– ಭರತ್ ಮತ್ತು ಶಾಲನ್ ಸವೂರ್
ತುಂಬಾ ಹಿಂದೆಯೇ ವಿವೇಕಾನಂದರು ದುರಭಿಮಾನವನ್ನು (fanFanaticism – ಮತಾಂಧತೆ ಎಂಬ ಅರ್ಥವೂ ಇದೆ) ಮುಂದೊಮ್ಮೆ ರೋಗ ಎಂದು ಗುರುತಿಸಲಾಗುತ್ತದೆ ಎಂದಿದ್ದರು. ಇದೊಂದು ಮಾನಸಿಕ ಕಾಯಿಲೆ. ಇದಕ್ಕೆ ಅಂಟಿಕೊಳ್ಳಬೇಡಿ.
ದುರಭಿಮಾನ ಎಂಬುದು ಆಯ್ಕೆಗೆ ವಿರುದ್ಧವಾದದ್ದು. ಯಾವುದೇ ವಿಚಾರದಲ್ಲಿ ತನ್ನದೇ ಸರಿ ಎಂದು ವಾದಿಸುವವ ಮತ್ತೊಬ್ಬರಿಗೂ ಆಯ್ಕೆ ಇದೆ ಅಂದುಕೊಳ್ಳುವುದಿಲ್ಲ. ತಮಗೆ ಬೇಕಾದಂತೆ ಬದುಕುವ, ಯೋಚಿಸುವ ಸ್ವಾತಂತ್ರ್ಯ ಇನ್ನೊಬ್ಬರಿಗೂ ಇದೆ ಎಂದು ಭಾವಿಸುವುದಿಲ್ಲ. ಅದು ರೋಗಗ್ರಸ್ಥ ಮನಸ್ಸು ಮತ್ತು ಅಹಂಕಾರದ ಲಕ್ಷಣ. ನಿಮ್ಮ ಮನಸ್ಸು ಹಾಗೂ ಅಹಂಕಾರವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ಬದುಕು ಅದೆಷ್ಟು ಸುಂದರವಾಗಿ, ಶಾಂತಿಯುತವಾಗಿ ಇರುತ್ತದೆ ನೋಡಿ.
ನೀವು ಅಂದರೆ ಶ್ರೇಷ್ಠ ಆತ್ಮ. ಈ ಆತ್ಮ ಅಹಂಕಾರಕ್ಕಿಂತ ಮೇಲ್ಮಟ್ಟದಲ್ಲಿ ಇರುತ್ತದೆ. ಇತರೆಲ್ಲ ಆತ್ಮದ ಜತೆ ಸಂಬಂಧ ಹೊಂದಿರುತ್ತದೆ. ಸಂತರು ಹೇಳುತ್ತಾರೆ ಆತ್ಮ ಅಂದರೆ ಮಹಾಸಾಗರ ಇದ್ದಂತೆ. ಈ ಆತ್ಮದ ಸಾಗರ ಕೆಳ ಮಟ್ಟದಲ್ಲಿ ಇರುವುದರಿಂದ ಪ್ರತಿಯೊಂದು ನದಿ, ಉಪನದಿ, ತೊರೆ ಇದರೊಳಗೆ ಬಂದು ಸೇರುತ್ತವೆ. ಆತ್ಮವೆಂಬ ಈ ಮಹಾಸಾಗರ ‘ನಾನು ಸರಿ, ನೀನು ತಪ್ಪು’ ಎಂದೆಲ್ಲ ಹೇಳುವುದಿಲ್ಲ. ಇದೊಂದು ಎಲ್ಲವನ್ನೂ ಸ್ವೀಕರಿಸುವ ಕರುಣೆ, ಸಹಾನುಭೂತಿಯ ಸಾಗರ. ಮಹಾಸಾಗರಕ್ಕೆ ಎಲ್ಲವೂ ಬಂದು ಸೇರಿದಂತೆ ನಮ್ಮೊಳಗೂ ಎಲ್ಲವೂ ಸೇರಿಕೊಳ್ಳಬೇಕು.
