ನವದೆಹಲಿ, ಜ.26: ದೇಶದ 66ನೇ ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿರುವ ಅಮೆರಿಕ ಅಧ್ಯಕ್ಷ ಬರಾಕ ಒಬಾಮಾ ಅವರು ಇಂದು ಮಾಮೂಲಿ ಎಲ್ಲ ಸಂಪ್ರದಾಯಗಳನ್ನೂ ಬದಿಗೊತ್ತಿ, ಭಾರೀ ಭದ್ರತಾ ವ್ಯವಸ್ಥೆಯಿಂದ ಕೂಡಿದ ತಮ್ಮ ಬುಲೆಟ್-ಬಾಂಬ್ ಪ್ರೂಫ್ ಬೀಸ್ಟ್‌ನಲ್ಲಿ ಇಂದು ರಾಜ್‌ಪಥ್‌ಗೆ ಆಗಮಿಸಿದರು. ಸಾಮಾನ್ಯವಾಗಿ ಗಣರಾಜ್ಯೋತ್ಸವಕ್ಕೆ ಆಗಮಿಸುವ ಯಾವುದೇ ಮುಖ್ಯ ಅತಿಥಿಗಳು ರಾಷ್ಟ್ರಪತಿಯವರ ವಾಹನದಲ್ಲಿಯೇ ಅವರೊಂದಿಗೆ ಸಮಾರಂಭಕ್ಕೆ ಆಗಮಿಸುವುದು ಹಿಂದಿನಿಂದ ನಡೆದುಕೊಂಡು ಬಂದಿರುವ ವಾಡಿಕೆ.
ಕಾರ್ಯಕ್ರಮಕ್ಕೆ ತಮ್ಮ ಪತ್ನಿ ಮಿಶೆಲ್ ಅವರೊಂದಿಗೆ ಬೀಸ್ಟ್ ಕಾರಿನಲ್ಲಿ ಆಗಮಿಸಿದ ಅಧ್ಯಕ್ಷ ಒಬಾಮ ಅವರನ್ನು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಮತ್ತವರ ಪತ್ನಿ ಸಲ್ಮಾ, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಸ್ವಾಗತಿಸಿದರು.
ಬರಾಕ್ ಒಬಾಮ ಆಗಮನದ ಬಳಿಕ ಕೆಲವೇ ಕ್ಷಣಗಳಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೂ ಆಗಮಿಸಿದರು. ಕಳೆದ 2012 ರಿಂದ ರಾಷ್ಟ್ರಪತಿಗಳು ಸಂಪೂರ್ಣ ಶಸ್ತ್ರಸಜ್ಜಿತವಾದ ಎನ್600(ಡಬ್ಲ್ಯು221) ರಕ್ಷಣೆಯ ಕಪ್ಪು ಮರ್ಸಿಡಿಸ್ ಬೆಂಜ್ ಕಾರಿನಲ್ಲೇ ಆಗಮಿಸುತ್ತಿದ್ದಾರೆ. ಈ ವಾಹನ ಬಾಂಬ್, ಗುಂಡು ಅಥವಾ ಯಾವುದೇ ಚೂಪಾದ ಶಸ್ತ್ರಾಸ್ತ್ರಗಳಿಂದ ರಕ್ಷಣೆ ನೀಡುತ್ತದೆ. ಭಾರತದ ಆಹ್ವಾನದ ಮೇರೆಗೆ ಬರಾಕ್ ಒಮಾಮ ಈ ಬಾರಿಯ ಗಣರಾಜ್ಯೋತ್ಸವ ಅತಿಥಿಯಾಗಿ ಭಾರತಕ್ಕೆ ಆಗಮಿಸಿದ್ದಾರೆ.
