ರಾಷ್ಟ್ರೀಯ

ಸಂವಿಧಾನ ರಾಷ್ಟ್ರೀಯ ಗ್ರಂಥ; ಭಾರತವೇ ಮೊದಲು’ ಸರ್ಕಾರದ ಏಕೈಕ ಧರ್ಮ: ಮೋದಿ

Pinterest LinkedIn Tumblr

pvec28feb2015MODI

ನವದೆಹಲಿ: ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ವಿವಿಧ ಧರ್ಮಗಳ ಬಗ್ಗೆ ನೀಡುತ್ತಿರುವ ವಿವಾದಾತ್ಮಕ ಹೇಳಿಕೆ ಹಾಗೂ ‘ಘರ್‌ ವಾಪಸಿ’­ ಕಾರ್ಯ­ಕ್ರಮಗಳಿಂದ ತೀವ್ರ ಟೀಕೆಗೆ ಗುರಿ­ಯಾಗಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸರ್ಕಾರವು ದೇಶದ ಏಕತೆ ಪ್ರತಿ­ಪಾ­ದಿಸ­ಲಿದ್ದು, ಸಂವಿಧಾನದ ಚೌಕಟ್ಟಿ­­ನೊಳಗೆ ಎಲ್ಲ ಧರ್ಮಗಳ ಒಳಿತಿಗಾಗಿ ದುಡಿಯ­ಲಿದೆ ಎಂದು ಶುಕ್ರವಾರ ಸಂಸತ್ತಿನಲ್ಲಿ ಘೋಷಿಸಿದರು.

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಒಂಬತ್ತು ತಿಂಗಳ ಬಳಿಕ ಸರ್ವಧರ್ಮ ಸಮಾನತೆ ಬಗ್ಗೆ ಮಾತನಾಡಿದ ಪ್ರಧಾನಿ, ‘ಸರ್ಕಾರಕ್ಕೆ ಎಲ್ಲ ಧರ್ಮಗಳೂ ಒಂದೇ. ಧರ್ಮದ ಹೆಸರಿನಲ್ಲಿ ತಾರತಮ್ಯಕ್ಕೆ ಅವಕಾಶವಿಲ್ಲ. ದೇಶ­ಕ್ಕಿಂತ ದೊಡ್ಡ ಧರ್ಮ ಯಾವುದೂ ಇಲ್ಲ.  ಭಾರತವೇ ಮೊದಲು ನಮ್ಮ ಏಕೈಕ ಧರ್ಮ. ಸಂವಿಧಾನವೇ ನಮ್ಮ ಏಕೈಕ ಧಾರ್ಮಿಕ ಗ್ರಂಥ . 125 ಕೋಟಿ ಜನರ ಕಲ್ಯಾಣವೇ ನಮ್ಮ ಗುರಿ’ ಎಂದು  ಸ್ಪಷ್ಟಪಡಿಸಿ­ದರು.

ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಸುಮಾರು 70 ನಿಮಿಷ ನಿರ­ರ್ಗಳವಾಗಿ ಮೋದಿ ಮಾತನಾಡಿದರು. ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ವಿವಿಧ ಧರ್ಮ­ಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದರೂ ಸರ್ಕಾರ ಮೌನ ವಹಿಸಿದೆ ಎಂದು ವ್ಯಾಪಕವಾಗಿ ಕೇಳಿ­ಬಂದ ಟೀಕೆಗಳ ಬಳಿಕ ಪ್ರಧಾನಿ ಮೌನ ಮುರಿದರು.

‘ಧರ್ಮದ ಆಧಾರದಲ್ಲಿ ಅವಹೇಳನ­ಕಾರಿ ಹೇಳಿಕೆ ನೀಡುವುದನ್ನು ತಡೆಯು­ವುದು ಪ್ರಧಾನಿಯಾಗಿರುವ ನನ್ನ ಪ್ರಾಥ­ಮಿಕ ಕರ್ತವ್ಯವಾಗಿದೆ. ಯಾರಿಗೂ ಧರ್ಮದ ಹೆಸರಿನಲ್ಲಿ ತಾರ­ತಮ್ಯ ಮಾಡಲು ಹಕ್ಕಿಲ್ಲ. ಹಾಗೆ ಧರ್ಮದ ನೆಪದಲ್ಲಿ ಕಾನೂನು ಕೈಗೆ ತೆಗೆದು­ಕೊಳ್ಳುವ ಅಧಿಕಾರವೂ ಇಲ್ಲ’ ಎಂದು ಗುಡುಗಿದರು.

