದ್ರ ಕಚೇರಿ ಉಪ ಪೊಲೀಸ್‌ ಆಯುಕ್ತ ಶಂಕರ ಬಿದರಿ ಹಾಗು ನಗರದ ಬನಶಂಕರಿ ಪೊಲೀಸ್ ಠಾಣೆ ಸಬ್‌ ಇನ್‌ಸ್ಟೆಕ್ಟರ್‌ ನರಸಿಂಹಮೂರ್ತಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

ರಾಜೀವ್‌ ಗಾಂಧಿ ಹತ್ತಿರ ಬರುತ್ತಿದ್ದಂತೆಯೇ ಅವರ ಕಾಲು ಮುಟ್ಟಿ ನಮಸ್ಕರಿಸಿದ ಧನು ತನ್ನ ದೇಹಕ್ಕಂಟಿದ್ದ ಸ್ಪೋಟಕವನ್ನು ಸ್ಫೋಟಿಸಿದಳು. ಕ್ಷಣಾರ್ಧದಲ್ಲಿ ಭಾರತದ ಪ್ರಧಾನಿ ರಾಜೀವ್‌ ಗಾಂಧಿ ಅವರ ದೇಹ ಛಿದ್ರವಾಗಿ ಹೋಗಿತ್ತು. ಅವರೊಟ್ಟಿಗೆ 14 ಸಾರ್ವಜನಿಕರೂ ದಾರುಣವಾಗಿ ಸಾವನ್ನಪ್ಪಿದರು. ಈ ಘಟನೆ ನಡೆದಾಗ ಬೆಳಗಿನ 10.21 ನಿಮಿಷ. ಈ ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಈ ಘಟನೆಯ ನಂತರ ‘ಮಾನವ ಬಾಂಬ್‌ದಾಳಿ’ ಎನ್ನುವ ಪರಿಕಲ್ಪನೆ ಉಗ್ರಗಾಮಿ ಸಂಘಟನೆಗಳ ಪ್ರಮುಖ ಅಸ್ತ್ರವಾಗಿ ಹೋಯಿತು.

ಉಗ್ರರೊಡನೆ ಕಾಳಗ
ರಾಜೀವ್‌ ಹತ್ಯೆಗೈದ ಉಗ್ರರ ತಂಡ ಪೊಲೀಸರಿಂದ ತಲೆಮರೆಸಿಕೊಳ್ಳಲು ಆಯ್ದುಕೊಂಡ ಜಾಗ ಬೆಂಗಳೂರು ನಗರದ ಹೊರವಲಯದಲ್ಲಿದ್ದ ಕೋಣನಕುಂಟೆ. ಇದರ ಸುಳಿವನ್ನು ಬೆನ್ನಟ್ಟಿದ ಪೊಲೀಸರು ಹತ್ಯೆ ನಡೆದ ಮೂರು ತಿಂಗಳ ತರುವಾಯ ಎನ್‌ಎಸ್‌ಜಿ (ನ್ಯಾಷನಲ್‌ ಸೆಕ್ಯೂರಿಟಿ ಗಾರ್ಡ್‌) ಸಹಾಯದೊಂದಿಗೆ ಕೋಣನಕುಂಟೆಯಲ್ಲಿ ಉಗ್ರರು ಶಿವರಸನ್‌ ನೇತೃತ್ವದಲ್ಲಿ ಅಡಗಿದ್ದ  ಮನೆಯನ್ನು ಪತ್ತೆಹಚ್ಚಿ ಸುತ್ತುವರಿದರು.

