ರಾಷ್ಟ್ರೀಯ

ವಿವಾದ ಸೃಷ್ಟಿಸಿದ ಅತ್ಯಾಚಾರಿ ಸಂದರ್ಶನ: ತನಿಖೆಗೆ ರಾಜನಾಥ್‌ ಸಿಂಗ್‌ ಆದೇಶ

Pinterest LinkedIn Tumblr

RAPEweb

ನವದೆಹಲಿ: ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣ­ದಲ್ಲಿ ತಪ್ಪಿತಸ್ಥನೆಂದು ಸಾಬೀ­ತಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮುಕೇಶ್‌ ಸಿಂಗ್‌­ನನ್ನು ‘ಬಿಬಿಸಿ’ ಸಾಕ್ಷ್ಯ­ಚಿತ್ರಕ್ಕಾಗಿ ಚಿತ್ರ ನಿರ್ದೇಶಕಿ ಲೆಸ್ಲಿ ಉಡ್ವಿನ್‌ ಸಂದರ್ಶನ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

‘ನಿರ್ಭಯಾ’ ಪ್ರಕರಣವೆಂದೇ ಹೆಸರಾದ ಈ ಬರ್ಬರ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥ, ಅತ್ಯಾಚಾರಕ್ಕೆ ಆ ಯುವತಿಯೇ ಕಾರಣ ಎಂದು ಹೇಳಿಕೆ ನೀಡಿರುವುದಕ್ಕೆ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ಗೃಹಸಚಿವ ರಾಜನಾಥ್‌ ಸಿಂಗ್‌ ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಕಸ್ಟಡಿ’ಯಲ್ಲಿ ಇರು­ವಾಗಲೇ ತಪ್ಪಿತಸ್ಥನನ್ನು ಸಂದರ್ಶನ ಮಾಡಿರುವ ವಿಚಾರ ಗಂಭೀರವಾ­ದದ್ದು ಎಂದಿರುವ ಅವರು, ಈ ಬಗ್ಗೆ ಕೂಡಲೇ ವಿಸ್ತೃತ ವರದಿ ನೀಡುವಂತೆ ತಿಹಾರ್‌ ಜೈಲಿನ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ವರ್ಮಾ ಅವರಿಗೆ ಆದೇಶಿಸಿದ್ದಾರೆ.

ನಾಚಿಕೆಗೇಡು: ಈ ಬೆಳವಣಿಗೆಗೆ ಅತ್ಯಾಚಾರ ಸಂತ್ರಸ್ತೆಯ ಅಪ್ಪ–ಅಮ್ಮ ಸಹ ಆಕ್ರೋಶ ವ್ಯಕ್ತಪಡಿ­ಸಿದ್ದು, ಇದು ನಾಚಿಕೆಗೇಡು ಎಂದಿದ್ದಾರೆ. ಘಟನೆಗೆ ತಮ್ಮ ಮಗಳೇ ಹೊಣೆ ಎಂಬಂತೆ ಮಾತ­ನಾಡಿರುವ ಮುಕೇಶ್‌ ಸಿಂಗ್‌­ನನ್ನು ನೇಣಿಗೆ ಹಾಕ­ಬೇಕು ಎಂದೂ ಅವರು ಒತ್ತಾಯಿ­ಸಿದ್ದಾರೆ. ವಿವಾದಕ್ಕೆ ಪ್ರತಿಕ್ರಿಯಿಸಿರುವ ಬ್ರಿಟನ್ನಿನ ಸಾಕ್ಷ್ಯ­ಚಿತ್ರನಿರ್ಮಾಪಕಿ ಲೆಸ್ಲಿ ಉಡ್ವಿನ್‌, ‘ಮಹಿಳೆಯರ ಬಗ್ಗೆ ಪುರು­ಷರಿಗೆ ಇರುವ ಮನೋಭಾ­ವವನ್ನು ಪರಿಶೀಲಿ­ಸಲು ನಾನು ಈ ಚಿತ್ರ ನಿರ್ಮಿಸಿದ್ದೇನೆ. ರೋಚಕ­ಗೊಳಿಸಲು ಅಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