‘ಮತೀಯವಾದ ಜನರ ಹೃದಯ­ಗಳನ್ನು ಒಡೆ­ದಿದೆ. ರಾಜಕೀಯಕ್ಕಾಗಿ ಧರ್ಮಗಳನ್ನು ದುರ್ಬಳಕೆ ಮಾಡು­ವುದು ನಿಲ್ಲಬೇಕು. ಸರ್ವ ಧರ್ಮಗಳು ಸಮೃದ್ಧವಾಗಬೇಕು. ಇದು ಭಾರತದಲ್ಲಿ ಮಾತ್ರ ಸಾಧ್ಯ. ಸಾವಿರಾರು ವರ್ಷಗಳ ಇತಿಹಾಸ ಆಧರಿಸಿ ಸಿದ್ಧಪಡಿಸಿರುವ ಸಂವಿಧಾನ ಮಾತ್ರ ಎಲ್ಲ ಧರ್ಮಗಳ ಪ್ರಗತಿಗೆ ಸಮಾನ ಅವಕಾಶ ನೀಡಲಿದೆ.

ಧಾರ್ಮಿಕ ವೈವಿಧ್ಯವೇ ದೇಶದ ಜೀವಾಳ. ವೈವಿಧ್ಯತೆ­ಯಲ್ಲಿ ಏಕತೆ ಕಾಣುತ್ತಿ­ದ್ದೇವೆ. ಅನನ್ಯ ಸಂವಿಧಾನದಿಂದ ಇದು ಸಾಧ್ಯವಾಗಿದೆ. ಅದರ ಚೌಕ­ಟ್ಟಿನೊಳಗೇ ನಾವು ಮುನ್ನಡೆ­ಯಬೇಕು. ತ್ರಿವರ್ಣವೇ ನಮಗೆ ಮುಖ್ಯವಾಗಬೇಕೆ ವಿನಾ ಮತ್ಯಾವ ಬಣ್ಣವೂ ಅಲ್ಲ’ ಎಂದು ಪ್ರಧಾನಿ ಬಲವಾಗಿ ಪ್ರತಿಪಾದಿಸಿದರು.

‘ಇಷ್ಟು ವರ್ಷ ಹೊಡೆದಾಡಿದ್ದು ಸಾಕು. ಇನ್ನು ಮುಂದಾ­ದರೂ ಒಟ್ಟಾಗಿ ಬಡತನದ ವಿರುದ್ಧ ಹೋರಾ­­ಡೋಣ’ ಎಂದು ಪ್ರಧಾನಿ ಮನವಿ ಮಾಡಿದರು.

ಲೋಕಸಭೆ ಮತ್ತು ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ನೀಡಿದ್ದ ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಘೋಷಣೆಯನ್ನು ಪ್ರಧಾನಿ ಸದನ­ದೊಳಗೂ ಪುನರುಚ್ಚರಿಸಿದರು. ದೇಶದ ಒಳಿತಿಗಾಗಿ ಸರ್ಕಾರದ ಜತೆ ಸಹಕರಿ­ಸುವಂತೆ ವಿರೋಧ ಪಕ್ಷಗಳಿಗೆ ಮನವಿ ಮಾಡಿದರು.

ದೇಶದ ಅಭಿವೃದ್ಧಿಗೆ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡ­ಬೇಕಾದ ಅಗತ್ಯವಿದೆ. ಸರ್ಕಾರ ಪ್ರಗತಿ ಉದ್ದೇಶದಿಂದ ಜಾರಿಗೆ ತರುತ್ತಿರುವ ಕಾರ್ಯಕ್ರಮಗಳಿಗೆ ಬೆಂಬಲ ಕೊಡಿ ಎಂದು ಪ್ರಧಾನಿ ಕೇಳಿದರು. ತಮ್ಮ ಸುದೀರ್ಘ ಭಾಷಣದಲ್ಲಿ ಅವರು ಬಹುತೇಕ ಕಪ್ಪುಹಣ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಕಲ್ಲಿದ್ದಲು ಗಣಿ ಹಂಚಿಕೆ, ಭ್ರಷ್ಟಾಚಾರ, ರಾಜ್ಯಗಳ ಸಬಲೀಕರಣ, ಜನಧನ ಯೋಜನೆ, ಸ್ವಚ್ಛ ಭಾರತ ಅಭಿಯಾನ ಸೇರಿ ಎಲ್ಲ ವಿಷಯಗಳನ್ನು   ಉಲ್ಲೇಖಿಸಿದರು.