ಪೊಲೀಸರ ಅತಿಥಿಗಳಾಗುವ ಸೂಚನೆ ಸಿಕ್ಕಿದ್ದೇ ಉಗ್ರರು ಗುಂಡಿನ ಚಕಮಕಿಗಿಳಿದರು. ಭದ್ರತಾ ಸಿಬ್ಬಂದಿ ಮತ್ತು ಉಗ್ರರ ನಡುವೆ 36 ಗಂಟೆಗಳ ಗುಂಡಿನ ಕಾಳಗ ನಡೆಯಿತು.
ಕೊನೆಗೂ ಜೀವಂತವಾಗಿ ಉಗ್ರರನ್ನು ಸೆರೆಹಿಡಿಯಲು ಸಾಧ್ಯವಾಗಲಿಲ್ಲ. ಆಗಸ್ಟ್‌ 20ರಂದು 36 ಗಂಟೆಗಳ ಅಹರ್ನಿಶಿ ಕಾಳಗದ ನಂತರ ಮನೆಯನ್ನು ಪ್ರವೇಶಿಸಿದ ಪೊಲೀಸರಿಗೆ ದೊರಕಿದ್ದು ರಾಜೀವ್‌ ಹತ್ಯೆಯ ಸಂಚುಕೋರರಾದ ಶಿವರಸನ್‌ ಮತ್ತು ಶುಭಾ ಸೇರಿದಂತೆ ಏಳು ಜನ ಎಲ್‌ಟಿಟಿಇ ಉಗ್ರರ ಶವಗಳು ಮಾತ್ರ.

ಆತ್ಮಹತ್ಯೆಗೆ ಶರಣಾದ ಉಗ್ರರು
ಎಲ್ಲ ಏಳು ಮಂದಿ ಉಗ್ರರೂ ಆತ್ಯಹತ್ಯೆ ಮಾಡಿಕೊಂಡಿದ್ದರು. ಶಿವರಸನ್‌ ಸೈನೈಡ್‌ ಕ್ಯಾಪ್ಸೂಲ್‌ ತಿಂದು ಜತೆಗೆ ತಲೆಯ ಬಲಭಾಗಕ್ಕೆ ಎ.ಕೆ. 47 ರೈಫಲ್‌ನಿಂದ ಗುಂಡು ಹಾರಿಸಿಕೊಂಡಿದ್ದ. ರಕ್ತದ ಮಡುವಿನಲ್ಲಿ ಅವನ ದೇಹ ಬಿದ್ದಿತ್ತು. ಶುಭಾ ಜೊತೆಗೆ ಮತ್ತೊಬ್ಬ ಮಹಿಳೆ ಹಾಗೂ ಉಳಿದ ನಾಲ್ಕು ಮಂದಿ ಉಗ್ರಗಾಮಿಗಳು  ಸೈನೈಡ್ ಸೇವಿಸಿ ಜೀವ ಕಳೆದುಕೊಂಡಿದ್ದರು.

ಪ್ರತ್ಯಕ್ಷ ವರದಿ ಹೀಗಿತ್ತು…
ಕಾರ್ಯಾಚರಣೆಯ ಕೊನೆಯ ಕ್ಷಣಗಳ ಬಗ್ಗೆ ದಿನಾಂಕ 21 ಆಗಸ್ಟ್‌ 1991ರ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರತ್ಯಕ್ಷ ವರದಿ ಪ್ರಕಟವಾಗಿತ್ತು. ಅದರ ಆಯ್ದ ಭಾಗಗಳು ಹೀಗಿವೆ.
ವೇಳೆ ಆರುಗಂಟೆ ಸಮೀಪಿಸುತ್ತಿತ್ತು. ಬೆಳಕು ಸ್ಪಷ್ಟವಾಗಿ ಹರಿದು ಚಳಿಯನ್ನು ಹಿಮ್ಮೆಟ್ಟಿಸಲು ಸೆಣಸುತ್ತಿತ್ತು. ಹೌದು. ಅದು ಯುವಕರ ತಂಡ. ವಿಭಿನ್ನ ಬಣ್ಣಗಳ ಟಿ ಷರ್ಟ್‌ ತೊಟ್ಟು ಸ್ಟೆನ್‌ಗನ್‌ ಹಿಡಿದು, ಹಸಿರು ಬಣ್ಣದ ಗುಂಡು ನಿರೋಧಕ ಮೇಲುಡುಗೆ ಧರಿಸಿ ದಾಳಿ ನೆಲೆಯತ್ತ ಮುಂದೇನಾಗುವುದು ಎಂಬ ಅರಿವಿಲ್ಲದೇ ಸಾಗುತ್ತಿತ್ತು.

