ಹೈದರಾಬಾದ್, ಏ.8: ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದ ವೇಳೆ ಎನ್‌ಕೌಂಟರ್‌ನಲ್ಲಿ ಹತರಾದ ನಿಷೇಧಿತ ಸಿಮಿ ಸಂಘಟನೆಯ ಉಗ್ರರ ಶವವನ್ನು ಪಡೆಯಲು ಕುಟುಂಬದ ಸದಸ್ಯರು ನಿರಾಕರಿಸಿದ್ದಾರೆ. ಇಬ್ಬರು ಉಗ್ರರ ಮೃತದೇಹಗಳನ್ನು ಕುಟುಂಬದ ಸದಸ್ಯರು ಪಡೆದರೆ ಉಳಿದ ಮೂರು ಕುಟುಂಬಗಳು ದೇಹಗಳನ್ನು ಪಡೆಯುವುದಿಲ್ಲ ಎಂದು ಪೊಲೀಸರಿಗೆ ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಹೈದರಾಬಾದ್‌ಗೆ ವಿಚಾರಣೆಗೆಂದು ಕರೆದೊಯ್ಯುವ ವೇಳೆ ನಲಗೊಂಡ ರಾಷ್ಟ್ರೀಯ ಹೆದ್ದಾರಿ ಬಳಿ ಐವರು ಶಂಕಿತ ಉಗ್ರರು ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿದ್ದರು.
ಇದರಲ್ಲಿ ಅಜಾಜುದ್ದೀನ್ ಕುಟುಂಬದವರು ಮಾತ್ರ ಮೃತ ದೇಹವನ್ನು ಪಡೆದು ವಿಧಿ-ವಿಧಾನಗಳಂತೆ ಅಂತ್ಯಸಂಸ್ಕಾರ ನಡೆಸಿದ್ದಾರೆ. ಇನ್ನು ಜಾಕಿರ್-ತೆಹರಿಕ್-ಗುಲಾಬ್-ಇ ಸಂಘಟನೆಯ ವಿಕಾರುದ್ದೀನ್ ಮೃತದೇಹವನ್ನು ಅವರ ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ. ಉಳಿದ ಮೂವರು ಉಗ್ರರಾದ ಮಹಮ್ಮದ್ ಹನೀಫ್, ಸುಲೇಮಾನ್ ಮತ್ತು ಮಹಮ್ಮದ್ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲು ಪೊಲೀಸರು ಮುಂದಾದರೂ ಪಡೆಯಲು ನಿರಾಕರಿಸಿದ್ದಾರೆ.
ಮಧ್ಯಪ್ರದೇಶದವರಾದ ಅಜಾಜುದ್ದೀನ್ ದೇಹವನ್ನು ಪೊಲೀಸರು ಪಂಚನಾಮೆ ನಡೆಸಿ ಅವರ ತಂದೆಗೆ ಹಸ್ತಾಂತರ ಮಾಡಿದರು. ತಂದೆ ಅಸ್ಲಂ ಮಧ್ಯಪ್ರದೇಶ ಪೊಲೀಸರ ಮೂಲಕ ಪತ್ರ ನೀಡಿ ಮಗನ ದೇಹವನ್ನು ಪಡೆದರು. ಆದರೆ, ದೇಹವನ್ನು ಹುಟ್ಟೂರಿಗೆ ಕೊಂಡೊಯ್ಯಲು ಪೊಲೀಸರು ಅವಕಾಶ ನೀಡಲಿಲ್ಲ. ಪಂಚನಾಮೆ ನಡೆಸಿದ ಬಳಿಕ ವಾರಂಗಲ್ ಸಮೀಪದ ನರ್ಕೆಟ್‌ಪಲ್ಲಿ ಎಂಬ ಬಳಿ ಮುಸ್ಲಿಂ ಧರ್ಮದ ಪ್ರಕಾರ ವಿಧಿ-ವಿಧಾನಗಳನ್ನು ನಡೆಸಲಾಯಿತು. ನಿನ್ನೆ ವಾರಂಗಲ್‌ನಿಂದ ಹೈದರಾಬಾದ್‌ಗೆ ಕರೆದೊಯ್ಯುತ್ತಿದ್ದ ವೇಳೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಜಾನಗಮ್ ಗ್ರಾಮದ ಬಳಿ ಎನ್‌ಕೌಂಟರ್ ನಡೆದು ಐವರು ಉಗ್ರರು ಹತರಾಗಿದ್ದರು.
