ರಾಷ್ಟ್ರೀಯ

ಸತ್ತವರ ಮನೆಯಲ್ಲಿ ಜೋರಾಗಿ ಎದೆ ಒಡೆದುಕೊಂಡು ಅಳುವುದು, ತಲೆ ಕೆದರಿಕೊಂಡು ಚೀರಾಡುತ್ತ ದುಃಖಿಸುವುದು ಇವರ ವೃತ್ತಿ

Pinterest LinkedIn Tumblr

kelasa

ಹೊಸದಿಲ್ಲಿ: ಯಾರಾದರೂ ಸತ್ತರೆ ಅವರ ಮನೆಗೆ ಬಂದು ದುಃಖದ ಪರಾಕಾಷ್ಠೆಯೊಂದಿಗೆ ಗೋಳಾಡುವುದೇ ಇವರ ಹೊಟ್ಟೆಪಾಡು. ಪ್ರೀತಿಪಾತ್ರರ ಸಾವಿನ ಸನ್ನಿವೇಶವನ್ನು ಶೋಕಮಯವಾಗಿಸಲು ನೆರವಾಗುವುದೇ ಇವರ ವೃತ್ತಿ.

ಅಸಲಿಗೆ ಶೋಕಾಚರಣೆಯನ್ನೇ ವೃತ್ತಿಯಾಗಿಸುವವರದ್ದೊಂದು ಸಾಂಪ್ರದಾಯಿಕ ಕಲೆ. ಜೋರಾಗಿ ಎದೆ ಒಡೆದುಕೊಂಡು ಅಳುವುದು, ಗೋಳಾಡುವುದು, ತಲೆ ಕೆದರಿಕೊಂಡು ಚೀರಾಡುತ್ತ ದುಃಖಿಸುವುದು ಇವರ ಕೆಲಸ.

ತಮಿಳುನಾಡಿನ ತಿರುನ್ನೆಲ್ವಿನಿ ಜಿಲ್ಲೆಯ ಲಕ್ಷ್ಮಿ.ಆರ್‌ ಎಂಬ 57 ವರ್ಷದ ಮಹಿಳೆಯದ್ದೂ ಇದೇ ವೃತ್ತಿ. ಇವರು ಕಳೆದ 20 ವರ್ಷಗಳಿಂದ ಈ ಕೆಲಸವನ್ನು ಮಾಡುತ್ತ ಬಂದಿದ್ದಾರೆ. ಇವರ ತಂಡ ಯಾವುದೇ ಅಪರಿಚಿತರ ಮರಣದ ಮನೆಯಲ್ಲೂ ಪಕ್ಕಾ ವೃತ್ತಿಪರವಾಗಿ ಶೋಕಾಚರಣೆಯ ಪರಾಕಾಷ್ಠೆಯನ್ನು ಪ್ರದರ್ಶಿಸುತ್ತ ಬಂದಿದ್ದಾರೆ. ದುಃಖದ ಸಂದರ್ಭದಲ್ಲಿ ಹಾಡುವ ಒಪ್ಪೊರಿ ಎನ್ನುವ ಪ್ರಾಚೀನ ಶೋಕ ಪದಗಳನ್ನು ಹಾಡುತ್ತ ಶೋಕದ ಪರಮೋಚ್ಛ ಸ್ಥಿತಿಯನ್ನು ಸೃಷ್ಟಿಸುವ ಕಲೆ ಇವರಿಗೆ ಸಿದ್ಧಿಸಿದೆ.

ದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಅವರು ಲೈವ್‌ ಕಾರ್ಯಕ್ರಮ ನೀಡಿ ಎಲ್ಲರ ಗಮನ ಸೆಳೆದರು. ದಿಲ್ಲಿ ಮೂಲದ ಕಲಾವಿದರ ಸಮುಚ್ಛಯವಾದ ಖೋಜ್‌ ವತಿಯಿಂದ ನಡೆದ ನೇಮ್‌ಲೆಸ್‌ ಹಿಯರ್‌ ಫಾರ್‌ ಎವರ್‌ಮೋರ್‌ ಎಂಬ ಕಾರ್ಯಕ್ರಮದಲ್ಲಿ ತಮ್ಮ ಕಲೆಯನ್ನು ಅವರು ಪ್ರದರ್ಶಿಸಿದರು. ಇಲ್ಲಿ ಜಾಗತಿಕ ನೋವು ಹಾಗೂ ಸಾಮೂಹಿಕ ಆಘಾತ ಬಿಂಬಿಸುವ ಹಲವು ಕಲೆಗಳು ಪ್ರದರ್ಶನಗೊಂಡವು.

