ಕನ್ನಡ ವಾರ್ತೆಗಳು

ಉಳ್ಳಾಲ -ಕೊಲ್ಯದಲ್ಲಿ ಸರಣಿ ಕಳ್ಳತನ : ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಸಹಿತ ನಗದು ಕಳವುಗೈದ ಪರಿಣಿತ ಕಳ್ಳರು

Pinterest LinkedIn Tumblr

Ullal_kolya_robbary_1

ಮಂಗಳೂರು: ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಸಹಿತ ನಗದು ಕಳವುಗೈದಿರುವ ಘಟನೆ ಉಳ್ಳಾಲ ಹಾಗೂ ಕೊಲ್ಯದಲ್ಲಿ ಮಂಗಳವಾರ ನಡೆದಿದೆ. 

ಕೊಲ್ಯ ಶ್ರೀಮೂಕಾಂಬಿಕಾ ದೇವಸ್ಥಾನದ ಹಿಂಭಾಗದಲ್ಲಿರುವ ಸರಸ್ವತಿ ಎಂಬವರಿಗೆ ಸೇರಿದ ಮನೆಗೆ ನುಗ್ಗಿದ ಕಳ್ಳರು ಎರಡು ಲಕ್ಷ ನಗದು ಮತ್ತು 45 ಪವನ್ ಚಿನ್ನಾಭರಣ ದೋಚಿದ್ದಾರೆ. ಮನೆಮಂದಿ ಮಲಗಿದ್ದ ಸಂದರ್ಭ ಹಿಂಬಾಗಿಲಿನ ಮೂಲಕ ನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ್ದ ಸೊತ್ತುಗಳನ್ನು ಕಳವು ನಡೆಸಿದ್ದಾರೆ.

Ullal_kolya_robbary_4

 

ನಮ್ಮ ಕುಡ್ಲ ತುಳು ವಾಹಿನಿಯ ಕ್ಯಾಮರ ಮ್ಯಾನ್  ಜಯಂತ್ ಉಳ್ಳಾಲ್ ಅವರ ಪತ್ನಿ ಸುನೀತಾ ಸಹಿತ ಅವರ ತಾಯಿ ಸರಸ್ವತಿ ಮತ್ತು ಮಕ್ಕಳು ಮನೆಯಲ್ಲಿದ್ದರು. ನೂತನ ಮನೆಯನ್ನು ನಿರ್ಮಿಸುತ್ತಿರುವ ಜಯಂತ್ ಉಳ್ಳಾಲ್ ಸಾಲ ಪಡೆದ ಹಣದಿಂದ ತಾವು ಅಡವಿರಿಸಿದ್ದ ಚಿನ್ನವನ್ನು ಬಿಡಿಸಿ ಪತ್ನಿ ಮನೆಗೆ ತಂದಿದ್ದರು. ಉಳಿದ ರೂ.2 ಲಕ್ಷ ಹಣವನ್ನು ಕಪಾಟಿನಲ್ಲಿರಿಸಿದ್ದರು. ಸ್ಥಳಕ್ಕೆ ಎಸಿಪಿ ಕಲ್ಯಾಣಿ ಶೆಟ್ಟಿ, ಉಳ್ಳಾಲ ಠಾಣಾಧಿಕಾರಿ ಸವಿತೃ ತೇಜ, ಎಸ್.ಐ ಭಾರತಿ ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.

Ullal_kolya_robbary_3

ಸ್ಟುಡಿಯೋಗೂ ಕನ್ನ:

ಮನೆ ಸಮೀಪ ರಾ.ಹೆ. 66ರ ಸಮೀಪದಲ್ಲಿ ರುವ ತನುಂಜಯ ರಾವ್ ಎಂಬವರಿಗೆ ಸೇರಿದ ಸ್ಟುಡಿಯೋಗೂ ನುಗ್ಗಿದ ಕಳ್ಳರು ರೂ.40,000 ಬೆಲೆಬಾಳುವ ಕ್ಯಾಮರಾವನ್ನು ಕಳವುಗೈದಿದ್ದಾರೆ. ಅಲ್ಲದೆ ಸಮೀಪದಲ್ಲೇ ಇರುವ ಮತ್ತೊಂದು ಸ್ಟುಡಿಯೋ ಮತ್ತು ಮನೆಯೊಂದರ ಬಾಗಿಲು ಮತ್ತು ಶಟರನ್ನು ಮುರಿಯಲು ಯತ್ನಿಸಿರುವ ಕಳ್ಳರು ಸರಣಿ ಕಳವಿಗೆ ವಿಫಲ ಯತ್ನ ನಡೆಸಿದ್ದಾರೆ.

Ullal_kolya_robbary_2

 

ಪರಿಣತ ತಂಡ:

ಮನೆ ಅಂಗಳದಲ್ಲಿ ನಿಲ್ಲಿಸಿಡಲಾಗಿದ್ದ ಜಯಂತ್ ಅವರಿಗೆ ಸೇರಿದ ಸ್ಕೂಟರಿನ ಕನ್ನಡಿಯನ್ನು ತೆಗೆದಿರುವ ಕಳ್ಳರು ಅದರ ಮೂಲಕ ಒಳಗಿರುವ ಚಿಲಕವನ್ನು ನೋಡಿ, ಅದನ್ನು ಮುರಿದು ಒಳನುಗ್ಗಿ ದ್ದಾರೆ. ಎಲ್ಲರೂ ಮಲಗಿದ್ದ ಕೋಣೆಯಲ್ಲಿಯೇ ತಡಕಾಡಿರುವ ಕಳ್ಳರು ಅಲ್ಲಿದ್ದ ರೋಲ್ಡ್ ಗೋಲ್ಡ್ ಚಿನ್ನವನ್ನು ಆರಿಸಿ ಅದನ್ನು ಅಲ್ಲೇ ಬಿಟ್ಟು, ಅಸಲಿ ಚಿನ್ನವನ್ನು ಕಳವುಗೈದಿದ್ದಾರೆ. ಇದರಿಂದ ಪರಿಣತ ಕಳ್ಳರ ತಂಡವೇ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Write A Comment