ಮಹಾಸಾಗರಗಳು ಭೂಮಿಯ ಮೇಲಿನ ಅತಿ ಶಕ್ತಿಯುತವಾದ ಜೀವಮೂಲಗಳು. ನನ್ನ ಜೀವನದ ಅತ್ಯಂತ ಸಂತಸಕರವಾದ, ಸಂತೃಪ್ತಿ ಯಿಂದ ಕೂಡಿದ ಗಳಿಗೆಗಳು ನಾನು ಕೆಳಮಟ್ಟದಲ್ಲಿದ್ದಾಗ (ಸಮುದ್ರ ಮಟ್ಟದಲ್ಲಿ ಇದ್ದಾಗ), ನಿರಾಳವಾಗಿದ್ದಾಗ ದೊರಕಿವೆ. ಅಂತಹ ಸ್ಥಿತಿಯಲ್ಲಿ ನಾನು ನನ್ನದೇ ಶಕ್ತಿಯ ಹಂದರದಲ್ಲಿ ಆತ್ಮವಿಶ್ವಾಸದಿಂದ ಇದ್ದೆ. ನನ್ನ ಒಳಚೈತನ್ಯದ ಅರಿ ವನ್ನು ಅನುಭವಿಸುತ್ತಿದ್ದೆ. ಅಹಂಕಾರ ತ್ಯಜಿಸಿದಾಗ ಅಂತಹ ಅನುಭವ ನಿಮಗೂ ದಕ್ಕುತ್ತದೆ.
ನೀವು ನೋಡಲು ಚೆನ್ನಾಗಿದ್ದೀರಿ, ನಿಮ್ಮ ಕೆಲಸದಲ್ಲಿ ಪಳಗಿದ್ದೀರಿ ಎಂಬ ಕಾರಣಕ್ಕೆ ನೀವು ಇತರರಿಗಿಂತ ಶ್ರೇಷ್ಠರಾಗುವುದಿಲ್ಲ. ನಿಮ್ಮ ಹೃದಯ ವೈಶಾಲ್ಯದಿಂದ ಹಾಗೂ ಕೆಲಸದಲ್ಲಿ ನಿಪುಣರು ಎಂಬ ಕಾರಣಕ್ಕೆ ನೀವು ಶ್ರೇಷ್ಠರೆನಿಸಿಕೊಳ್ಳುತ್ತೀರಿ. ಲೇಖಕರೊಬ್ಬರ ಮೊದಲ ಪುಸ್ತಕ ಚೆನ್ನಾಗಿ ಮಾರಾಟವಾಯಿತು. ಆತ ವಿನಮ್ರವಾಗಿ ತನ್ನ ಓದುಗರು ಹಾಗೂ ದೇವರಿಗೆ ಧನ್ಯವಾದ ಅರ್ಪಿಸಿದ. ಮೊದಲ ಪುಸ್ತಕಕ್ಕೆ ಸಿಕ್ಕ ಪ್ರತಿಕ್ರಿಯೆ ಯಿಂದ ಉತ್ತೇಜಿತನಾದ ಆತ ಮತ್ತೊಂದು ಪುಸ್ತಕ ಬರೆದ. ಈ ಪುಸ್ತಕ ಎಷ್ಟು ಜನಪ್ರಿಯವಾಯಿತು ಎಂದರೆ ‘ಬೆಸ್ಟ್ ಸೆಲ್ಲರ್’ ಪುಸ್ತಕಗಳ ಪಟ್ಟಿಯಲ್ಲಿ ಸದಾ ಮೊದಲ ಸ್ಥಾನದಲ್ಲಿ ಇರುತ್ತಿತ್ತು.
