ರಾಷ್ಟ್ರೀಯ

ಕನ್ನಡ ಮಾಧ್ಯಮ: ನ್ಯಾಯಾಂಗ ನಿಂದನೆ ಅಲ್ಲ; ‘ಸುಪ್ರೀಂ’ ಸ್ಪಷ್ಟನೆ

Pinterest LinkedIn Tumblr

supreme-court

ನವದೆಹಲಿ: ‘ಒಂದರಿಂದ ಐದನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಬೋಧಿಸುವ  ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಮಾನ್ಯತೆ ನೀಡಬೇಕು ಎಂಬ ಕರ್ನಾ­ಟಕ ಸರ್ಕಾರದ ಆದೇಶ ನ್ಯಾಯಾಂಗ ನಿಂದನೆ ಅಲ್ಲ’ ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಸ್ಪಷ್ಟಪಡಿಸಿದೆ.

ಕರ್ನಾಟಕದ ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ­ಗಳಾದ ವಿಕ್ರಮ್‌ಜಿತ್‌ ಸೆನ್ ಮತ್ತು ಸಿ.ನಾಗಪ್ಪನ್‌ ಅವರನ್ನು ಒಳಗೊಂಡ ಪೀಠ ನಡೆಸಿ ಈ ಸ್ಪಷ್ಟನೆ ನೀಡಿತು.

ಕರ್ನಾಟಕ ಸರ್ಕಾರವು ಕಳೆದ ನವೆಂಬರ್ 11ರಂದು ಭಾಷಾ ಮಾಧ್ಯಮ ಕುರಿತು ಹೊರಡಿಸಿದ ಅಧಿಸೂಚನೆಯು ಸುಪ್ರೀಂ­ಕೋರ್ಟ್‌ ಸಾಂವಿಧಾನಿಕ ಪೀಠ ಕಳೆದ ಮೇ 6ರಂದು ನೀಡಿದ್ದ ಆದೇಶದ ಸ್ಪಷ್ಟ ಉಲ್ಲಂಘನೆ ಎಂದು ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆಡಳಿತ ಮಂಡಳಿ ಪರ ವಕೀಲ ಮೋಹನ್ ಜಿ.ಆರ್‌. ಪೀಠದ ಮುಂದೆ ವಾದ ಮಂಡಿಸಿದರು.

ಕನ್ನಡ ಮಾಧ್ಯಮ ಶಾಲೆಗಳಿಗೆ ಮಾತ್ರ ಮಾನ್ಯತೆ ನೀಡುವ ಕುರಿತು ಆದೇಶ ಹೊರ­ಡಿಸಿದ್ದ ರಾಜ್ಯ ಸರ್ಕಾರದ ಅಧಿ­ಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಅವರು ಕೋರಿದರು.

ಈ ಅಧಿಸೂಚನೆ ಹೊರಡಿಸಿದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಕೋರಿ ಒಕ್ಕೂಟ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಕರ್ನಾಟಕ ಹೈಕೋರ್ಟ್‌ನ ಜನವರಿ 9ರ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆಯೂ ಮೋಹನ್ ಕೋರಿದರು.
ರಾಜ್ಯ ಸರ್ಕಾರದ ಈ ನಿಲುವಿನಿಂದಾಗಿ ಹೊಸ ಇಂಗ್ಲಿಷ್‌ ಮಾಧ್ಯಮ ಶಾಲೆ­ಗಳನ್ನು ತೆರೆಯುವ ಆಡಳಿತ ಮಂಡಳಿಗಳ ಹಕ್ಕು ಮೊಟಕುಗೊಂಡಿದೆ ಎಂದು ಅವರು ಹೇಳಿದರು.

ವಜಾ ಮಾಡಿತ್ತು: ಪ್ರಾಥಮಿಕ ಹಂತದಲ್ಲಿ ಮಗುವಿನ ಮಾತೃಭಾಷೆಯನ್ನು ಕಲಿಕಾ ಮಾಧ್ಯಮವಾಗಿ ಹೇರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಕಳೆದ ಮೇ ತಿಂಗಳಲ್ಲಿ ನೀಡಿದ್ದ  ತನ್ನ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮರು ಪರಿ­ಶೀಲನಾ  ಅರ್ಜಿಯನ್ನು ಸುಪ್ರೀಂ­ಕೋರ್ಟ್‌ ಸೆಪ್ಟೆಂಬರ್ 9ರಂದು ವಜಾಗೊಳಿಸಿತ್ತು.

ಮಾತೃಭಾಷಾ ಮಾಧ್ಯಮದ ಹೇರಿಕೆಯಿಂದ ಸಂವಿಧಾನದ 19 (ಅಭಿವ್ಯಕ್ತಿ ಸ್ವಾತಂತ್ರ್ಯ), 29 (ಅಲ್ಪಸಂಖ್ಯಾತರ ಹಿತಾಸಕ್ತಿ ರಕ್ಷಣೆ) ಮತ್ತು 30ನೇ ಕಲಂಗಳಿಗೆ (ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಅಲ್ಪ­ಸಂಖ್ಯಾತರ ಹಕ್ಕು) ಧಕ್ಕೆಯಾಗುತ್ತದೆ ಎಂದು ಅಂದಿನ ಮುಖ್ಯ  ನ್ಯಾಯ­ಮೂರ್ತಿ ಆರ್‌.ಎಂ. ಲೋಧಾ ನೇತೃ­ತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ತೀರ್ಪು ನೀಡಿತ್ತು.

ರಿಟ್‌ ಸಲ್ಲಿಸಬಹುದು
ಇಂಗ್ಲಿಷ್‌ ಮಾಧ್ಯಮ ಶಾಲಾ  ಆಡಳಿತ ಮಂಡಳಿಗಳ ಒಕ್ಕೂಟ ತಾನು ಸಲ್ಲಿಸಿರುವ ವಿಶೇಷ ಅರ್ಜಿಯನ್ನು ವಾಪಸ್‌ ಪಡೆದು ರಿಟ್‌ ಅರ್ಜಿ ಸಲ್ಲಿಸಬಹುದು ಅಥವಾ ಸಾಂವಿಧಾನಿಕ ಪೀಠದಲ್ಲಿ ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಬಹುದು.
– ನ್ಯಾಯ­ಪೀಠದ ಅಭಿಮತ

Write A Comment