‘ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ ಬಗ್ಗೆ ಪ್ರಸ್ತಾಪಿಸಿ ವಿರೋಧ ಪಕ್ಷವನ್ನು ಚುಚ್ಚಿದರು. ಈ ಕಾರ್ಯಕ್ರಮ ಮುಂದು­ವರಿಯಲಿದೆ. ಅದು ನಿಲ್ಲ­ಲಿದೆ ಎಂಬ ಆತಂಕ ಅನಗತ್ಯ. ನಿಮ್ಮ ವೈಫಲ್ಯಗಳಿಗೆ ಸಾಕ್ಷಿ ಆಗಿರುವ ‘ನರೇಗಾ’ ಯೋಜನೆ ನಿಲ್ಲುವುದಿಲ್ಲ. 60 ವರ್ಷಗಳ ಸ್ವಾತಂತ್ರ್ಯದ ಬಳಿಕವೂ ಬಡವರ ಕೈಯಲ್ಲಿ ನೆಲ ಅಗೆಸುವ ಯೋಜನೆ ಹಿಂದಿನ ಉದ್ದೇಶ ಏನೆಂದು ಜನರಿಗೆ ಅರ್ಥವಾಗಬೇಕು’ ಎಂದು ಮೋದಿ ಲೇವಡಿ ಮಾಡಿದರು.

ಆಗ ಆಡಳಿತ ಪಕ್ಷದ ಸದಸ್ಯರೆಲ್ಲ ಜೋರಾಗಿ ನಕ್ಕರು. ಒಂಬತ್ತು ತಿಂಗಳಲ್ಲಿ ಸರ್ಕಾರ ಎಲ್ಲ­ವನ್ನೂ ಮಾಡಿದೆ ಎಂದು ಹೇಳುವುದಿಲ್ಲ. ಎಲ್ಲಿ ವಿರೋಧ ಪಕ್ಷಗಳು ಮೆಚ್ಚುಗೆಗೆ ಅರ್ಹವಾಗಿವೆಯೊ, ಅಲ್ಲಿ ಒಳ್ಳೆಯ ಮಾತುಗಳನ್ನು ಹೇಳಲು ನನಗೆ ಹಿಂಜರಿಕೆ ಇಲ್ಲ ಎಂದು ಪ್ರಧಾನಿ ನುಡಿದರು.

ಕಪ್ಪುಹಣ ಕ್ರಮಕ್ಕೆ ಸಿದ್ಧ: ಕಪ್ಪು ಹಣ ಹೊಂದಿರುವವರ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧವಿದ್ದು, ಈ ವಿಷಯದಲ್ಲಿ ದಾರಿ ಬದಲಿಸುವ ಪ್ರಶ್ನೆ ಇಲ್ಲ ಎಂದು ಮೋದಿ ಹೇಳಿದರು.

ರಾಜಕಾರಣಿಗಳು ಮಾತ್ರ ವಿದೇಶಗಳಲ್ಲಿ ಕಪ್ಪು ಹಣ ಇಟ್ಟಿಲ್ಲ. ಬೇರೆಯವರೂ ಹೊಂದಿದ್ದಾರೆ. ಕಪ್ಪು ಹಣ ಹೊಂದಿರುವ ಎಲ್ಲರ ಮೇಲೂ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ಯಾರನ್ನೂ ಬಿಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಪ್ಪು ಹಣದ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದೇವೆ. ಈ ಜವಾಬ್ದಾರಿಯಿಂದ ನುಣುಚಿ­ಕೊಳ್ಳುವುದಿಲ್ಲ. ಆದರೆ, ಸರ್ಕಾರ ಸೇಡಿನಿಂದ ಕೆಲಸ ಮಾಡುತ್ತಿದೆ ಎಂಬ ಭಾವನೆ ಯಾರಿಗೂ ಬರಬಾರದು ಎಂದರು.

ಕಪ್ಪು ಹಣ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದ ಬಳಿಕವೂ ಹಿಂದಿನ ಯುಪಿಎ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಸಂಪುಟ ಸಭೆಯಲ್ಲೇ ಎಸ್‌ಐಟಿ ರಚಿಸಲು ನಿರ್ಧಾರ ಮಾಡಿತು ಎಂದು ಅವರು ವಿವರಿಸಿದರು.

ಭ್ರಷ್ಟಾಚಾರ ಕುರಿತು ಮಾತನಾಡಿದ ಪ್ರಧಾನಿ, ಈ ಪಿಡುಗು ತೊಲಗಿಸಲು ಸಹಕಾರ ನೀಡುವಂತೆ ಎಲ್ಲ ಪಕ್ಷಗಳಿಗೂ ಮನವಿ ಮಾಡಿದರು. ನಾವು ಪರಸ್ಪರ ದೋಷಾರೋಪದಲ್ಲಿ ತೊಡಗದೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಕಡೆ ಗಮನ ಹರಿಸಬೇಕು ಎಂದರು.

