ಡೆಹರಾಡೂನ್: ಜಮ್ಮು- ಕಾಶ್ಮೀರ ಸೇರಿದಂತೆ ಉತ್ತರ ಭಾರತದ ಕಣಿವೆ ಪ್ರದೇಶದಲ್ಲಿ ಹಿಮಪಾತ ತೀವ್ರವಾಗಿ ಹೆಚ್ಚಿದ್ದು, ಉತ್ತರಖಾಂಡದಲ್ಲಿ ಸೋಮವಾರ ಇಬ್ಬರು ಯೋಧರು ಹಿಮಪಾತದಿಂದಾಗಿ ಸಾವಿಗೀಡಾಗಿದ್ದಾರೆ.
ಉತ್ತರಖಾಂಡದ ಪಿಥೊರಾಘರ್ ಜಿಲ್ಲೆಯ ಚೆಕ್ ಪೋಸ್ಟ್ ನಲ್ಲಿ ಎರಡು ದಿನದಿಂದ ಸುರಿದ ಭಾರೀ ಹಿಮಪಾತದಿಂದಾಗಿ ಇಬ್ಬರು ಯೋಧರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಇಂಡೊ-ನೇಪಾಳ’ ಗಡಿಯ ಚೆಕ್ ಪೋಸ್ಟ್ ನಲ್ಲಿ ಎಂಟು ಮಂದಿ ಯೋಧರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇಬ್ಬರು ಯೋಧರು ಮೃತಪಟ್ಟಿದ್ದು, ಉಳಿದವರನ್ನು ರಕ್ಷಿಸಲಾಗಿದೆ. ಒಬ್ಬ ಯೋಧನಿಗಾಗಿ ಉಡುಕಾಟ ನಡೆದಿದೆ. ಎರಡು ದಿನಗಳಿಂದ ಸುರಿಯುತ್ತಿರುವ ವಿಪರೀತ ಹಿಮಪಾತದಿಂದಾಗಿ ಯೋಧನ ಪತ್ತೆಗೆ ಅಡ್ಡಿಯಾಗಿದೆ ಎಂದು ಸೇನಾ ಸಿಬ್ಬಂದಿ ತಿಳಿಸಿದ್ದಾರೆ.
ಸೋಮವಾರ ನಡೆದ ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಬಾಗೇಶ್ವರ ಜಿಲ್ಲೆಯ ಕಾಪಕೋಟ್ ನಲ್ಲಿ ವಿಪರೀತ ಹಿಮಪಾತ ಹಾಗೂ ಭೂ ಕುಸಿತದಿಂದಾಗಿ ಮನೆಯೊಂದು ಹಾನಿಗೊಳಗಾಗಿದ್ದು, ನಾಗರಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.