ಕನ್ನಡ ವಾರ್ತೆಗಳು

ನಿರ್ಲಕ್ಷಿಸದಿರಿ ಕಣ್ಣಿನ ಕ್ಯಾನ್ಸರ್‌

Pinterest LinkedIn Tumblr

–ಡಾ. ಪಿ. ಮಹೇಶ್ ಷಣ್ಮುಗಂ

bhec28Eye

ನಲ್ವತ್ತು ವರ್ಷ ವಯಸ್ಸಿನ ಸುಪ್ರಿಯಾ ಸಾಫ್ಟ್‌ವೇರ್ ವೃತ್ತಿಯಲ್ಲಿದ್ದು, ಬದುಕಿನಲ್ಲಿ ಬೇಕಾದ ಎಲ್ಲವೂ ಅವರಿಗೆ ಸಿಕ್ಕಿದೆ. ಪ್ರೀತಿಸುವ ಗಂಡ ಮತ್ತು ಇಬ್ಬರು ಮಕ್ಕಳಿದ್ದಾರೆ. ಒಂದು ದಿನ ಅವರು ತಮ್ಮ ಕಂಪ್ಯೂಟರ್ ಮುಂದೆ ಕುಳಿತಾಗ ಅವರಿಗೆ ಕಂಪ್ಯೂಟರ್ ಸ್ಕ್ರೀನಿನ ಮೇಲೆ ಕಪ್ಪು ನೆರಳು ಕಾಣುತ್ತದೆ.

‘ಮಾನಿಟರ್ ಹಾಳಾಗಿರಬಹುದು’ ಎಂದು ಭಾವಿಸಿ ಕಪ್ಪಾದ ಭಾಗವನ್ನು ಉಜ್ಜಿ ಒರೆಸಲು ಪ್ರಯತ್ನಿಸುತ್ತಾರೆ. ಆದರೆ ಅವರು ಒಂದು ಕಡೆಯಿಂದ ಮತ್ತೊಂದು ಕಡೆ ತಿರುಗಿದಂತೆ ಕಪ್ಪು ನೆರಳು ಕಂಪ್ಯೂಟರ್ ಸ್ಕ್ರೀನ್ ಮೇಲೆ ಇಲ್ಲ ತನ್ನ ದೃಷ್ಟಿಯಲ್ಲೇ ಇದೆ ಎಂದು ಅರ್ಥವಾಗುತ್ತದೆ. ಅವರು ತಮ್ಮ ಕನ್ನಡಕವನ್ನು ತೆಗೆದು ಸ್ವಚ್ಛಗೊಳಿಸಿ ಮತ್ತೆ ಧರಿಸುತ್ತಾರೆ. ಆದರೂ ಅದು ಹಾಗೆಯೇ ಉಳಿಯುತ್ತದೆ. ಇದರಿಂದ ತಮ್ಮ ಕಣ್ಣಿನಲ್ಲಿಯೇ ಸಮಸ್ಯೆ ಇದೆ ಎಂದು ಅವರು ನೇತ್ರತಜ್ಞರಲ್ಲಿ ಪರೀಕ್ಷೆ ಮಾಡಿಸುತ್ತಾರೆ.

ನೇತ್ರಪರೀಕ್ಷೆಯ ಸಂದರ್ಭದಲ್ಲಿ ಸುಪ್ರಿಯಾ ಅವರ ಎಡಗಣ್ಣಿನ ದೃಷ್ಟಿ 6/6 ಇರುತ್ತದೆ. ಇದು ಸಾಮಾನ್ಯ ವ್ಯಕ್ತಿಗಳ ದೃಷ್ಟಿಯ ಸ್ಥಿತಿ. ಆದರೆ ನಂತರ ಅಕ್ಷರಗಳು ಸೊಟ್ಟಗೆ, ಅಸ್ತವ್ಯಸ್ತವಾದಂತೆ ಕಾಣುತ್ತವೆ. ಆಕೆಯನ್ನು ಪರೀಕ್ಷೆ ಮಾಡಿದಾಗ ಅವರಲ್ಲಿ ಕಣ್ಣಿನ ಒಳಗಡೆಯ ಪದರದ ಮೇಲೆ ಬೆಳೆಯುವ ಗಡ್ಡೆ ‘ಕೊರೊಯ್ಡಲ್ ಮೆಲನೊಮಾ’ ಅವರಲ್ಲಿ ರೂಪುಗೊಂಡಿದ್ದು ಪತ್ತೆಯಾಗುತ್ತದೆ.