ಮಸೂದೆಗೆ ತಿದ್ದುಪಡಿ: ಸಂಸತ್ತಿನೊಳಗೆ ಹಾಗೂ ಹೊರಗೆ ತೀವ್ರ ಪ್ರತಿಭಟನೆಗೆ ಕಾರಣ­ವಾಗಿರುವ  ಭೂಸ್ವಾಧೀನ ಮಸೂದೆಗೆ ತಿದ್ದುಪಡಿ ಮಾಡಲು ಸಿದ್ಧ. ಈ ವಿಷಯ­ದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಬೆಂಬಲ ಕೊಡಿ ಎಂದು ಪ್ರಧಾನಿ ವಿರೋಧ ಪಕ್ಷಗಳಿಗೆ ಮನವಿ ಮಾಡಿದರು.

ಎರಡು ವರ್ಷದ ಹಿಂದೆ ನೀವು ಅವಸರದಲ್ಲಿ ಭೂಸ್ವಾಧೀನ ಮಸೂದೆ ಜಾರಿಗೆ ತಂದಿರಿ. ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಪ್ರಯತ್ನಿಸಿದಿರಿ. ಆಗ ನಾವು ನಿಮಗೆ ಬೆಂಬಲ ಕೊಟ್ಟಿದ್ದೇವೆ. ಈಗ ನೀವು ಇದನ್ನು ಪ್ರತಿಷ್ಠೆ ಪ್ರಶ್ನೆ ಮಾಡಿಕೊಳ್ಳದೆ ಸಹಕಾರ ನೀಡಿ ಎಂದು ಮೋದಿ ಕೇಳಿದರು.

ಕಾಂಗ್ರೆಸ್‌ ಜಾರಿಗೆ ತಂದಿರುವ ಭೂಸ್ವಾಧೀನ ಕಾಯ್ದೆ ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ. ಮೂಲಸೌಲಭ್ಯ ಯೋಜನೆಗಳ ಅಭಿವೃದ್ಧಿಗೆ ಅಡ್ಡಿಯಾಗಲಿದೆ ಎಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹೇಳಿದ್ದರಿಂದ ಕೆಲವು ಮಾರ್ಪಾಡು ಮಾಡಲು ಸರ್ಕಾರ ಮುಂದಾಗಿದೆ ಎಂದು ಅವರು ಹೇಳಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಗಳ ಅಭಿಪ್ರಾಯಗಳನ್ನು ತಳ್ಳಿಹಾಕುವುದು ಸರಿಯೇ? ರೈತರ ಹಿತಾಸಕ್ತಿ ಕಡೆಗಣಿಸುವುದು ತರವೇ? ಅದು ಅಹಂಕಾರದ ನಡೆ ಆಗುವು­ದಿಲ್ಲವೇ? ಮಸೂದೆ ರೈತರ ಹಿತಾಸಕ್ತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿಗೆ ಮಾರಕವಾಗಿದೆ ಎಂಬ ಅಭಿಪ್ರಾಯ ಬಂದಾಗ, ಬದಲಾವಣೆ ಮಾಡುವುದು ನಮ್ಮ ಹೊಣೆ ಅಲ್ಲವೇ ಎಂದು ಪ್ರಧಾನಿ ಕೇಳಿದರು.

ಮಸೂದೆಯಲ್ಲಿ ಏನಾದರೂ ಲೋಪ­ಗಳಿದ್ದರೆ ಸರಿಪಡಿಸಲು ಸಿದ್ಧ. ಆದರೆ, ಇದನ್ನು ಪ್ರತಿಷ್ಠೆ ಪ್ರಶ್ನೆ ಮಾಡಬೇಡಿ ಎಂದು ನರೇಂದ್ರ ಮೋದಿ ವಿರೋಧ ಪಕ್ಷಗಳಿಗೆ ಕಳಕಳಿ ಮನವಿ ಮಾಡಿದರು.