ಮತ್ತೊಂದು ನಗರದಲ್ಲಿ ಉಪನ್ಯಾಸ ನೀಡಲು ಈ ಲೇಖಕನನ್ನು ಆಹ್ವಾನಿಸಲಾಯಿತು. ಅಲ್ಲಿಂದ ಪತ್ನಿಗೆ ದೂರವಾಣಿ ಕರೆ ಮಾಡಿದ ಆತ, ‘ಬೆಸ್ಟ್ ಸೆಲ್ಲರ್’ ಪಟ್ಟಿಯಲ್ಲಿ ನಾನು ಎಲ್ಲಿದ್ದೇನೆ ಎಂದು ಪ್ರಶ್ನಿಸಿದ. ನೀವಲ್ಲ, ನಿಮ್ಮ ಪುಸ್ತಕ ‘ಬೆಸ್ಟ್ ಸೆಲ್ಲರ್’ ಪಟ್ಟಿಯಲ್ಲಿದೆ ಎಂದು ಆಕೆ ಥಟ್ಟನೆ ಉತ್ತರಿಸಿದಳು. ಎಂತಹ ಎಚ್ಚರಿಕೆಯ ಮಾತು ಅದು. ಅಹಂಕಾರ ನಿಮಗೆ ವಿಚಿತ್ರವಾದ ಶಕ್ತಿಯನ್ನು ನೀಡುತ್ತದೆ. ಆದರೆ. ಅದು ನಿಜವಾದ ಶಕ್ತಿಯಲ್ಲ. ಅಹಂಕಾರ ನಿಮ್ಮನ್ನು ಎಲ್ಲರ ಅನುಮೋದನೆ ಹಾಗೂ ಪ್ರಶಂಸೆಗೆ ಕಾಯುವ ತೊರೆಯಾಗಿಸುತ್ತದೆ.
ನೀವು ಅದನ್ನೇ ಮಹಾಸಾಗರ ಅಂದುಕೊಳ್ಳುವಿರಿ. ಇಲ್ಲ, ಆತ್ಮ ಎಂಬುದು ಮಹಾಸಾಗರ. ಅದು ವಿಶಾಲವಾದದ್ದು, ಬೃಹತ್ತಾದದ್ದು, ಎಲ್ಲವನ್ನೂ ಸ್ವೀಕರಿಸುವಂತಹದ್ದು. ಎಲ್ಲ ವ್ಯಕ್ತಿಗಳಿಗೂ ಆಯ್ಕೆ ಎಂಬುದು ಮಹತ್ವದ್ದು. ನಮ್ಮ ಸಮಾಜ ಎಂಬುದು ಮರಗಳು, ಗಿಡಗಳು ಹಾಗೂ ಹೂಗಳು ತುಂಬಿದ ಒಂದು ತೋಟ. ಹೆಚ್ಚೆಚ್ಚು ವೈವಿಧ್ಯ ಇದ್ದಂತೆ ಈ ತೋಟ ಸುಂದರವಾಗಿ ಕಾಣುತ್ತದೆ. ಭಿನ್ನಾಭಿಪ್ರಾಯ ಗಳನ್ನು ಪ್ರೀತಿಯಿಂದ ಅಪ್ಪಿಕೊಳ್ಳಬೇಕು ಹೊರತು ತಿರಸ್ಕರಿಸಬಾರದು.
ಇತರರ ಮಾರ್ಗ ತಪ್ಪು ಎನ್ನುವ ಮೂಲಕ ನಾವು ಯಾವುದನ್ನೂ ಸರಿಯಾಗಿಸುವುದಿಲ್ಲ. ಏಕೆಂದರೆ ಸರಿ ಎಂಬುದೇ ಇಲ್ಲ. ನೀವು ಮಲ್ಲಿಗೆ ಹೂವನ್ನು ಸೂರ್ಯಕಾಂತಿಯ ತರಹ ಹಳದಿ ಹೂವಾಗಿಸಲು ಸಾಧ್ಯವಿಲ್ಲ. ಮಲ್ಲಿಗೆ ಯಾವಾಗಲೂ ಅಚ್ಚ ಬಿಳಿಯ ಬಣ್ಣದಲ್ಲಿ ಇರುತ್ತದೆ. ನಕಾರಾತ್ಮಕ ಭಾವನೆಯನ್ನು ತ್ಯಜಿಸಿದಾಗ ಬೃಹತ್ತಾದ, ವರ್ಣಮಯ ಜಗತ್ತಿನಲ್ಲಿ ಕಾಲಿಡುತ್ತೀರಿ.