ಇದು ಅಪರೂಪವಾದರೂ ಗಡ್ಡೆಗಳು ಕಣ್ಣಿನಲ್ಲೂ ಉಂಟಾಗಬಹುದು. ಈ ಗಡ್ಡೆಗಳು ದೃಷ್ಟಿಯ ಸೂಕ್ಷ್ಮ ಪ್ರದೇಶಗಳಾದ ರೆಟಿನಾ ಅಥವಾ ಕೊರೊಯ್ಡ್ ಎಂಬ ಪದರದ ಮೇಲೆ ಉಂಟಾಗುತ್ತವೆ. ಅವು ಊದಿಕೊಳ್ಳುವುದರಿಂದ ಅಥವಾ ರೆಟಿನಾ ಪ್ರತ್ಯೇಕಗೊಳ್ಳುವುದರಿಂದ ಮಸುಕಾಗುವುದು ಅಥವಾ ಅಸ್ಪಷ್ಟ ದೃಷ್ಟಿ ಉಂಟಾಗುತ್ತದೆ. ಕಣ್ಣಿನ ಒತ್ತಡ ಹೆಚ್ಚಾಗುವುದರಿಂದ ಕಣ್ಣಿನ ಒಳಗಡೆ ಉರಿಯೂತದಿಂದ ಅಪರೂಪಕ್ಕೆ ಅವು ನೋವುಂಟು ಮಾಡಬಹುದು. ಈ ಗುಣಗಳು ಕಣ್ಣಿನ ಗಡ್ಡೆಯ ಲಕ್ಷಣಗಳೂ ಆಗಿಲ್ಲದೆಯೂ ಇರಬಹುದು.

ಕಣ್ಣಿನ ಗಡ್ಡೆಯ ವಿಧಗಳು: ವಯಸ್ಕರಲ್ಲಿ ಕ್ಯಾನ್ಸರ್‌ಕಾರಕ ಮತ್ತು ಕ್ಯಾನ್ಸರ್ ರಹಿತ ಗಡ್ಡೆಗಳು ಕಣ್ಣಿನ ಒಳಗಡೆ ಉಂಟಾಗಬಹುದು. ಅವುಗಳಲ್ಲಿ ‘ಮೆಟಾಸ್ಟಾಸಿಸ್’ ಅತ್ಯಂತ ಸಾಮಾನ್ಯವಾಗಿದ್ದು ದೇಹದ ಇತರೆ ಭಾಗಗಳಲ್ಲಿ ಉಂಟಾಗಿ ಕಣ್ಣಿಗೆ ಹರಡಬಹುದು. ಕ್ಯಾನ್ಸರ್‌ರಹಿತ ಟ್ಯೂಮರ್‌ಗಳಾದ ‘ಹೆಮಂಜಿಯೊಮಾ’ ಹಾನಿಕಾರಕವಾಗಿದ್ದು ದೃಷ್ಟಿ ನಾಶವಾದರೂ ಕಣ್ಣಿನ ಆಚೆಗೆ ವಿಸ್ತರಿಸುವುದಿಲ್ಲ. ಕ್ಯಾನ್ಸರ್‌ಕಾರಕ ಟ್ಯೂಮರ್‌ಗಳಾದ ‘ಮೆಲನೊಮಾ’ ಕಣ್ಣಿನಿಂದ ದೇಹದ ಇತರೆ ಭಾಗಗಳಿಗೆ ಹರಡಿ ಚಿಕಿತ್ಸೆ ನೀಡದಿದ್ದರೆ ಸಾವು ಸಂಭವಿಸಬಹುದು.

