ರಾಷ್ಟ್ರೀಯ

ನಿತೀಶ್‌ಕುಮಾರ್‌ಗೆ ಮಿತ್ರಪಕ್ಷಗಳ ಬೆಂಬಲ ; ರಾಜಭವನಕ್ಕೆ ಬೆಂಬಲದ ಪತ್ರ ಸಲ್ಲಿಕೆ; ಶಾಸಕಾಂಗ ಪಕ್ಷದ ನಾಯಕನಾಗಿ ಸ್ಪೀಕರ್ ಮಾನ್ಯತೆ

Pinterest LinkedIn Tumblr

nitish

ಪಾಟ್ನಾ, ಫೆ.8: ಜನತಾದಳ(ಯು) ಮತ್ತು ಮಿತ್ರಪಕ್ಷಗಳ ನಾಯಕರ ನಿಯೋಗವೊಂದು ರವಿವಾರ ಜೆಡಿಯು ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಆಯ್ಕೆಗೊಂಡಿರುವ ನಿತೀಶ್‌ಕುಮಾರ್‌ಗೆ ಬೆಂಬಲ ಸೂಚಿಸಿರುವ 130 ಶಾಸಕರ ಪಟ್ಟಿಯನ್ನು ರಾಜ್ಯಪಾಲರ ಕಚೇರಿಗೆ ಸಲ್ಲಿಸಿದೆ.

‘ಆರ್‌ಜೆಡಿ, ಕಾಂಗ್ರೆಸ್, ಸಿಪಿಐ ಮತ್ತು ಪಕ್ಷೇತರ ಶಾಸಕ ದುಲಾಲ್‌ಚಂದ್ ಗೋಸ್ವಾಮಿ ಸೇರಿದಂತೆ 130 ಶಾಸಕರ ಬೆಂಬಲದ ಪತ್ರಗಳನ್ನು ನಾವು ಇಂದು ಸಲ್ಲಿಸಿದ್ದೇವೆ’ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ವಸಿಷ್ಠ ನಾರಾಯಣ್ ಸಿಂಗ್ ರಾಜಭವನದ ಹೊರಗೆ ವರದಿಗಾರರಿಗೆ ತಿಳಿಸಿದರು.

ಶನಿವಾರದ ಜೆಡಿಯು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿತೀಶ್‌ಕುಮಾರ್ ನೂತನ ನಾಯಕರಾಗಿ ಆಯ್ಕೆಯಾಗಿರುವುದರಿಂದ ತಾವು ಶಾಸಕಾಂಗ ಪಕ್ಷದ ನಾಯಕರಾಗಿ ಉಳಿದಿಲ್ಲ ಎಂದು ತಿಳಿಸಿ ಜಿತನ್ ರಾಂ ಮಾಂಝಿ ಅವರಿಗೆ ಜೆಡಿಯು ಅಧ್ಯಕ್ಷ ಶರದ್ ಯಾದವ್ ಬರೆದಿರುವ ಪತ್ರವನ್ನು ಸಹ ರಾಜಭವನದ ಅಧಿಕಾರಿಗಳಿಗೆ ಸಲ್ಲಿಸಿರುವುದಾಗಿ ಸಿಂಗ್ ತಿಳಿಸಿದರು.

‘ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಸೋಮವಾರ ಪಾಟ್ನಾಕ್ಕೆ ವಾಪಸಾದ ನಂತರ ಜೆಡಿಯು ಶಾಸಕಾಂಗ ಪಕ್ಷದ ನೂತನ ನಾಯಕ ನಿತೀಶ್‌ಕುಮಾರ್ ಅಧಿಕೃತವಾಗಿ ಭೇಟಿ ಮಾಡಿ ಸರಕಾರ ರಚನೆಯ ಹಕ್ಕು ಪ್ರತಿಪಾದಿಸುವರು’ ಎಂದು ಸಿಂಗ್ ಹೇಳಿದರು.

ಸಿಂಗ್ ಅವರೊಂದಿಗೆ ಹಿರಿಯ ಜೆಡಿಯು ನಾಯಕ ವಿಜಯಕುಮಾರ್ ಚೌಧರಿ, ಆರ್‌ಜೆಡಿ ನಾಯಕ ಎ.ಬಿ.ಸಿದ್ದೀಕಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸದಾನಂದ ಸಿಂಗ್, ಸಿಪಿಐ ನಾಯಕ ಜಿತೇಂದ್ರ ನಾರಾಯಣ್ ಮತ್ತು ಪಕ್ಷೇತರ ಶಾಸಕ ಗೋಸ್ವಾಮಿ ರಾಜಭವನಕ್ಕೆ ತೆರಳಿದ್ದರು. 243 ಸದಸ್ಯರ ಬಿಹಾರ ವಿಧಾನಸಭೆಯಲ್ಲಿ ಜೆಡಿಯು 111 ಶಾಸಕರನ್ನು ಹೊಂದಿದೆ. ಬಿಜೆಪಿ (87), ಆರ್‌ಜೆಡಿ (24), ಕಾಂಗ್ರೆಸ್ (5) ಮತ್ತು ಐವರು ಪಕ್ಷೇತರ ಶಾಸಕರಿದ್ದಾರೆ. ಹತ್ತು ಸ್ಥಾನಗಳು ಖಾಲಿ ಇವೆ.ಸ್ಪೀಕರ್ ಮಾನ್ಯತೆ: ಈ ಮಧ್ಯೆ ಬಿಹಾರ ವಿಧಾನಸಭೆಯ ಸ್ಪೀಕರ್ ಉದಯ ನಾರಾಯಣ್ ಚೌಧರಿ ರವಿವಾರ ನಿತೀಶ್‌ಕುಮಾರ್ ಅವರನ್ನು ಜೆಡಿಯು ಶಾಸಕಾಂಗ ಪಕ್ಷದ ನೂತನ ನಾಯಕರೆಂದು ಮಾನ್ಯ ಮಾಡಿದ್ದಾರೆ.

ಸ್ಪೀಕರ್ ಪತ್ರವನ್ನು ರಾಜಭವನ, ಮುಖ್ಯಮಂತ್ರಿಗಳ ಕಚೇರಿ ಮತ್ತು ನಿತೀಶ್‌ಕುಮಾರ್ ಕಚೇರಿಗೆ ಕಳುಹಿಸಿಕೊಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಜೆಡಿಯು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿತೀಶ್‌ಕುಮಾರ್ ಅವರನ್ನು ನೂತನ ನಾಯಕನಾಗಿ ಆಯ್ಕೆ ಮಾಡಿರುವ ವಿಷಯವನ್ನು ತಿಳಿಸಿ ಪಕ್ಷದ ರಾಜ್ಯಾಧ್ಯಕ್ಷ ವಸಿಷ್ಠ ನಾರಾಯಣ್ ಸಿಂಗ್ ಪತ್ರ ಕಳುಹಿಸಿರುವ ಹಿನ್ನೆಲೆಯಲ್ಲಿ ಸ್ಪೀಕರ್ ಈ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

Write A Comment