2013ರ ಮೇನಲ್ಲಿ ಆಗ ತಿಹಾರ್‌ ಜೈಲಿನ ಮಹಾ­ನಿರ್ದೇಶ­ಕರಾಗಿದ್ದ ವಿಮಲಾ ಮೆಹ್ರಾ ಅವರಿಂದ ಮುಕೇಶ್‌ ಸಿಂಗ್‌ ಸಂದರ್ಶ­ನಕ್ಕೆ ಅನು­ಮತಿ ಪಡೆ­ದಿದ್ದೆ ಎಂದೂ ತಿಳಿಸಿದ್ದಾರೆ. ಲೆಸ್ಲಿ ಅವರು ವಿಮಲಾ ಮೆಹ್ರಾ ಅವರಿಗೆ ಪತ್ರ ಬರೆ­ಯು­ವಾಗ ಇದೊಂದು ಜಾಗೃತಿ ಮೂಡಿಸುವ ಚಿತ್ರ ಎಂದು ಹೇಳಿದ್ದರು. ಗೃಹಸಚಿ­ವಾಲಯದ ಅನುಮತಿ ಪಡೆದ ನಂತರ ವಿಮಲಾ ಮೆಹ್ರಾ ಲೆಸ್ಲಿಗೆ ಅನುಮತಿ ನೀಡಿದ್ದರು.ಮುಕೇಶ್‌ ಸಿಂಗ್‌ ಸಂದರ್ಶನಕ್ಕೆ 2013ರ ಜುಲೈನಲ್ಲಿ ಅನು­ಮತಿ ನೀಡಲಾಗಿತ್ತು. 2013ರ ಅಕ್ಟೋಬರ್‌ 8ರಿಂದ 10ರ ಅವಧಿಯಲ್ಲಿ ಈ ತಪ್ಪಿತಸ್ಥರನ್ನು ಸಂದರ್ಶನ ಮಾಡ­ಲಾಗಿತ್ತು.

ಈ ಸಾಕ್ಷ್ಯಚಿತ್ರ ‘ಬಿಬಿಸಿ ಫೋರ್‌’ ವಾಹಿನಿಯ ಸ್ಟೋರಿವಿಲ್ಲೆ ಕಾರ್ಯ­ಕ್ರಮದಲ್ಲಿ ‘ಇಂಡಿಯಾಸ್‌ ಡಾಟರ್‌’ ಹೆಸರಿನಲ್ಲಿ ಇದೇ ಮಾರ್ಚ್‌ 8ರಂದು ಪ್ರಸಾರವಾಗಲಿದೆ. ಅಂದೇ ಎನ್‌ಡಿಟಿವಿ ವಾಹಿನಿಯಲ್ಲೂ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ಮುಕೇಶ್‌ ಸಿಂಗ್‌ ಹೇಳಿದ್ದೇನು?: ‘ಆಕೆ ಸತ್ತಿರುವುದು ಒಂದು ‘‘ಆಕಸ್ಮಿಕ’’ವಷ್ಟೇ. ಅತ್ಯಾಚಾರಕ್ಕೆ ಒಳಗಾಗು­ವಾಗ ಆಕೆ ಪ್ರತಿಭಟಿಸ­ಬಾರದಿತ್ತು. ಮೌನವಾಗಿದ್ದು ಅತ್ಯಾ­ಚಾರ ನಡೆಸಲು ಬಿಡ­ಬೇಕಿತ್ತು. ಆಕೆಯನ್ನು ಅನುಭವಿಸಿ ಸುಮ್ಮನೆ ಬಿಡುತ್ತಿದ್ದೆವು. ಆ ಹುಡುಗನಿಗೆ ಮಾತ್ರ ಹೊಡೆಯುತ್ತಿದ್ದೆವು. ಆ ಹುಡುಗಿ ಮತ್ತು ಆಕೆಯ ಗೆಳೆಯ ಪ್ರತಿಯಾಗಿ ಸೆಣಸಾಡದೇ ಇದ್ದಲ್ಲಿ ಅವರನ್ನು ನಾವು ಥಳಿಸುತ್ತಿರಲಿಲ್ಲ. ಒಂದು ಕೈಯಿಂದ ಚಪ್ಪಾಳೆ ಹೊಡೆ­ಯಲು ಸಾಧ್ಯವಿಲ್ಲ. ಸಭ್ಯ ಹುಡುಗಿ­ಯೊಬ್ಬಳು ರಾತ್ರಿ 9 ಗಂಟೆಗೆ ಹೊರಗೆ ಓಡಾಡು­ವುದಿಲ್ಲ. ಅತ್ಯಾಚಾರಕ್ಕೆ ಹುಡುಗಿ­ಯರು ಹೆಚ್ಚು ಕಾರಣರೇ ಹೊರತೂ ಹುಡುಗರಲ್ಲ. ರಾತ್ರಿ ವೇಳೆ ಹೊರಗೆ ತಿರುಗುವ ಮಹಿಳೆಯರು ಪುರುಷರ ಗುಂಪಿನ ಗಮನ ಸೆಳೆದಲ್ಲಿ ಅದಕ್ಕೆ ಅವರೇ ಹೊಣೆ.

