ರಾಷ್ಟ್ರೀಯ

ಸರ್ವಾಧಿಕಾರಿ ಸರ್ಕಾರ: ಕಾರ್ಯ­ಕಾರಿ ಸಮಿತಿಯಲ್ಲಿ ಸಭೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಟೀಕೆ

Pinterest LinkedIn Tumblr

ಸೊನಿಯ಻

ನವದೆಹಲಿ: ‘ಸುಗ್ರೀವಾಜ್ಞೆಗಳನ್ನು ಜಾರಿಗೆ ತಂದು ಆಡಳಿತ ನಡೆಸುವ ಮೂಲಕ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸರ್ವಾಧಿಕಾರಿ­ಯಾಗಿ ನಡೆದು­ಕೊಳ್ಳು­ತ್ತಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ಆರೋಪಿಸಿದರು.

ಲೋಕಸಭೆ ಮತ್ತು ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸೋತು ಸೊರಗಿರುವ ಪಕ್ಷಕ್ಕೆ ಚೈತನ್ಯ ತುಂಬುವ ಕುರಿತು ಚರ್ಚಿಸಲು ಸೇರಿದ್ದ ಕಾರ್ಯ­ಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಸೋನಿಯಾ, ‘ಸರ್ಕಾರ ಸುಗ್ರೀವಾಜ್ಞೆಗಳ ಮೂಲಕ ಉತ್ತಮ ಆಡ­ಳಿತ ಕೊಡ­ಬಹುದೆಂಬ ಅಪಾಯ­ಕಾರಿ ನಿಲುವು ಹೊಂದಿದೆ’ ಎಂದು ಟೀಕಿಸಿದರು.

ಕೇವಲ 7 ತಿಂಗಳಲ್ಲಿ 10 ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸಿ ಸಂಸತ್ತನ್ನು ­ಕಡೆಗಣಿಸಿದೆ ಎಂದು ಸೋನಿಯಾ ದೂರಿದರು. ‘ಅವಸರದಲ್ಲಿ ಸುಗ್ರೀವಾಜ್ಞೆಗಳನ್ನು ಹೊರಡಿಸುತ್ತಿ­ರು­ವು­ದರ ಹಿಂದೆ ರಹಸ್ಯ ಉದ್ದೇಶ­ವೇ­ನಾ­ದರೂ ಇದೆಯೇ?’ ಎಂದು ಪ್ರಶ್ನಿಸಿದರು.

ದೇಶದ ಕೃಷಿಕರ ಹಿತಾಸಕ್ತಿ ಗಮನ­ದಲ್ಲಿಟ್ಟುಕೊಂಡು ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಭೂಸ್ವಾಧೀನ ಕಾಯ್ದೆಯ ಸದು­ದ್ದೇಶ­ವನ್ನೇ  ಎನ್‌ಡಿಎ ಸರ್ಕಾರ  ನಾಶಗೊಳಿ­ಸಿದೆ. ಬ್ರಿಟಿಷ್‌ ಸರ್ಕಾರ 1894ರಲ್ಲಿ ಮಾಡಿದ್ದ ಕಾಯ್ದೆಯನ್ನು ಹಿಂಬಾಗಿ­ಲಿನಿಂದ ಜಾರಿಗೆ ತರಲು ಹೊರಟಿದೆ ಎಂದು ಟೀಕಿಸಿದರು.

ಪ್ರಧಾನಿ ಮೌನಕ್ಕೆ ಟೀಕೆ: ಸಚಿ­ವರು ಹಾಗೂ ನಾಯಕರು ವಿವಾದಾ­ತ್ಮಕ ಹೇಳಿಕೆ ನೀಡುತ್ತಿದ್ದರೂ ಪ್ರಧಾನಿ ಮೌನವಾಗಿ­ದ್ದಾರೆ ಎಂದು ತರಾಟೆಗೆ ತೆಗೆದು­ಕೊಂಡರು. ಹಿರಿಯ ನಾಯಕರು ಮತ್ತು ಸಚಿವ ಸಂಪುಟದ ಸದಸ್ಯರ ವಿರುದ್ಧ   ಮೋದಿ ಅವರು ಕಠಿಣ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಲೋಕಸಭೆ ಮತ್ತು ಕೆಲವು ವಿಧಾನಸಭೆ ಚುನಾ­ವಣೆಯಲ್ಲಿ ಅನುಸರಿಸಿದ ಧ್ರುವೀ­ಕರಣ ತಂತ್ರಗಳನ್ನೇ ಮುಂದುವರಿಸ­ಲಾ­ಗುತ್ತಿದೆ ಎಂದು ಅವರು ಆಪಾದಿಸಿದರು.