ಬೇರೊಬ್ಬರಲ್ಲಿ ಭಿನ್ನವಾದದ್ದನ್ನು ನೋಡಿದಾಗ ಆ ಭಿನ್ನತೆಯನ್ನು ಮೃದುವಾದ ದೃಷ್ಟಿಕೋನದಿಂದ ನೋಡಿ. ಅದನ್ನು ನಿಮ್ಮ ತೋಳಿನಲ್ಲಿ ತೂಗಿ. ಅದನ್ನು ನಿಮ್ಮಿಂದ ದೂರ ತಳ್ಳಬೇಡಿ. ಆಹಾರವಿಲ್ಲದೇ ಯಾವುದೂ ಬದುಕುವುದಿಲ್ಲ. ದುರಭಿಮಾನವೂ ಇದಕ್ಕೆ ಹೊರತಲ್ಲ. ‘ಮತ್ತೊಬ್ಬರದ್ದು ತಪ್ಪು. ಅವರ ವಿಚಾರ ಸರಿಯಿಲ್ಲ’ ಇತ್ಯಾದಿ ಭಾವನೆಗಳನ್ನು ಬೆಳೆಸಿ ದುರಭಿಮಾನಕ್ಕೆ ಆಹಾರ ಹಾಕಬೇಡಿ. ಪ್ರೀತಿ ಹಾಗೂ ಮೃದುತ್ವದ ಆಹಾರ ನೀಡಿ.
ಮತ್ತೊಬ್ಬರ ಭಿನ್ನತೆ ಕುರಿತು ನಿಮ್ಮಲ್ಲಿ ‘ಕೋಪ’, ‘ಆಕ್ರೋಶ’ ಮೂಡಿದಲ್ಲಿ ಆ ಕೋಪವನ್ನು ತಡೆಯುವ ಶಕ್ತಿ ನಿಮಗಿದೆ. ‘ಒಂದು ನಿಮಿಷ ಕುಳಿತುಕೊಳ್ಳಿ. ಪ್ರೀತಿಯ ಮನಸ್ಸೇ ಎಲ್ಲವನ್ನೂ ಸ್ವೀಕರಿಸು, ಉದಾರಿಯಾಗಿರು’ ಎಂದು ಹೇಳಿಕೊಳ್ಳಿ. ಬೇರೊಬ್ಬರನ್ನು ಅವರ ಭಿನ್ನತೆಯ ಜತೆಗೆ ಪ್ರೀತಿಸುವುದು ನಿಮ್ಮೊಳಗಿನ ದೊಡ್ಡ ಶಕ್ತಿ ಅಂದುಕೊಳ್ಳಿ. ಈ ಶಕ್ತಿಯನ್ನು ನೀವು ಅರಿತು ಅದರ ಶ್ರೇಷ್ಠತೆಯನ್ನು ಅನುಭವಿಸಿದಾಗ ಸಂತಸ ನಿಮ್ಮೊಳಗೆ ಬೆಳಕಿನಂತೆ ಹೊಳೆಯುತ್ತದೆ.
‘ಧರ್ಮ’ ಎಂಬ ಶಬ್ದವನ್ನು ಹುಷಾರಾಗಿ ಬಳಸಿ. ಅದೊಂದು ಅತಿ ಕಟ್ಟುಪಾಡಿನ ನಿಯಮಗಳ ಕಂತೆಯಲ್ಲ. ಅದು ಬೇಷರತ್ ಪ್ರೀತಿಯ ಸಾಗರ. ಧರ್ಮ ಎಂಬುದು ಜೀವಂತವಾದದ್ದು. ಸುಂದರವಾದದ್ದು. ಸಿಟ್ಟು ಮತ್ತು ಮತಾಂಧತೆ ಧರ್ಮದ ಮೇಲೆ ಮುಸುಕು ಹಾಕುತ್ತವೆ. ನೀವು ಧರ್ಮವನ್ನು ಬೋಧಿಸಲು ಸಾಧ್ಯವಿಲ್ಲ. ಪರಿಶುದ್ಧ ಪ್ರೀತಿಯ ಮೂಲಕ ಧರ್ಮ ಮಾರ್ಗದಲ್ಲಿ ಬದುಕಬಹುದು. ಪ್ರೀತಿ ಎಂಬುದು ದೈವಿಕ ಶಕ್ತಿಯ ಪವಿತ್ರ ಚೈತನ್ಯ. ಈ ಚೈತನ್ಯ ನಿಮ್ಮೊಳಗಿನಿಂದ ಉಲ್ಲಾಸಮಯ ಶಕ್ತಿಯಾಗಿ, ಬದಲಾವಣೆ ತರುವ ಶಕ್ತಿಯಾಗಿ ಹೊರಹೊಮ್ಮಲಿ.