ನವದೆಹಲಿ: ಸಂಸತ್ತಿನ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿಯವರು ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯಕ್ಕೆ ಪ್ರತಿಪಕ್ಷಗಳು ಮಂಡಿಸಿದ ತಿದ್ದುಪಡಿಯು ರಾಜ್ಯಸಭೆಯಲ್ಲಿ ಮಂಗಳವಾರ ಅಂಗೀಕಾರಗೊಂಡು ಸರ್ಕಾರ ಮುಖಭಂಗ ಅನುಭವಿಸಿತು.
‘ರಾಷ್ಟ್ರಪತಿಯವರು ಮಾಡಿದ ಭಾಷಣದಲ್ಲಿ ಕಪ್ಪುಹಣ, ಭ್ರಷ್ಟಾಚಾರ ಕುರಿತು ಮಾಡಿದ ಪ್ರಸ್ತಾಪಕ್ಕೆ ತಿದ್ದುಪಡಿ ತರಬೇಕು’ ಎಂಬ ನಿರ್ಣಯವನ್ನು ಸಿಪಿಎಂ ಸದಸ್ಯರಾದ ಸೀತಾರಾಂ ಯೆಚೂರಿ ಮತ್ತು ಪಿ.ರಾಜೀವ್ ಮಂಡಿಸಿದರು. ಇದನ್ನು ಮತಕ್ಕೆ ಹಾಕಿದಾಗ ನಿರ್ಣಯಕ್ಕೆ ಗೆಲುವು ಲಭಿಸಿತು. ಈ ಮುನ್ನ ನಿರ್ಣಯವನ್ನು ವಾಪಸ್ ತೆಗೆದುಕೊಳ್ಳುವಂತೆ ಸದಸ್ಯರನ್ನು ಮನವೊಲಿಸಲು ಸರ್ಕಾರ ನಡೆಸಿದ ಪ್ರಯತ್ನ ಸಫಲವಾಗಲಿಲ್ಲ.
‘ಕಪ್ಪುಹಣ ವಾಪಸ್ ತರುವ ಬಗ್ಗೆ ಹಾಗೂ ಉನ್ನತ ಮಟ್ಟದಲ್ಲಿನ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸರ್ಕಾರ ವಿಫಲವಾಗಿರುವ ಬಗ್ಗೆ ರಾಷ್ಟ್ರಪತಿಯವರ ಭಾಷಣದಲ್ಲಿ ಯಾವ ಪ್ರಸ್ತಾಪವೂ ಇಲ್ಲ’ ಎಂಬುದೇ ಸದಸ್ಯರು ಮಂಡಿಸಿದ ತಿದ್ದುಪಡಿಯಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಸೀತಾರಾಂ ಯೆಚೂರಿ ಅವರನ್ನು ನಿರ್ಣಯ ಮಂಡಿಸದಂತೆ ಮನವೊಲಿಸಲು ಯತ್ನಿಸಿದರು. ‘ರಾಷ್ಟ್ರಪತಿ ಅವರ ಭಾಷಣದಲ್ಲಿ ಕಪ್ಪುಹಣದ ಬಗ್ಗೆ ಪ್ರಸ್ತಾಪ ಇದೆ’ ಎಂದು ಹೇಳುವ ಮೂಲಕ ಸಮಾಧಾನಗೊಳಿಸುವ ಯತ್ನ ಮಾಡಿದರು. ಆದರೆ ಯೆಚೂರಿ ಅವರು ಇದನ್ನು ಒಪ್ಪಲಿಲ್ಲ.
‘ನಾನು ಸಾಮಾನ್ಯವಾಗಿ ಇಂತಹ ಮನವಿಗಳನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಚರ್ಚೆ ಆರಂಭವಾಗಿ ೧೪ ಗಂಟೆಗಳಾದರೂ ಪ್ರಧಾನಿಯವರ ಪ್ರತಿಕ್ರಿಯೆಯ ಬಗ್ಗೆ ಸ್ಪಷ್ಟನೆ ಪಡೆಯಲು ಪ್ರತಿಪಕ್ಷಗಳಿಗೆ ಅವಕಾಶ ನೀಡಿಲ್ಲವಾದ್ದರಿಂದ ಅನಿವಾರ್ಯವಾಗಿ ರಾಷ್ಟ್ರಪತಿಯವರ ಭಾಷಣಕ್ಕೆ ತಿದ್ದುಪಡಿ ತರುವಂತೆ ನಿರ್ಣಯ ಮಂಡಿಸಬೇಕಾಯಿತು’ ಎಂದಿದ್ದಾರೆ.
ರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಒಂದು ಗಂಟೆ ಕಾಲ ಈ ಕುರಿತು ಭಾಷಣ ಮಾಡಿ ಸದನದಿಂದ ಹೊರಗೆ ತೆರಳಿದ ಬಗ್ಗೆ ಯೆಚೂರಿ ಆಕ್ಷೇಪ ವ್ಯಕ್ತಪಡಿಸಿದರು. ಪ್ರಸಕ್ತ ಅಧಿವೇಶನದಲ್ಲಿ ಮಹತ್ವದ ಮಸೂದೆಗಳಿಗೆ ಸರ್ಕಾರವು ಅನುಮೋದನೆ ಪಡೆಯುವ ಯತ್ನದಲ್ಲಿರುವಾಗ ಸರ್ಕಾರಕ್ಕೆ ಆಗಿರುವ ಈ ಮುಖಭಂಗವು ಆತಂಕ ಮೂಡಿಸಿದೆ.
ನಾಲ್ಕನೇ ಬಾರಿ ಮುಜುಗರ: ರಾಷ್ಟ್ರಪತಿ ಯವರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯಕ್ಕೆ ಪ್ರತಿಪಕ್ಷಗಳು ಸೂಚಿಸಿದ ತಿದ್ದುಪಡಿ ಅಂಗೀಕಾರಗೊಂಡಿರುವುದು ರಾಜ್ಯಸಭೆಯ ಇತಿಹಾಸ ದಲ್ಲಿ ಇದು ನಾಲ್ಕನೇ ಸಲವಾಗಿದೆ. ಈ ಮುನ್ನ, ೧೯೮೦ರ ಜ.೩೦ರಂದು ಜನತಾ ಪಕ್ಷ ಆಡಳಿತದಲ್ಲಿದ್ದಾಗ, ೧೯೮೯ರ ಡಿ.೨ ರಂದು ವಿ.ಪಿ.ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗ ಅಧಿಕಾರದಲ್ಲಿದ್ದಾಗ ಹಾಗೂ ೨೦೦೧ರ ಮಾರ್ಚ್ ೧೨ರಂದು ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಇಂತಹ ತಿದ್ದುಪಡಿ ನಿರ್ಣಯಅನುಮೋದನೆಗೊಂಡಿತ್ತು.
