ರಾಷ್ಟ್ರೀಯ

ಸರ್ಕಾರದ ರಹಸ್ಯ ದಾಖಲೆ ಕಳವು ಪ್ರಕರಣ: 10 ಸಾವಿರ ಕೋಟಿ ಮೊತ್ತದ ಹಗರಣ?

Pinterest LinkedIn Tumblr

Raj-nsdkfhsdjkahf

ನವದೆಹಲಿ: ಸರ್ಕಾರಿ ನೌಕರರು ಮತ್ತು ಕೆಲವು ಪ್ರತಿಷ್ಠಿತ ಕಾರ್ಪೊ­ರೇಟ್‌ ಕಂಪೆನಿಗಳ ಉದ್ಯೋಗಿ­ಗಳು ಭಾಗಿಯಾಗಿರುವ ‘ಸರ್ಕಾರದ ರಹಸ್ಯ ದಾಖಲೆ ಕಳವು’ ₨೧೦ ಸಾವಿರ ಕೋಟಿ ಮೊತ್ತದ ಹಗರಣ ಎಂದು ಪ್ರಮುಖ ಆರೋಪಿ, ಮಾಜಿ ಪತ್ರಕರ್ತ ಶಂತನು ಸೈಕಿಯಾ ಹೇಳಿದ್ದಾರೆ.

ಈ ನಡುವೆ, ಆರೋಪಿಗಳಿಂದ  ‘ರಾಷ್ಟ್ರೀಯ ಭದ್ರತೆ’ಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದು­ಕೊಳ್ಳಲಾಗಿದೆ. ಬಂಧಿತ ೧೨ ಮಂದಿಯ ವಿರುದ್ಧ ಸರ್ಕಾರಿ ಗೋಪ್ಯತೆ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸುವ ಸಾಧ್ಯತೆ ಇದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಪೆಟ್ರೋಲಿಯಂ ಮಾತ್ರವಲ್ಲ,  ಹಣ­ಕಾಸು, ಕಲ್ಲಿದ್ದಲು ಮತ್ತು ವಿದ್ಯುತ್‌  ಸಚಿವಾ­ಲಯದ ದಾಖಲೆಗಳೂ ಸಿಕ್ಕಿವೆ.
ಜಲ್ದಿ ದೂಧ್‌ ಕಾ ದೂಧ್‌, ಪಾನಿ ಕಾ ಪಾನಿ ಹೊ ಜಾಯೇಗಾ (ಶೀಘ್ರವೇ ಸತ್ಯ ಹೊರಬೀಳಲಿದೆ). ರಹಸ್ಯ ಮಾಹಿತಿ ಸೋರಿಕೆ ಪ್ರಕರಣವನ್ನು ನಮ್ಮ ಸರ್ಕಾರ ಬಯ­ಲಿಗೆಳೆದಿದೆ ಎನ್ನುವುದು ಸಮಾಧಾನ ತಂದಿದೆ. ನಾವು ಎಚ್ಚರಿಕೆ ವಹಿಸದಿದ್ದರೆ ಇದು ಬೆಳಕಿಗೇ ಬರುತ್ತಿರಲಿಲ್ಲ
– ರಾಜನಾಥ್‌ ಸಿಂಗ್‌, ಕೇಂದ್ರ ಗೃಹ ಸಚಿವ

ಆರೋಪಿಗಳಾದ ಎಸ್ಸಾರ್‌ನ ವಿನಯ್‌ ಕುಮಾರ್‌, ರಿಲಯನ್ಸ್‌ ಇಂಡ­­ಸ್ಟ್ರೀಸ್‌ ಲಿಮಿಟೆಡ್‌ನ ಶೈಲೇಶ್‌ ಸಕ್ಸೇನಾ, ಕೇರ್ನ್ಸ್‌ನ ಕೆ.ಕೆ.ನಾಯ್ಕ್‌, ಜುಬಿ­ಲಂಟ್‌ ಎನರ್ಜಿಯ ಸುಭಾಷ್‌­ಚಂದ್ರ, ಅನಿಲ್‌ ಅಂಬಾನಿ ಗ್ರೂಪ್‌ನ ರಿಶಿ ಆನಂದ್‌ ಅವರನ್ನು ಪೊಲೀಸರು ಸ್ಥಳೀಯ ಕೋರ್ಟ್‌ಗೆ ಹಾಜ­ರು­ಪಡಿಸಿ­ದರು. ಇವರನ್ನೆಲ್ಲ ಕೋರ್ಟ್‌ ಫೆ.೨೪­ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ.

ಬಯಲಾಗಿದ್ದು ಹೇಗೆ?
ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳು ಪದೇ ಪದೇ ಮಾಧ್ಯ­ಮ­ಗಳಲ್ಲಿ ವರದಿ­ಯಾಗುತ್ತಿರು­ವುದನ್ನು ಗಮನಿಸಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋಬಾಲ್‌ ಅವರು ಈ ಕುರಿತು ತನಿಖೆ ನಡೆಸು­ವಂತೆ ಬಾಹ್ಯ ಬೇಹುಗಾರಿಕೆ ಸಂಸ್ಥೆ ‘ರಾ’ಗೆ ಸೂಚಿಸಿದ್ದರು. ರಕ್ಷಣಾ ಸಂಶೋ­ಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಣ್ವಸ್ತ್ರ ಸಜ್ಜಿತ ಜಲಾಂತ­ರ್ಗಾಮಿ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಮಾಹಿತಿ ನೀಡಿದ್ದು ಸುದ್ದಿವಾಹಿನಿ­ಯೊಂದ­ರಲ್ಲಿ ವರದಿಯಾಗಿತ್ತು. ಇದು ಧೋಬಾಲ್‌ ಕಳವಳಕ್ಕೆ ಕಾರಣವಾಗಿತ್ತು.