ಇಲ್ಲಿ ತುಂಬ ತಲೆಕೆಡಿಸುವಂಥ ವಿಚಾರಗಳನ್ನು ಗಮನಿಸಿದೆ ಎನ್ನುತ್ತಾರೆ ಈ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದ ರಾಷ್ಟ್ರೀಯ ನಾಟಕ ಶಾಲೆಯಿಂದ ಸಹಾಯಕ ಪ್ರಾಧ್ಯಾಪಕ ಅಮಿತೇಶ್‌ ಗ್ರೋವರ್‌. ನಾನು ಶೋಕಾಚರಣೆ ಎಂದರೇನು ಎಂದು ಸಂಶೋಧನೆ ಮಾಡಲು ಬಂದಿದ್ದೆ. ನಗರ ಪ್ರದೇಶದ ಸಮಾಜದಲ್ಲಿ ಸಾಮೂಹಿಕ ಶೋಕಾಚರಣೆಯ ಕೊರತೆ ಗಮನಿಸಿದೆ. ಈ ಸಮಾಜಲದಲ್ಲಿ ಅದು ಬಿಲ್‌ಕುಲ್‌ ಇಲ್ಲ. ಇಂದಿನ ದಿನಗಳಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಶೋಕಾಚಾರಣೆ ಮಾಡುತ್ತಿಲ್ಲ ಎಂದು ಗ್ರೋವರ್‌ ಹೇಳುತ್ತಾರೆ.

ಅವರು ತಮ್ಮ ಸಂಶೋಧನೆಯ ಸಂದರ್ಭದಲ್ಲಿ ತಿರುನ್ನೆಲ್ವಿನಿ ಜಿಲ್ಲೆಯ ಒಪ್ಪೊರಿ ಗಾಯಕರನ್ನು ಭೇಟಿಯಾಗಿ ಚರ್ಚಿಸಿದರು. ಈ ಸಮುದಾಯದ ಬಗ್ಗೆ ನಿಖರ ಅಂಕಿ ಅಂಶಗಳು ಸಿಗುತ್ತಿಲ್ಲ. ಜತೆಗೆ ಈ ಸಂಪ್ರದಾಯ ಅವನತಿಯ ಅಂಚಿನಲ್ಲಿದೆ. ಹೊಸ ತಲೆಮಾರಿನ ಯಾವ ಯುವತಿಯೂ ಒಪ್ಪೊರಿ ಕಲೆಯಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಆಸಕ್ತಿ ಇದ್ದವರಿಗೆ ಮನೆಯವರು ಬಿಡುತ್ತಿಲ್ಲ. ಅಸ್ತಿತ್ವದಲ್ಲಿರುವರಿಗೂ ಸಾಮಾಜಿಕವಾಗಿ ಬೆಲೆ ಕೊಡುತ್ತಿಲ್ಲ. ಅವರನ್ನು ಮದುವೆಯಂಥ ಶುಭ ಕಾರ್ಯಕ್ಕೆ ಆಹ್ವಾನಿಸುವುದಿಲ್ಲ ಎನ್ನುತ್ತಾರೆ ಗ್ರೋವರ್‌.

ಕಿರುಕುಳ ಕೊಡುತ್ತಿದ್ದ ಗಂಡನಿಂದ ದೂರಾಗಿ ಬದುಕಿನ ಹೋರಾಟದಲ್ಲಿ ದುಃಖದ ದಾರಿ ಹಿಡಿದ ಲಕ್ಷ್ಮಿ ಅವರ ಗಾಯನ, ಶೋಕಾಚರಣೆ ದಿಲ್ಲಿಯ ಪ್ರೇಕ್ಷಕರು ಮನ ಮಿಡಿವಂತೆ ಮಾಡಿತು. ಕೆಲವರಿಗಂತೂ ಹಾಡನ್ನು ಕೇಳುತ್ತ ತಮ್ಮ ಕಣ್ಣೀರಿನ ಪ್ರವಾಹವನ್ನು ತಡೆಯಲಾಗಲಿಲ್ಲ.

Write A Comment