ನವದೆಹಲಿ, ಏ.1- ಎಸ್‌ಎಸ್‌ಎಲ್‌ಸಿ ಫೇಲಾದ. ಆದರೆ, ದೇವಮಾನವನಾದ, ಕೋಟ್ಯಾಧಿಪತಿಯಾದ, ಎಲ್ಲೆಲ್ಲಿಗೋ ಬೆಳೆದ… ಕೊನೆಗೆ ಪೊಲೀಸರ ಅತಿಥಿಯಾಗಿ ಜೈಲು ಸೇರಿದ. ಈ ಸ್ವಯಂಘೋಷಿತ ದೇವಮಾನವನ 60 ಕೋಟಿ ರೂ. ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಸ್ವಯಂಘೋಷಿತ ದೇವಮಾನವನ ಹೆಸರು ಸಂತ್‌ಸ್ವಾಮಿ ಇಚದಾರಿ ಭೀಮಾನಂದ. ಅಂದಹಾಗೆ ಇವನು ಮಾಡುತ್ತಿದ್ದ ಕೆಲಸ ಏನು ಗೊತ್ತೆ..? ಹೈಟೆಕ್ ವೇಶ್ಯಾವಾಟಿಕೆ. ಚಿತ್ರಕೂಟ ಮೂಲದ ಶಿವಮುರತ್ ದ್ವಿವೇದಿ 1988ರಲ್ಲಿ ದೆಹಲಿಗೆ ಬಂದು ಇಲ್ಲಿನ ಪಂಚತಾರಾ ಹೊಟೇಲ್‌ವೊಂದರಲ್ಲಿ ಪರಿಚಾರಕನಾದ.
ಕೆಲವೇ ದಿನಗಳಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲ ಆರಂಭಿಸಿದ. 1997-98ರಲ್ಲಿ ಮಹಾರಾಷ್ಟ್ರ ಪೊಲೀಸರು ಬಂಧಿಸುವ ವೇಳೆಗಾಗಲೇ ದ್ವಿವೇದಿ ಕೋಟ್ಯಾಧೀಶನಾಗಿದ್ದ.
ಜೈಲಿನಿಂದ ಹೊರಬಂದವನು ಮಹಿಳೆಯರ ಕಳ್ಳ ಸಾಗಾಟ, ಹೈಟೆಕ್ ವೇಶ್ಯಾವಾಟಿಕೆ ಮುಂದುವರಿಸಿ 2010ರಲ್ಲಿ ಮತ್ತೆ ಜೈಲು ಪಾಲಾದ. ಇವನ ಬಳಿ ಭಾರೀ ಮೊತ್ತದ ಆಸ್ತಿಯೂ ಇತ್ತು. ದೆಹಲಿಯ ಪಂಚತಾರಾ ಹೋಟೆಲ್‌ಗಳ ಸಂಪರ್ಕವಿತ್ತು. ಈ ದೇವ ಮಾನವನ ಫೋನ್ ಬಿಲ್ ವರ್ಷಕ್ಕೆ 5 ಲಕ್ಷ..! ಈ ಭೀಮಾನಂದ ಕಟ್ಟಿಸಿದ್ದ ಒಂದು ಮೂರಂತಸ್ತಿನ ಮಠ ಹೊರತಾಗಿ ಉಳಿದೆಲ್ಲ ವಸ್ತುಗಳು, ನಗದನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ. ಇವುಗಳಲ್ಲಿ 13 ಬ್ಯಾಂಕ್ ಖಾತೆಯಲ್ಲಿದ್ದ 1 ಕೋಟಿ ರೂ. ನಗದು, ಮೂರು ಐಷಾರಾಮಿ ಕಾರುಗಳು, ಮತ್ತಿತರ ಚರವಸ್ತುಗಳು ಸೇರಿವೆ.ಐದು ಸಾವಿರ ಚದರಡಿ ನಿವೇಶನದಲ್ಲಿ ನಿರ್ಮಿಸಲಾಗಿರುವ ಮೂರಂತಸ್ತಿನ ಮನೆ ಕಮ್ ಮಠವನ್ನು ಕೈಬಿಡಲಾಗಿದೆ. ಏಕೆಂದರೆ, ಇಲ್ಲಿಗೆ ಸಾರ್ವಜನಿಕರು ಬರುತ್ತಾರೆ. ಹೀಗೆ ಬರುವ ಭಕ್ತರಲ್ಲಿ ಸಂಸದರು, ಸಚಿವರು, ಶಾಸಕರು ಇದ್ದಾರೆ.
ಹೀಗಾಗಿದ್ದು ಹೇಗೆ..?
ದೆಹಲಿಯ ಹೊಟೇಲ್ ಪಾರ್ಕ್ ರಾಯಲ್‌ನಲ್ಲಿ 1988ರಲ್ಲಿ ಪರಿಚಾರಕನಾಗಿದ್ದ ದ್ವಿವೇದಿ, ಅಲ್ಲಿಂದ ಬಿಟ್ಟು ಸೇರಿದ್ದು ಮಸಾಜ್ ಪಾರ್ಲರ್ ಒಂದರಲ್ಲಿ. ನಂತರ ಲಜ್‌ಪತ್ ನಗರದಲ್ಲಿ ತಾನೇ ಒಂದು ಮಸಾಜ್ ಆರಂಭಿಸಿದ. ಅಲ್ಲಿ ನಡೆಯುತ್ತಿದ್ದುದು ವೇಶ್ಯಾವಾಟಿಕೆ. ಹಾಗಾಗಿ 1997-98ರಲ್ಲಿ ಅರೆಸ್ಟ್ ಆದ. ಬಿಡುಗಡೆಯಾದ ಬಳಿಕ ದ್ವಿವೇದಿ ದೇವಮಾನವನಾಗಿ ಸಂತ ಶಿವಮುರತ್ ಭೀಮಾನಂದನಾದ. ವೇಶ್ಯಾವಾಟಿಕೆ ಮುಂದುವರಿಸಿದ. 2010ರಲ್ಲಿ ಜೈಲು ಸೇರಿದವನು ಇನ್ನೂ ಹೊರಬಂದಿಲ್ಲ.