ಹುಡುಗರು ಹಾಗೂ ಹುಡುಗಿಯರು ಸಮಾನರಲ್ಲ. ಮನೆಗೆಲಸ ಹಾಗೂ ಮನೆ ನೋಡಿಕೊಳ್ಳುವುದು ಹುಡುಗಿ­ಯ­ರಿಗೆ ಸೇರಿದ್ದು. ಕೆಟ್ಟ ಕೆಲಸ ಮಾಡುತ್ತ, ಕೆಟ್ಟ ಉಡುಪು ಧರಿಸಿ ರಾತ್ರಿ ವೇಳೆ ಡಿಸ್ಕೊಗೆ, ಬಾರ್‌ಗೆ ತಿರುಗುವುದು ಹುಡುಗಿಯರ ಕೆಲಸವಲ್ಲ. ಶೇ 20ರಷ್ಟು ಹುಡುಗಿ­ಯರು ಮಾತ್ರ ಒಳ್ಳೆಯವರು’ ಎಂದು ಮುಕೇಶ್‌ ಸಿಂಗ್‌ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ನೀಡಿದ ಸಂದರ್ಶ­ನ­ದಲ್ಲಿ ಹೇಳಿದ್ದಾನೆ.

ತಾನೂ ಸೇರಿದಂತೆ ಅತ್ಯಾಚಾರ ಪ್ರಕರ­ಣ­ದಲ್ಲಿ ತಪ್ಪಿತಸ್ಥ­ರಾ­­ದವರಿಗೆ ಗಲ್ಲುಶಿಕ್ಷೆ ವಿಧಿಸುವುದರಿಂದ ಮುಂದಿನ ದಿನಗಳಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿ­ಯರನ್ನೆಲ್ಲ ಕೊಲ್ಲುವ ಸಾಧ್ಯತೆ ಹೆಚ್ಚಲಿದೆ ಎಂದೂ ಆತ ಹೇಳಿದ್ದ. ತಪ್ಪಿತಸ್ಥರ ವಕೀಲರಾಗಿರುವ ಎ.ಪಿ. ಸಿಂಗ್‌ ಸಹ ವಿವಾದಾತ್ಮಕ ಹೇಳಿಕೆ ನೀಡಿದ್ದು, ‘ಹುಡುಗಿಯರು ರಾತ್ರಿ ವೇಳೆ ಹೊರಕ್ಕೆ ಹೋಗಬಯಸಿದರೆ ಪಾಲಕರ ಜತೆ ಮಾತ್ರ ಹೋಗಬೇಕು. ಗೆಳೆಯರ ಜತೆ ಅಲ್ಲ’ ಎಂದಿದ್ದಾರೆ. ‘ನನ್ನ ಸಹೋದರಿ ಅಥವಾ ಮಗಳು ಇಂತಹ ಕೃತ್ಯದಲ್ಲಿ ತೊಡಗಿಕೊಂಡಿದ್ದರೆ ನಾನು ಅವರ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುತ್ತಿದ್ದೆ’ ಎಂದೂ ಸಿಂಗ್‌ ಹೇಳಿದ್ದಾರೆ.