‘ಭಾಷಣದಿಂದ ಹೊಟ್ಟೆ ತುಂಬದು’: ‘ಸುಂದರ ಶಬ್ದಗಳನ್ನು ಪೋಣಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡುವ ಅದ್ಭುತ ಭಾಷಣದಿಂದ ಬಡವರ ಖಾಲಿ ಹೊಟ್ಟೆ ತುಂಬುವುದಿಲ್ಲ ’ ಎಂದು  ಕಾಂಗ್ರೆಸ್‌ ನಾಯಕ ಮಲ್ಲಿಕಾ­ರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ.  ಯುಪಿಎ ಸರ್ಕಾರದ ಮಹತ್ವಾಕಾಂಕ್ಷೆ­ಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಬಗ್ಗೆ ಪ್ರಧಾನಿ ಮೋದಿ ಮಾಡಿದ ಅಪಹಾಸ್ಯಕ್ಕೆ ಖರ್ಗೆ ಈ ರೀತಿ ತಿರುಗೇಟು ನೀಡಿದರು.

ಮೋದಿ ಅವರ ಭಾಷಣ ಅದ್ಭುತವಾಗಿತ್ತು ಎಂಬುವುದರಲ್ಲಿ ಎರಡು ಮಾತಿಲ್ಲ. ಆದರೆ, ಬರೀ ಭಾಷ­ಣದಿಂದ ಬಡವರ ಹೊಟ್ಟೆ ತುಂಬು­ತ್ತದೆಯೇ. ಯುಪಿಎ ಸರ್ಕಾರ ಬಡವರ ಹೊಟ್ಟೆ ತುಂಬಿಸಲು ಉದ್ಯೋಗ ಖಾತ್ರಿ ಯೋಜನೆ ರೂಪಿಸಿತ್ತು ಎಂದರು.
‘ಪ್ರಧಾನಿಯಿಂದ ಸ್ಪಷ್ಟನೆ ಪಡೆ­ಯಲು ಮಾತ್ರ ಅವಕಾಶವಿದೆ. ಭಾಷಣ ಮಾಡಲು ಅಲ್ಲ’ ಎಂದು ಸ್ಪೀಕರ್‌ ಸುಮಿತ್ರಾ ಮಹಾಜನ್‌,  ಖರ್ಗೆ ಅವರಿಗೆ ಹೇಳಿದರು.

‘ಮೋದಿ ಮುಖ್ಯ­ಮಂತ್ರಿಯಾ­ಗಿದ್ದಾಗಲೂ ಗುಜರಾತ್‌ ಏಕೆ ಬಡ ರಾಜ್ಯವಾಗಿ ಉಳಿದಿತ್ತು?’ ಎಂದು ಖರ್ಗೆ  ಪ್ರಶ್ನಿಸಿದರು.

ಮಸೂದೆಗೆ ತಿದ್ದುಪಡಿ
​ಸಂಸತ್ತಿನೊಳಗೆ ಹಾಗೂ ಹೊರಗೆ ತೀವ್ರ ಪ್ರತಿಭಟನೆಗೆ ಕಾರಣವಾಗಿರುವ    ಭೂಸ್ವಾಧೀನ ಮಸೂದೆಗೆ ತಿದ್ದುಪಡಿ ಮಾಡಲು ಸಿದ್ಧ. ಈ ವಿಷಯದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಬೆಂಬಲ ಕೊಡಿ ಎಂದು ಪ್ರಧಾನಿ ವಿರೋಧ ಪಕ್ಷಗಳಿಗೆ ಮನವಿ ಮಾಡಿದರು.

***
ಹಿಂದೂಗಳು ಯಾರ ವಿರುದ್ಧ ಹೋರಾಡುತ್ತಾರೆ. ಮುಸ್ಲಿಮರ ವಿರುದ್ಧವೊ ಅಥವಾ  ಬಡತನದ ವಿರುದ್ಧವೊ? ಮುಸ್ಲಿಮರು ಯಾರ ವಿರುದ್ಧ ಹೊಡೆದಾಡುತ್ತಾರೆ. ಹಿಂದೂಗಳ  ವಿರು­ದ್ಧವೊ  ಅಥವಾ ಬಡತನದ ವಿರುದ್ಧವೊ?
– ಪ್ರಧಾನಿ ನರೇಂದ್ರ ಮೋದಿ

‘ಭಾಷಣ ಹೊಟ್ಟೆ ತುಂಬಿಸದು’
ಸುಂದರ ಶಬ್ದಗಳನ್ನು ಪೋಣಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡುವ ಅದ್ಭುತ ಭಾಷಣದಿಂದ ಬಡವರ ಖಾಲಿ ಹೊಟ್ಟೆ ತುಂಬುವುದಿಲ್ಲ
– ಮಲ್ಲಿಕಾ­ರ್ಜುನ ಖರ್ಗೆ,- ಕಾಂಗ್ರೆಸ್‌ ನಾಯಕ

Write A Comment