‘ಮೆಲನೊಮಾ’ ಯೂರೋಪ್‌ನ ವಯಸ್ಕರಿಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ ಮತ್ತು ಅದೃಷ್ಟವಶಾತ್ ಭಾರತದಲ್ಲಿ ಇದು ಅಪರೂಪ. ಆದ್ದರಿಂದ ನಾವು ಅರ್ಥ ಮಾಡಿಕೊಳ್ಳಬೇಕಾದುದು ಒಳಗಣ್ಣಿನ ಗಡ್ಡೆಗಳು ಯಾವುದೇ ಬಗೆಯ ವಿಶಿಷ್ಟ ರೋಗಚಿಹ್ನೆಗಳಿರುವುದಿಲ್ಲ- ಸಾಮಾನ್ಯವಾಗಿ ಅವು ದೃಷ್ಟಿಯ ರೋಗಚಿಹ್ನೆಗಳಂತೆ ಕಾಣಿಸಿಕೊಳ್ಳುತ್ತವೆ. ಇತರೆ ಕಣ್ಣಿನ ಗಡ್ಡೆಗಳು 40ರ ವಯಸ್ಸು ಮೀರಿದವರನ್ನು ಬಾಧಿಸುತ್ತವೆ. ಆದ್ದರಿಂದ ವರ್ಷಕ್ಕೊಮ್ಮೆ ನೇತ್ರಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಮತ್ತು ಕಣ್ಣಿನ ಪಾಪೆ ವಿಸ್ತರಿಸಿ ಕಣ್ಣಿನ ಒಳಗಡೆ ಪರೀಕ್ಷೆ ಮಾಡಿಸಬೇಕು. ಇದರಿಂದ ಕಣ್ಣಿನ ಟ್ಯೂಮರ್‌ ಪ್ರಾರಂಭಿಕ ಹಂತದಲ್ಲಿಯೇ ಕಂಡುಬರುವುದಲ್ಲದೆ ಇತರೆ ಕಣ್ಣಿನ ಸಮಸ್ಯೆಗಳೂ ಪತ್ತೆಯಾಗುತ್ತವೆ.

ಭಾರತೀಯರಲ್ಲಿ ಕಣ್ಣಿನ ಕ್ಯಾನ್ಸರ್
ಭಾರತೀಯರಲ್ಲಿ ಅತ್ಯಂತ ಸಾಮಾನ್ಯವಾಗಿ ‘ರೆಟಿನೊಬ್ಲಾಸ್ಟೊಮಾ’ ಕ್ಯಾನ್ಸರ್‌ಕಾರಕ ಟ್ಯೂಮರ್ ಆಗಿದ್ದು. ಶಿಶುಗಳು ಮತ್ತು ಮಕ್ಕಳನ್ನು ಬಾಧಿಸುತ್ತದೆ. ಇದು ‘ಬೆಕ್ಕಿನ ಕಣ್ಣಿನ ಪ್ರತಿಫಲನ’ ಅಥವಾ ‘ಬಿಳಿ ಪ್ರತಿಫಲನ’ದಂತೆ ರಾತ್ರಿ ವೇಳೆ ಬೆಕ್ಕಿನ ಕಣ್ಣುಗಳು ಕಾಣುವ ಹಾಗೆ ಹೊಳೆಯುತ್ತದೆ. ಅದನ್ನು ತಾಯಿ ಅಥವಾ ಕುಟುಂಬ ಸದಸ್ಯರು ಗುರುತಿಸುತ್ತಾರೆ. ಟ್ಯೂಮರ್ ಮೆಳ್ಳಗಣ್ಣಿಗೆ ಕಾರಣವಾಗಬಹುದು. ಮಕ್ಕಳಲ್ಲಿ ಮೆಳ್ಳಗಣ್ಣನ್ನು ಕಣ್ಣಿನ ಪರೀಕ್ಷೆಯ ಮೂಲಕ ಜೀವಹಾನಿ ಉಂಟು ಮಾಡುವ ‘ರೆಟಿನೊಬ್ಲಾಸ್ಟೊಮಾ’ದ ಅಪಾಯವಿಲ್ಲ ಎಂದು ದೃಢೀಕರಿಸಿಕೊಳ್ಳಬೇಕು.

