ರಾಷ್ಟ್ರೀಯ

ಅಫ್ಜಲ್ ಗುರು ಶವದ ಶೇಷ ಮರಳಿಸಿ: ಪಿಡಿಪಿ

Pinterest LinkedIn Tumblr

21

ಜಮ್ಮು : ಸಂಸತ್ ಭವನ ದಾಳಿ ಪ್ರಕರಣದ ಅಪರಾಧಿ ಅಫ್ಜಲ್ ಗುರು ಶವದ ಶೇಷವನ್ನು ಮರಳಿ ಪಡೆಯುವ ವಿಷಯ ಮತ್ತೆ ಜೀವ ಪಡೆದಿದೆ. ಆತನ ಶವದ ಅವಶೇಷವನ್ನು ಮರಳಿಸುವಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಜತೆಗೂಡಿ ಅಧಿಕಾರಕ್ಕೆ ಏರಿದ ಮರುದಿನವೇ ಪಿಡಿಪಿಯು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಈ ಸಂಬಂಧ ಪಿಡಿಪಿಯ ಎಂಟು ಶಾಸಕರು ಸೋಮವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ಆತನ ಶವದ ಉಳಿಕೆಯನ್ನು ಮರಳಿಸುವಂತೆ ಮಾಡುವ ಒತ್ತಾಯಕ್ಕೆ ಪಿಡಿಪಿ ಬದ್ಧವಾಗಿದೆ. ಶವದ ಉಳಿಕೆಯನ್ನು ಹಿಂಪಡೆಯುವ ನಿಟ್ಟಿನಲ್ಲಿ ಉತ್ಸಾಹದಿಂದ ಪ್ರಯತ್ನಿಸುವುದಾಗಿ ಭರವಸೆ ನೀಡುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹೇಳಿಕೆಗೆ ಶಾಸಕರಾದ ಮೊಹಮ್ಮದ್ ಖಲೀಲ್ ಬಂಧ್, ಜಹೂರ್ ಅಹ್ಮದ್ ಮೀರ್, ರಾಜಾ ಮಂಜೂರ್ ಅಹ್ಮದ್, ಮೊಹಮ್ಮದ್ ಅಬ್ಬಾಸ್ ವಾನಿ, ಯವರ್ ದಿಲಾವರ್ ಮೀರ್, ಮೊಹಮ್ಮದ್ ಯೂಸೂಫ್, ಅಜೀಜ್ ಅಹ್ಮದ್ ಮೀರ್ ಹಾಗೂ ನೂರ್ ಮೊಹಮ್ಮದ್ ಶೇಖ್ ಅವರು ಸಹಿ ಹಾಕಿದ್ದಾರೆ.

‘ದಿವಂಗತ ಅಫ್ಜಲ್ ಗುರುನನ್ನು ನೇಣಗೆ ಏರಿಸಿದ್ದು ನ್ಯಾಯದ ಅಣಕ ಎಂದು ಪಿಡಿಪಿ ಹೇಳುತ್ತಲೇ ಬಂದಿದೆ. ಆತನನ್ನು ಗಲ್ಲಿಗೇರಿಸುವಲ್ಲಿ ಸಂವಿಧಾನಿಕ ಅಗತ್ಯ ಹಾಗೂ ಪ್ರಕ್ರಿಯೆಗಳನ್ನು ಪಾಲಿಸಲಾಗಿಲ್ಲ’ ಎಂದೂ ಪ್ರಕಟಣೆಯಲ್ಲಿ ಆರೋಪಿಸಲಾಗಿದೆ.

ಆದರೆ ಪಿಡಿಪಿ ಹೇಳಿಕೆಯನ್ನು ಖಂಡಿಸಿರುವ ನ್ಯಾಷನಲ್ ಕಾನ್ಫೆರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ ಪರಿಷತ್ ಚುನಾವಣೆಯಲ್ಲಿ ಶಾಸಕ ಶೇಖ್ ಅಬ್ದುಲ್ಲಾ ರಶೀದ್ ಅವರ ಮತ ಗಿಟ್ಟಿಸಲು ಮಾಡಿದ ‘ಸಿನಿಕ ಪ್ರಯತ್ನ’ ಎಂದು ವ್ಯಂಗ್ಯವಾಡಿದ್ದಾರೆ.

2001ರ ಡಿಸೆಂಬರ್ 13ರಂದು ನವದೆಹಲಿಯಲ್ಲಿರುವ ಸಂಸತ್ ಭವನದ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಅಫ್ಜಲ್ ಅಪರಾಧಿಯಾಗಿದ್ದ. ಆತನನ್ನು 2013ರ ಫೆಬ್ರುವರಿ 9ರಂದು ತಿಹಾರ್ ಜೈಲಿನಲ್ಲಿ ಗಲ್ಲಿಗೆ ಏರಿಸಲಾಗಿತ್ತು.

Write A Comment