ರಾಷ್ಟ್ರೀಯ

ತೆಲಂಗಾಣ : ಎನ್‌ಕೌಂಟರ್ ನಲ್ಲಿ ಐವರು ಸಿಮಿ ಉಗ್ರರು ಹತ್ಯೆ

Pinterest LinkedIn Tumblr

Killeed

ಹೈದ್ರಾಬಾದ್, ಏ.7: ವಿಭಜಿತ ಆಂಧ್ರದಲ್ಲಿ 20 ಮಂದಿ ರಕ್ತಚಂದನ ಕಳ್ಳಸಾಗಣೆದಾರರ ಭಾರೀ ಎನ್‌ಕೌಂಟರ್ ನಡೆದ ಬೆನ್ನಲ್ಲೆ ತೆಲಂಗಾಣದ ವಾರಂಗಲ್‌ನಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಐವರು ಶಂಕಿತ ಸಿಮಿ ಉಗ್ರರನ್ನು ಹೊಡೆದುರುಳಿಸಿದ್ದಾರೆ.

ವಾರದಲ್ಲಿ ಎರಡನೆಯದು: ತೆಲಂಗಾಣದ ವಾರಂಗಲ್ ಕಾರಾಗೃಹದಲ್ಲಿದ್ದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯ ಐವರು ಉಗ್ರರನ್ನು ಇಂದು ಹೈದ್ರಾಬಾದ್ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದ ವೇಳೆ ಪೊಲೀಸರು ಗುಂಡು ಹಾರಿಸಿ ಐವರನ್ನೂ ಹತ್ಯೆ ಮಾಡಿದ್ದಾರೆ.

ಗುಂಡಿಗೆ ಬಲಿಯಾದ ಉಗ್ರರನ್ನು ವಿಕಾರ್ ಉದ್ದೀನ್, ಸುಲೈಮಾನ್, ಮೊಹಮದ್ ಜಾಕೀರ್, ಮೊಹಮದ್ ಹನೀಫ್ ಹಾಗೂ ಇರ್ಫಾನ್‌ಖಾನ್ ಎಂದು ಗುರುತಿಸಲಾಗಿದ್ದು, ಇವರು ಪೊಲೀಸರ ಮೇಲೆ ಹಲ್ಲೆಗೂ ಯತ್ನಿಸಿದ್ದರು.

ಇವರು 2007ರಿಂದ ಉಗ್ರಗಾಮಿ ಸಂಬಂಧಿ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಇತ್ತೀಚೆಗೆ ಪ್ರಧಾನಿ ನರೇಂದ್ರಮೋದಿ ಅವರ ಹತ್ಯೆಗೂ ಈ ಉಗ್ರರು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯಾಗಿರುವ ಈ ಐದೂ ಮಂದಿ ಪಾಕಿಸ್ಥಾನದ ಐಎಸ್‌ಐ ಸಂಘಟನೆಯ ಸಂಪರ್ಕದಲ್ಲಿದ್ದು, ದೇಶದಾದ್ಯಂತ ಹಲವು ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಂಚಿನ ರೂವಾರಿಗಳಾಗಿದ್ದರು.

ಪೊಲೀಸರ ಮೇಲೆ ಹಲ್ಲೆ ನಡೆಸಿ ಅವರ ಬಂದೂಕುಗಳನ್ನು ಕಿತ್ತುಕೊಂಡು ಪರಾರಿಯಾಗಲು ಈ ಉಗ್ರರು ಪ್ರಯತ್ನಿಸಿದ್ದರು. ವಾರಂಗಲ್-ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಏ.4ರಿಂದೀಚೆಗೆ ಇದು ಎರಡನೆ ಘಟನೆಯಾಗಿದೆ. 4ರಂದು ನಲ್ಲೊಂಡ ಜಿಲ್ಲೆಯಲ್ಲಿ ಪೊಲೀಸರು ಎನ್‌ಕೌಂಟರ್ ನಡೆಸಿ ಮೊಹಮದ್ ಇಜಾಜುದ್ದೀನ್ ಮತ್ತು ಮೊಹಮದ್ ಅಸ್ಲಾಂ ಎಂಬಿಬ್ಬರು ಉಗ್ರರನ್ನು ಕೊಂದುಹಾಕಿದ್ದರು. ಅವರೂ ಕೂಡ ಸಿಮಿ ಸಂಘಟನೆಯ ಸದಸ್ಯರೇ. 2013ರಲ್ಲಿ ಮಧ್ಯ ಪ್ರದೇಶದ ಖಾಂಡ್ವಾ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದ ಐವರು ಸಿಮಿ ಉಗ್ರರಲ್ಲಿ ಇವರಿಬ್ಬರು. ಈ ಉಗ್ರರು ಉತ್ತರ ಪ್ರದೇಶದ ಬಿಜನೋರ್ ಹಾಗೂ ಪುಣೆ ಸ್ಫೋಟಗಳಲ್ಲಿ ಪಾತ್ರ ವಹಿಸಿದ್ದರು. ಅಲ್ಲದೆ, ದೇಶದ ಹಲವೆಡೆ ಇನ್ನೂ ಹಲವು ಸ್ಫೋಟಗಳನ್ನೂ ಇವರು ನಡೆಸಿದ್ದರು.

Write A Comment