ಈ ಸಂಬಂಧ  ಸಂಪುಟ ಕಾರ್ಯದರ್ಶಿ ಅಜಿತ್‌ ಕುಮಾರ್‌ ಸೇಥ್‌ ಅವರಿಗೂ ಧೋಬಾಲ್‌ ಪತ್ರ ಬರೆದಿದ್ದರು. ಈ ವಿಚಾರವೂ ಮಾಧ್ಯಮಗಳಲ್ಲಿ ವರದಿ­ಯಾಯಿತು. ಈ ಬೆಳವಣಿಗೆಯ ನಂತರ, ಸರ್ಕಾರಿ ಕಚೇರಿಗಳಿಂದ ಮಾಹಿತಿ ಸೋರಿಕೆ­ಯಾಗುವ ವಿಚಾರವನ್ನು ಗಂಭೀರ­ವಾಗಿ ಪರಿಗಣಿಸಿ ಸಚಿವಾಲ­ಯಗಳ ಮೇಲೆ ಕಣ್ಣಿಡಲಾಯಿತು.

ಸೂಕ್ಷ್ಮ ದಾಖಲೆಗಳ ಸೋರಿಕೆ ಕುರಿತಂತೆ ಕಳೆದ ಡಿಸೆಂಬರ್‌ನಲ್ಲಿ ಧೋಬಾಲ್‌ ಅವರು ಹಲವು ಸಂಪುಟ ಸಚಿವರ ಜತೆಗೂ ಸಭೆ ನಡೆಸಿದ್ದರು. ಪತ್ರಕರ್ತರು, ಸರ್ಕಾರಿ ಅಧಿಕಾರಿಗಳು, ಕಾರ್ಪೊರೇಟ್‌ ದಲ್ಲಾಳಿಗಳ ಮಧ್ಯೆ ಅಕ್ರಮ ನಂಟು ಇರುವ ಕುರಿತು ಎಚ್ಚರಿಕೆ ನೀಡಿದ್ದರು.

ಹಗರಣದ ಸುಳಿವು ಸಿಕ್ಕಿದ ಕೂಡಲೇ ಪ್ರಮುಖ ಸಚಿವಾಲಯಗಳಲ್ಲಿ ಭದ್ರತೆ­ಹೆಚ್ಚಿಸಲಾಯಿತು. ಶಂಕಿತರನ್ನು ಪತ್ತೆ ಹಚ್ಚಲು ಮಹತ್ವದ ದಾಖಲೆ­ಗಳಂತೆ ಕಾಣುವ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿತ್ತು.

ಪೆಟ್ರೋಲಿಯಂ ಸಚಿವಾಲಯ ಸೇರಿದಂತೆ ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

ಕಂಪೆನಿಗಳ ಕಚೇರಿ ಮೇಲೆ ದಾಳಿ: ಸರ್ಕಾರದ ದಾಖಲೆ ಕಳವು ಪ್ರಕರಣದಲ್ಲಿ ಮತ್ತಷ್ಟು ಶೋಧಕ್ಕಾಗಿ ದೆಹಲಿ ಪೊಲೀ­ಸರು ನೊಯ್ಡಾ ಬಳಿಯ ಪೆಟ್ರೊಕೆಮಿಕಲ್‌ ಕಂಪೆನಿಗಳ ಕಚೇರಿಯ ಮೇಲೆ ಶನಿವಾರ ದಾಳಿ ನಡೆಸಿದರು.

ಪೊಲೀಸರು ತಮ್ಮನ್ನು ಹೆಚ್ಚಿನ ವಿಚಾ­ರಣೆಗೆ ಒಳಪಡಿಸಲು ಕರೆ­ದೊಯ್ಯುತ್ತಿರುವಾಗಲೇ ಸುದ್ದಿಗಾರರೊಂದಿಗೆ ಮಾತ­ನಾ­ಡಿದ ಶಂತನು, ‘ಇದು ₨ ೧೦ ಸಾವಿರ ಕೋಟಿ ಹಗರಣ.

ನಾನು ಇದನ್ನು ಬಯಲು ಮಾಡಲು ಯತ್ನಿಸುತ್ತಿದ್ದೆ. ದಯವಿಟ್ಟು ಈ ಮಾತನ್ನು ನಿಮ್ಮ ವರದಿಯಲ್ಲಿ ಉಲ್ಲೇಖಿಸಿ’ ಎಂದರು.
ಶಂತನು ಹೇಳಿಕೆಗೆ ಪ್ರತಿಕ್ರಿಯಿಸಿರುವ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌್, ‘ಶಂತನು ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಈ ರೀತಿ ಮಾತನಾಡುತ್ತಿದ್ದಾರೆ’ ಎಂದಿದ್ದಾರೆ.

Write A Comment