ತಪ್ಪಿತಸ್ಥರ ಪರ ಮತ್ತೊಬ್ಬ ವಕೀಲ ಎಂ.ಎಲ್‌. ಶರ್ಮಾ, ‘ನಮ್ಮ ಸಮಾಜದಲ್ಲಿ ಹುಡುಗಿಯರು ರಾತ್ರಿ 8.30ರ ನಂತರ ಅಪರಿಚಿತರ ಜತೆ ಹೊರಕ್ಕೆ ಹೋಗುವಂತಿಲ್ಲ’ ಎಂದಿದ್ದಾರೆ.

ಜೈಲು ಅಧಿಕಾರಿಗಳ ನಿರ್ಲಕ್ಷ್ಯ?: ಗೃಹ ಸಚಿವಾಲಯದ ಆಂತರಿಕ ತನಿಖೆ ಪ್ರಕಾರ ಲೆಸ್ಲಿ ಉಡ್ವಿನ್‌ಗೆ ಅನುಮತಿ ನೀಡುವಾಗ ಗೃಹ ಸಚಿವಾಲಯವು ಸಂದರ್ಶನಕ್ಕೆ ತಪ್ಪಿತಸ್ಥನ ಅನುಮತಿ ಪಡೆಯಬೇಕು ಹಾಗೂ ಸಾಕ್ಷ್ಯಚಿತ್ರ ಪ್ರಸಾರಕ್ಕೂ ಮುನ್ನ ತಿಹಾರ್‌ ಜೈಲಿನ ಅಧಿಕಾರಿಗಳು ಆ ಚಿತ್ರವನ್ನು ವೀಕ್ಷಿಸಬೇಕು ಎಂಬ ಷರತ್ತುಗಳನ್ನು ಹಾಕಿತ್ತು.

ಮುಕೇಶ್‌ ಸಿಂಗ್‌ ಸಂದರ್ಶನಕ್ಕೆ ಸಮ್ಮತಿ ಸೂಚಿಸಿದ್ದ. ಆದರೆ, ತಿಹಾರ್‌ ಜೈಲಿನ ಅಧಿಕಾರಿಗಳು 16 ತಾಸುಗಳಷ್ಟು ದೀರ್ಘವಾಗಿರುವ ಈ ಸಾಕ್ಷ್ಯಚಿತ್ರದ ಕಚ್ಚಾ ದೃಶ್ಯಾವಳಿಗಳನ್ನು ವೀಕ್ಷಿಸಲೇ ಇಲ್ಲ. 2014ರ ಫೆಬ್ರವರಿಯಲ್ಲಿ ಗೃಹ ಸಚಿವಾಲಯದೊಂದಿಗೆ ಪತ್ರವ್ಯವಹಾರ ನಡೆಸಿದ್ದ ಲೆಸ್ಲಿ ಉಡ್ವಿನ್‌ ಸಾಕ್ಷ್ಯಚಿತ್ರವನ್ನು ಬಿಬಿಸಿಗೆ ಮಾರಾಟ ಮಾಡಿದ್ದಾಗಿ ತಿಳಿಸಿದ್ದರು.