ಇದೇ ವೇಳೆಯಲ್ಲಿ ಹಂತಕರು ಪರಾರಿಯಾಗಬಹುದಾದ ಮಾರ್ಗದುದ್ದಕ್ಕೂ ಶಸ್ತ್ರಸಜ್ಜಿತ ನ್ಯಾಷನಲ್‌ ಸೆಕ್ಯುರಿಟಿ ಗಾರ್ಡ್‌ಗಳು ದಿಬ್ಬದ ಸ್ಥಳ ಆವರಿಸಿ ಮುಖ ಕೆಳಗೆ ಮಾಡಿ ಮಲಗಿ ಸಮರ ಭೂಮಿಯ ನೆನಪು ತಂದುಕೊಟ್ಟರು.

ಯಾವ ಭೀತಿಯನ್ನೂ ತೋರದ ನಾಲ್ವರು ಕಮಾಂಡೋಗಳು ನೆಲೆಯ ಮಗ್ಗುಲಿನ ಮನೆ ಏರಿದರು. ಅದುವರೆಗೂ ದಾಳಿ ನೆಲೆಯ ಮಾಳಿಗೆ ಬಾಗಿಲಿನತ್ತ ಗುರಿಯಿಟ್ಟು ಕಲ್ಲಾಗಿ ಕುಳಿತ್ತಿದ್ದ ಕೆಎಸ್‌ಆರ್‌ಪಿ ಶಸ್ತ್ರಧಾರಿಗಳು ಹಿಂದೆ ಸರಿದು ಕಮಾಂಡೋಗಳಿಗೆ ಜವಾಬ್ದಾರಿ ವಹಿಸಿ ವಾಪಾಸಾದರು. ಮಾಳಿಗೆ ಮೇಲಿದ್ದ ತಂಡದ ನಾಯಕ ಕ್ಯಾಪ್ಟನ್‌ ರವಿ ದಾಳಿ ನೆಲೆಯ ಮಾಳಿಗೆ ಮೆಟ್ಟಿಲು ದ್ವಾರಕ್ಕೆ ಪ್ಲಾಸ್ಟಿಕ್‌ ಸ್ಫೋಟಕ ಹಚ್ಚಿ ಪಕ್ಕದಲ್ಲೇ ಗೋಡೆಗೆ ಒರಗಿ ನಿಂತರು.
ಕ್ಷಣದಲ್ಲೇ ಭಾರಿ ಶಬ್ದ –ಬೆಂಕಿಯೊಟ್ಟಿಗೆ ಮರದ ಬಾಗಿಲು ಸ್ಫೋಟಿಸಿ ದಟ್ಟ ಹೊಗೆ ಎಬ್ಬಿಸಿತು..
ತಕ್ಷಣವೇ ಸ್ಟೆನ್‌ಗನ್‌ ಹಿಡಿದು ಹೊಗೆಯಲ್ಲಿ ಸಾವಿನ ಕೂಪಕ್ಕೆ ನುಸುಳಿದ ರವಿ ಗನ್‌ನಿಂದ ನಾಲ್ಕಾರು ಗುಂಡು ಸಿಡಿದು ಮೌನತಾಳಿತು.

ಸೂರ್ಯ ಉದಯಿಸಿದ ಸ್ವಲ್ಪ ಹೊತ್ತಿನಲ್ಲಿಯೇ ನಗರದ ಹೊರವಲಯದ ಕೋಣನ ಕುಂಟೆ ಎಲ್‌ಟಿಟಿಇ ನೆಲೆಯಲ್ಲ ಶಿವರಸನ್‌ ಮತ್ತು ಇತರರ ಶವಗಳು ಪತ್ತೆಯಾಗುತ್ತಿದ್ದಂತೆಯೇ 36 ಗಂಟೆಗಳ ರುದ್ರ ನಾಟಕಕ್ಕೆ ತೆರೆ ಬಿತ್ತು.

Write A Comment