ಬಯಲಾಗುತ್ತಿರುವ ಬಣ್ಣ: ಕಳೆದ ಕೆಲವು ವಾರಗಳಿಂದ ನರೇಂದ್ರ ಮೋದಿ ಮತ್ತು ಅವರ ಪಕ್ಷದ ಬಣ್ಣ ಬಯಲಾಗುತ್ತಿದೆ. ಕೆಲವು ಪ್ರಭಾವಿ ನಾಯಕರು ಸಮಾಜದ ಶಾಂತಿ ಕದಡುವ ಭಾಷಣ ಮಾಡುತ್ತಿ­ದ್ದಾರೆ. ಪ್ರಧಾನಿ ಇದನ್ನು ನೋಡಿ­ಕೊಂಡು ಮೌನವಾಗಿದ್ದಾರೆ. ಅವರ ಮೌನ ಬಹು ಸಂಸ್ಕೃತಿ ಸಮಾಜವನ್ನು ಒಡೆಯುವ ಕಾರ್ಯಸೂಚಿ ಹೊಂದಿ­ದೆಯೇ ಎಂಬ ಅನುಮಾನ ಹುಟ್ಟಿಸು­ತ್ತದೆ ಎಂದು ಕೇಳಿದರು.

ಮೋದಿ ಸರ್ಕಾರ ರೈತರು ಮತ್ತು ಬಡವರ ವಿರೋಧಿಯೂ ಆಗಿದೆ. ಸರ್ಕಾರ ಅನುಸರಿಸುತ್ತಿರುವ ನೀತಿಯು ತೀವ್ರ ಕೃಷಿ ಸಮಸ್ಯೆಗೆ ಕಾರಣ ಆಗಲಿದೆ ಎಂದು  ಕಳವಳ ವ್ಯಕ್ತಪಡಿಸಿದರು.

ಸುಮಾರು ನಾಲ್ಕೂವರೆ ಗಂಟೆ ನಡೆದ ಸಭೆಯಲ್ಲಿ, ಜೈರಾಂ ರಮೇಶ್‌ ಮತ್ತು ಕೆ.ವಿ ಥಾಮಸ್‌, ಎನ್‌ಡಿಎ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ­ಗಳ ಪರಿಣಾಮ ಕುರಿತು ವಿವರಿಸಿದರು. ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿ­ರುವ ತೀರ್ಮಾನ ಹೇಗೆ ರೈತರನ್ನು ವಂಚಿಸಲಿದೆ ಎಂದೂ ಮನವರಿಕೆ ಮಾಡಿಕೊಟ್ಟರು.

ಮೋದಿ ಸರ್ಕಾರ ಹೊರಡಿಸಿರುವ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಸುಗ್ರೀ­ವಾಜ್ಞೆಯನ್ನು ಪಕ್ಷದ ಬಲವ­ರ್ಧನೆಗೆ ಬಳಸಿಕೊಳ್ಳಲು ಕಾರ್ಯಕಾರಿಣಿ ನಿರ್ಧರಿಸಿತು.

ಭಾಷಣದ ನಡುವೆ ಕಳೆದ ವರ್ಷದ ಲೋಕಸಭೆ ಚುನಾವಣೆ, ಮಹಾ­ರಾಷ್ಟ್ರ, ಹರಿಯಾಣ, ಜಾರ್ಖಂಡ್‌ ಹಾಗೂ ಜಮ್ಮು– ಕಾಶ್ಮೀರದ ವಿಧಾನ­ಸಭೆ ಸೋಲು ಕುರಿತು ಪ್ರಸ್ತಾಪಿಸಿದ ಸೋನಿಯಾ, ಸೋಲಿನ ಆಘಾತದಿಂದ ಹೊರಬಂದು ಪಕ್ಷ ಸಂಘಟನೆಗೆ ತೊಡಗಿಕೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪೂರಕವಾಗಿ ಪಕ್ಷ ಸಂಘಟನೆ ಸ್ವರೂಪ ಮತ್ತು ನಾಯಕರ ಕಾರ್ಯಶೈಲಿ ಬದಲಾಗಬೇಕು ಎಂದು ಅಭಿಪ್ರಾಯಪಟ್ಟರು.

ನಾವು ಪುನಃ ಮೈಕೊಡವಿ ಏಳ­ಬೇಕಿದೆ. ಎಐಸಿಸಿಯಿಂದ ಹಿಡಿದು ಬ್ಲಾಕ್‌ ಮಟ್ಟದವರೆಗೂ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಜನರ ಜತೆ ಸಂಪರ್ಕ ಹೊಂದಬೇಕು. ಅವರ ನೋವು– ನಲಿವು, ಆಶೋತ್ತರ­ಗಳಿಗೆ ಸ್ಪಂದಿಸ­ಬೇಕು ಎಂದು ಕಿವಿ­ಮಾತು ಹೇಳಿದರು. ಸಮರೋಪಾದಿ­ಯಲ್ಲಿ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಕೈಗೊಳ್ಳಬೇಕು. ಅದ­ರಿಂದ ಮಾತ್ರ ಪಕ್ಷದ ನೆಲೆ ವಿಸ್ತರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಚರ್ಚೆಗೆ ಬಾರದ ಬಡ್ತಿ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಉತ್ತರಾಧಿಕಾರಿ ಆಗಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ನೇಮಕ ಮಾಡುವ ಕುರಿತು ಕಾಂಗ್ರೆಸ್‌ ಕಾರ್ಯಕಾರಿಣಿಯು  ಮಂಗಳ­ವಾರ ಯಾವುದೇ ಚರ್ಚೆ ನಡೆಸಲಿಲ್ಲ.

Write A Comment