ಚಿತ್ರದ ಕಚ್ಚಾ ಪ್ರತಿ ತಮ್ಮ ಬಳಿ ಇದ್ದು ತಿಹಾರ್‌ ಜೈಲಿನ ಅಧಿಕಾರಿಗಳಾಗಲಿ ಅಥವಾ ಗೃಹ ಸಚಿವಾಲಯದ ಅಧಿಕಾರಿಗಳಾಗಲಿ ಅದನ್ನು ವೀಕ್ಷಿಸಬಹುದು ಎಂದಿದ್ದರು. ಆದರೆ, ಅಧಿಕಾರಿಗಳು ಅದನ್ನು ವೀಕ್ಷಿಸಲು ಉತ್ಸಾಹ ತೋರಲೇ ಇಲ್ಲ ಎಂದು ಲೆಸ್ಲಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ಜೈಲು ನಿಯಮಾವಳಿಗಳನ್ನು ಉಲ್ಲಂಘಿಸ­ಲಾಗಿದೆ ಎಂದು ವಕೀಲರು ಅಭಿಪ್ರಾಯಪಟ್ಟಿದ್ದಾರೆ.

ಕಲ್ಲು ಹೃದಯದ ಅತ್ಯಾಚಾರಿ
‘ಮುಕೇಶ್‌ನನ್ನು ಸಂದರ್ಶನ ಮಾಡುವಾಗ ಆತನಲ್ಲಿ ಪಶ್ಚಾತ್ತಾಪ ಅಥವಾ ಮತ್ಯಾವುದೇ ಭಾವನೆ ಉಕ್ಕಿಸಲು ಯತ್ನಿಸಿದ್ದೆ. ಆ ಹುಡುಗ, ಹುಡುಗಿಗೆ ಅವರು ನೀಡಿದ್ದ ಹಿಂಸೆಯ ಬಗ್ಗೆ ಹೇಳಿದರೂ ಆತ ಕಲ್ಲಿನಂತೆ ನಿಂತು­ಕೊಂಡಿ­ರುತ್ತಿದ್ದ. ಆತ ರೋಬೊಟ್‌ ತರಹ ಎಲ್ಲವನ್ನೂ ಆಲಿಸು­ತ್ತಿದ್ದ. ಆತನ ಮನೋಭಾ ವವೇ ಹಾಗಿದೆ. ಆತ ಬೆಳೆದುಬಂದ ರೀತಿಯಿಂದಾಗಿ ಮಹಿಳೆಯರನ್ನು ಹಾಗೆ ನೋಡುತ್ತಿದ್ದಾನೆ. ಭಾರತದ ಮಾಧ್ಯಮ­ಗಳು ತಪ್ಪಿತಸ್ಥರ ಮನಸ್ಸಿನಲ್ಲಿ ಏನಿದೆ ಎಂಬುದನ್ನೂ ಬಹಿ­ರಂಗ­ಪಡಿಸಬೇಕು. ಇವೆಲ್ಲ ನಿಲ್ಲುವ ತನಕ ಮತ್ತೆ ಮತ್ತೆ ಇದನ್ನು ಹೇಳಬೇಕು. ನಾನೂ ಸಹ ಅತ್ಯಾಚಾರಕ್ಕೆ ಒಳಗಾದ­ವಳು. ಈ ಚಿತ್ರದಲ್ಲಿ ಸಂತ್ರಸ್ತೆಯ ಪಾಲಕರಿಗೆ ಸಹ ಅವಕಾಶ ನೀಡಿದ್ದೇನೆ. ಭಾರತ­ದಲ್ಲಿರುವ ಲಿಂಗ ಅಸಮಾ­ನತೆಯನ್ನು ಬಿಂಬಿಸಿದ್ದೇನೆ. –ಲೆಸ್ಲಿ ಉಡ್ವಿನ್‌, ಬ್ರಿಟನ್ನಿನ ಸಾಕ್ಷ್ಯ ಚಿತ್ರ ನಿರ್ಮಾಪಕಿ

Write A Comment