ರಾಷ್ಟ್ರೀಯ

ಔತಣ ಕೂಟದಲ್ಲಿ ಭಾಗವಹಿಸಲು ಜೋಸೆಫ್ ನಿರಾಕರಣೆ

Pinterest LinkedIn Tumblr

jose

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನ್ಯಾಯಮೂರ್ತಿಗಳಿಗಾಗಿ ಆಯೋಜಿಸಿರುವ ಈಸ್ಟರ್‌ ಔತಣ ಕೂಟದಲ್ಲಿ ಭಾಗವಹಿಸಲು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಕುರಿಯನ್‌ ಜೋಸೆಫ್‌ ನಿರಾಕರಿಸಿದ್ದಾರೆ.

ಈ ಕುರಿತು ಪ್ರಧಾನಿ ಅವರಿಗೆ ಪತ್ರ ಬರೆದಿರುವ ಜೋಸೆಫ್ ಅವರು, ಔತಣ ಕೂಟಕ್ಕೆ ನನ್ನನ್ನು ಆಹ್ವಾನಿಸಿರುವುದಕ್ಕೆ ಆಭಾರಿಯಾಗಿದ್ದೇನೆ. ಆದರೆ, ಗುಡ್ ಫ್ರೈಡೆ ಮತ್ತು ಈಸ್ಟರ್ ಹಬ್ಬವನ್ನು ಕುಟುಂಬದ ಜತೆ ಆಚರಿಸುವ ಉದ್ದೇಶದಿಂದ ನಾನು ಕೇರಳಕ್ಕೆ ಬಂದಿದ್ದೇನೆ. ಹೀಗಾಗಿ, ಈ ಔತಣ ಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಪೂರ್ವನಿಗದಿಯಾಗಿರುವ ಈ ಔತಣ ಕೂಟದ ದಿನಾಂಕವನ್ನು ಈಗ ಬದಲಿಸಲು ಸಾಧ್ಯವಿಲ್ಲ ಎನ್ನುವುದು ಗೊತ್ತು. ಆದರೆ, ದೇಶದ ಪ್ರಧಾನಿಯಾದ ತಾವು, ಇಂಥ ಸಮಾರಂಭಗಳನ್ನು ಆಯೋಜಿಸುವಾಗ ರಾಷ್ಟ್ರೀಯ ರಜಾ ದಿನ, ಧಾರ್ಮಿಕ ಸೂಕ್ಷ್ಮತೆಗಳನ್ನೂ ಪರಿಗಣಿಸಬೇಕು. ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡಬೇಕು ಎಂದು ಜೋಸೆಫ್ ಮನವಿ ಮಾಡಿದ್ದಾರೆ.

ವಿವರ: ರಾಜಧಾನಿಯಲ್ಲಿ ‘ಶುಭ ಶುಕ್ರವಾರ’ದಂದು ಆರಂಭವಾದ ಮೂರು ದಿನಗಳ(ಏಪ್ರಿಲ್‌ 3ರಿಂದ 5ರವರೆಗೆ) ದೇಶದ 24 ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ  ಸಮಾವೇಶದ ಬಗ್ಗೆ ಕುರಿಯನ್‌ ಜೋಸೆಫ್‌ ಶುಕ್ರವಾರ ಆಕ್ಷೇಪ ವ್ಯಕ್ತಪಡಿಸಿದ್ದರು. ‘ಕ್ರೈಸ್ತರಿಗೆ ಅತ್ಯಂತ ಪವಿತ್ರ ಹಬ್ಬವಾದ ಶುಭ ಶುಕ್ರವಾರ ಮತ್ತು ಈಸ್ಟರ್‌ ಅವಧಿಯಲ್ಲಿ ಈ ಸಮಾವೇಶ ನಡೆಸುವ ಅಗತ್ಯವೇನಿತ್ತು? ಎಂದು ಪ್ರಶ್ನಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಅವರು, ಪ್ರಧಾನಿಯವರ ಔತಣ ಆಹ್ವಾನ ನಿರಾಕರಿಸಿದ್ದಾರೆ.

ಸುಪ್ರೀಂ­ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌ ದತ್ತು ಅವರಿಗೂ ಈ ಕುರಿತು ಪತ್ರ ಬರೆದು ಕುರಿಯನ್ ತಮ್ಮ ಅಸಮಾಧಾನ ಹೊರ ಹಾಕಿದ್ದರು. ‘ಇಂತಹ ಮಹತ್ವದ ಸಭೆ, ಸಮಾ­ರಂಭಗಳನ್ನು ದೀಪಾವಳಿ, ದಸರಾ, ಹೋಳಿ, ಈದ್‌ ಸಂದರ್ಭದಲ್ಲಿ ಯಾಕೆ ಹಮ್ಮಿಕೊಳ್ಳುವುದಿಲ್ಲ’ ಎಂದು ಪ್ರಶ್ನಿಸಿದ್ದರು.

‘ಕುರಿಯನ್‌ ಅವರು ಎತ್ತಿದ್ದ ಈ ಪ್ರಶ್ನೆಯಲ್ಲಿ ಸಾಮೂಹಿಕ ಅಥವಾ ಸಂಸ್ಥೆಯ ಹಿತಾಸಕ್ತಿ ಇದೆಯೋ ಅಥವಾ ಯಾವುದಾದರೂ ವೈಯಕ್ತಿಕ ಹಿತಾಸಕ್ತಿ ಅಡಗಿದೆಯೋ’ ಎಂದು ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌. ದತ್ತು ತಿರುಗೇಟು ನೀಡಿದ್ದರು.

Write A Comment