ಕೆಲ ಕಣ್ಣಿನ ಟ್ಯೂಮರ್‌ಗಳು ಕಣ್ಣಿನ ಮೇಲ್ಮೈ-‘ಕಂಜಕ್ಟಿವಾ’, ರೆಪ್ಪೆಗಳು ಮತ್ತು ನೇತ್ರಕುಹರದ ಹಿಂದಿನ ಕಣ್ಣಗುಡ್ಡೆಯನ್ನು ಬಾಧಿಸುತ್ತದೆ. ಕಂಜಕ್ಟಿವಾದ ಟ್ಯೂಮರ್‌ಗಳು ಮದ್ರಾಸ್ ಕಣ್ಣಿನಂತಹ ಕೆಂಪು ಕಣ್ಣಿನಂತೆ ಕಾಣಬಹುದು. ಕೆಂಪುತನ ಕಣ್ಣಿನ ಬಿಳಿಭಾಗಕ್ಕೆ ಸೀಮಿತವಾಗಿರುತ್ತದೆ. ಕಂಜಕ್ಟಿವಿಟಿಸ್ ವೈರಸ್‌ನಿಂದ ಸಂಭವಿಸುತ್ತದೆ. ಇದು ಸಾಮಾನ್ಯವಾಗಿ ಎರಡೂ ಕಣ್ಣುಗಳನ್ನು ಬಾಧಿಸುತ್ತದೆ. ಕೆಂಪುತನ ಕಣ್ಣಿನ ಬಿಳಿಭಾಗವನ್ನು ಬಾಧಿಸುತ್ತದೆ ಮತ್ತು ಕಣ್ಣಿನ ವಿಸರ್ಜನೆಯಲ್ಲಿ ಹೊರಹೋಗುತ್ತದೆ.

ಕಂಜಕ್ಟಿವಿಟಿಸ್ ದಿಢೀರ್ ಆಗಿ ಸಂಭವಿಸುತ್ತದೆ ಮತ್ತು ಒಂದು ವಾರದಲ್ಲಿ ಗುಣವಾಗುತ್ತದೆ. ಆದ್ದರಿಂದ ಒಂದು ಕಣ್ಣು ಮಾತ್ರ ಕೆಂಪಾಗಿದ್ದರೆ ಅದು ಒಂದು ವಾರದಲ್ಲಿ ಗುಣವಾಗದೇ ಇದ್ದರೆ ನೇತ್ರತಜ್ಞರಲ್ಲಿ ಪರೀಕ್ಷೆ ಮಾಡಿಸುವುದು ಉತ್ತಮ. ರೆಪ್ಪೆಯ ಗಡ್ಡೆಗಳು ಕಣ್ಣಿನ ರೆಪ್ಪೆಯ ಮೇಲೆ ನೋವುರಹಿತ ಗುಡ್ಡೆಗಳಂತೆ ಕಾಣಿಸಿಕೊಂಡು ನಿಧಾನವಾಗಿ ಬೆಳೆಯುತ್ತವೆ. ಇದರಿಂದ ರೆಪ್ಪೆಕೂದಲು ನಷ್ಟವಾಗಬಹುದು, ಕಣ್ಣರೆಪ್ಪೆಯ ಅಂಚಿನಲ್ಲಿ ಅಸಹಜತೆ ಮತ್ತು ರೆಪ್ಪೆಯ ಅಸಹಜ ಮುಚ್ಚುವಿಕೆ ಉಂಟಾಗುತ್ತದೆ. ಇವುಗಳಲ್ಲಿ ಯಾವುದೇ ಸೂಚನೆಗಳಿದ್ದರೆ ಅಥವಾ ಗಂಭೀರ ವಿಸರ್ಜನೆ ಸಂಭವಿಸುತ್ತಿದ್ದರೆ ನೇತ್ರಪರೀಕ್ಷೆ ಮಾಡಿಸಿಕೊಳ್ಳಬೇಕು.

‘ಆರ್ಬಿಟಲ್’(ಕಕ್ಷೀಯ) ಗಡ್ಡೆಗಳು ಕಣ್ಣು ಮತ್ತು ಕಣ್ಣಿನ ಹಿಂಭಾಗದಲ್ಲಿ ಬಾಧಿಸುತ್ತವೆ. ಈ ಪ್ರದೇಶದ ಗಡ್ಡೆಗಳು ಕ್ಯಾನ್ಸರ್‌ಕಾರಕ ಅಥವಾ ಕ್ಯಾನ್ಸರ್‌ರಹಿತವಾಗಿರಬಹುದು. ಅವುಗಳು ಕಣ್ಣಗುಡ್ಡೆಯ ಹಿಂಭಾಗದಲ್ಲಿರುವುದರಿಂದ ಅವು ರೋಗ ಮುಂದುವರಿದಂತೆ ಕಣ್ಣಿನ ಕುಹರದಿಂದ ಹೊರಕ್ಕೆ ತಳ್ಳಲು ಯತ್ನಿಸುತ್ತವೆ. ಪ್ರಾರಂಭಿಕ ಹಂತಗಳಲ್ಲಿ ಅವುಗಳಿಂದ ಎರಡು ದೃಷ್ಟಿ, ಶುಷ್ಕತನ, ಕಣ್ಣರೆಪ್ಪೆ ಸರಿಯಾಗಿ ಮುಚ್ಚದಿರುವಿಕೆಯಿಂದ ಮುಖದ ಅಂದ ಹಾಳಾಗುತ್ತದೆ.

ರೋಗಪತ್ತೆ ಮತ್ತು ಚಿಕಿತ್ಸೆ
ಕಣ್ಣಿನ ಗಡ್ಡೆಗಳು ಕಣ್ಣಿನ ವಿವಿಧ ಭಾಗಗಳಿಗೆ ಹಾನಿಯುಂಟು ಮಾಡಬಲ್ಲದು ಮತ್ತು ಕ್ಯಾನ್ಸರ್‌ಕಾರಕ ಅಥವಾ ಕ್ಯಾನ್ಸರ್‌ರಹಿತ ಟ್ಯೂಮರ್‌ಗಳಾಗಿರಬಹುದು. ಕಣ್ಣಿನ ಮೇಲ್ಮೈಯನ್ನು ಬಾಧಿಸುವ ಗಡ್ಡೆಗಳು ಕಣ್ಣಿಗೆ ಕಾಣುತ್ತವೆ ಮತ್ತು ಉರಿ, ಕೆಂಪಾಗುವಿಕೆ, ಗೀಜು ಕಟ್ಟುವುದು, ಕಾಣುವಂತೆ ಗಡ್ಡೆಗಳು ಅಥವಾ ರೆಪ್ಪೆಗೂದಲ ನಷ್ಟವಾಗಬಹುದು. ಕಣ್ಣಿನ ಒಳಗಿನ ಗಡ್ಡೆಗಳು ದೃಷ್ಟಿ ತೊಂದರೆಗಳ ಮುನ್ಸೂಚನೆ ನೀಡುತ್ತವೆ ಮತ್ತು ಕಣ್ಣಿನ ಒಳಗಡೆ ಹಿಗ್ಗಿದಾಗ ಪರೀಕ್ಷೆ ಮಾಡುವುದು ಅಗತ್ಯ.

ಬಹಳಷ್ಟು ಟ್ಯೂಮರ್‌ಗಳು 40 ವರ್ಷ ಮೀರಿದವರಿಗೆ ಮಾತ್ರ ಬಾಧಿಸುವುದರಿಂದ ವರ್ಷಕ್ಕೊಮ್ಮೆ ನೇತ್ರಪರೀಕ್ಷೆ ಅಗತ್ಯ. ಕಣ್ಣಿನಲ್ಲಿ ಅಸಹಜ ಪ್ರತಿಫಲನ ಅಥವಾ ಮೆಳ್ಳಗಣ್ಣುಗಳನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು. ‘ರೆಟಿನೊಬ್ಲಾಸ್ಟೊಮಾ’ ಮತ್ತಿತರೆ ರೆಟಿನಾದ ಟ್ಯೂಮರ್‌ಗಳಾದ ‘ರೆಟಿನಲ್ ಹೆಮಂಜಿಯೋಮಾ’ ಕೌಟುಂಬಿಕವಾದುದು.

ಆದ್ದರಿಂದ ಕಣ್ಣಿನ ಟ್ಯೂಮರ್‌ಗಳ ಕೌಟುಂಬಿಕ ಇತಿಹಾಸ ಹೊಂದಿದವರು ಶಿಶುವಿನಲ್ಲೇ ನೇತ್ರಪರೀಕ್ಷೆ ಮಾಡಿಸಿ ನಂತರ ದೀರ್ಘ ಅವಧಿಯಲ್ಲಿ ಆಕ್ಯುಲರ್ ಆಂಕಾಲಜಿಸ್ಟರ ಮೇಲ್ವಿಚಾರಣೆಯಲ್ಲಿರಬೇಕು. ಪ್ರಾರಂಭಿಕ ಹಂತದ ರೋಗಪತ್ತೆ ಮತ್ತು ಕಣ್ಣಿನ ಟ್ಯೂಮರ್‌ಗಳ ಸೂಕ್ತ ಚಿಕಿತ್ಸೆಯಿಂದ ದೃಷ್ಟಿ ಮತ್ತು ರೋಗಿಯ ಜೀವ ಉಳಿಯುತ್ತದೆ.

Write A Comment