ಕರ್ನಾಟಕ

ಮೊಂಡಾಗಿದ್ದ ಕೈ ಮತ್ತೆ ಚಿಗುರಿ ಬಿಟ್ಟಿತೇ!

Pinterest LinkedIn Tumblr

hand

ಅರೆ, ಮೊಂಡಾಗಿದ್ದ ಕೈಗಳು ಮತ್ತೆ ಚಿಗುರಿ ಬಿಟ್ಟವೇ! ಹಾಗೇನಿಲ್ಲ. ಇದು ಯಾಂತ್ರಿಕ ತೋಳು. ನೋಟದಲ್ಲಿ ಬಹಳ ನೈಜ, ಕಾರ್ಯಚಟುವಟಿಕೆಯಲ್ಲಿಯೂ ಅಷ್ಟೇ ಕುಶಲ!

ರೋಬೊಟಿಕ್ಸ್‌ನಷ್ಟೇ ಸಕ್ರಿಯವಾಗಿರುವ ತಂತ್ರಜ್ಞಾನದ ಮತ್ತೊಂದು ಕ್ಷೇತ್ರ ಕೃತಕಾಂಗ. ಇದು ಶತಮಾನದಷ್ಟು ಹಳೆಯದು ಎನಿಸಿದರೂ, ಇದೀಗ ಆಧುನಿಕ ಜಗತ್ತಿನಲ್ಲಿ ಬಹಳ ವೇಗವಾಗಿಯೇ ಮುನ್ನಡೆಯುತ್ತಿದೆ.

ಅಪಘಾತವೋ, ಕೈಗಾರಿಕಾ ದುರಂತವೋ, ಇಲ್ಲವೇ ಮತ್ತಾವುದೋ  ಅವಘಡದಲ್ಲಿ ಉಂಟಾದ ಅಂಗವೈಕಲ್ಯ; ಅಂದರೆ ಬೆರಳು–ಕೈ–ಕಾಲು ಕಳೆದುಕೊಂಡವರಿಗೆ ಕೃತಕ ಅಂಗದ ‘ಊರುಗೋಲಿ’ನ ಆಸರೆ ದೊರೆಯುತ್ತದೆ. ಆದರೆ ಕೃತಕ ಬೆರಳು–ಕೈ–ಕಾಲು– ಮೊಣಕಾಲು ಜೋಡಣೆ ಎಂಬುದು ಇಂದು ಕೇವಲ ಆಸರೆಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಅದರ ಆಶಯ ಈ ಚೌಕಟ್ಟನ್ನು ಮೀರಿ ಮುನ್ನಡೆದಿದೆ. ಪ್ರತಿಕ್ಷಣ ಪ್ರತಿದಿನವೂ ಹೊಸದಾಗಿ ಹುಟ್ಟುತ್ತಾ ಬೆಳೆಯುತ್ತಾ ಇರುವ ಆವಿಷ್ಕಾರಗಳು ಇದನ್ನು ಸಾಧ್ಯವಾಗಿಸಿವೆ.

ಇದೀಗ ಆಕಾರ–ನೋಟದಲ್ಲಿ ‘ಸಹಜ’  ಹಾಗೂ ಕಾರ್ಯದಲ್ಲಿ ‘ನೈಜ’ ಎನಿಸುವಂತಹ ಕೃತಕ ತೋಳು ಸಹ ಸಿದ್ಧವಾಗಿದೆ. ಸಂವೇದಕಗಳ ಮೂಲಕ ನರಗಳ ಪ್ರಚೋದನೆಗೆ ಸ್ಪಂದಿಸುವಂತಹ ಕೃತಕ ತೋಳನ್ನು ಅರ್ಜೆಂಟಿನಾದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಕೃತಕ ಅಂಗಗಳನ್ನು ನಿರ್ಮಿಸುವ ಬಯೊಪಾರ್ಕ್ಸ್‌ ಹೆಲ್ತ್ ಟೆಕ್ನಾಲಜಿ ಇದನ್ನು ತಯಾರಿಸಿದೆ.

ಹೀಗಿದೆ ಕೃತಕ ತೋಳು..
ನೋಟದಲ್ಲಿ ಮನುಷ್ಯರ ಕೈಗಳಂತೆಯೇ ಬಹಳ ನೈಜವಾಗಿ ಇರುವ ಈ ಯಾಂತ್ರಿಕ ತೋಳಿಗೆ ಸಂದರ್ಭ–ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಬಲ್ಲ ಪಂಜಿನಂತಹ ಹಸ್ತವಿದೆ. ಹೆಬ್ಬೆರಳು, ತರ್ಜಿನಿ ಹಾಗೂ ಮಧ್ಯದ ಬೆರಳು ಅದರಲ್ಲಿವೆ (ಇನ್ನೂ ಎರಡು ಬೆರಳಿವೆಯಾದರೂ ಅವು ಸಕ್ರಿಯವಾಗಿಲ್ಲ). ಕೃತಕ ತೋಳಿಗೆ ಮೃಧುತ್ವ, ಸ್ಪರ್ಶ, ಬಣ್ಣದಲ್ಲಿ ಥೇಟ್‌ ಮಾನವರ ಚರ್ಮವನ್ನೇ ಹೋಲುವ ಕೃತಕ ತೊಗಲನ್ನು ಮೇಲ್ಪದರವಾಗಿ  ಅಳವಡಿಸಲಾಗಿದೆ. ಅದನ್ನು ಕೈಗವಸಿನಂತೆ ತೆಗೆದು ಮತ್ತೆ ಹಾಕಿಕೊಳ್ಳಲೂ ಅವಕಾಶವಿದೆ. ಈ ಕೃತಕ ತೊಗಲು, ತೋಳಿನ ಗಾತ್ರ, ಬೆರಳಿನ ಆಕಾರ, ರೋಮ ಎಲ್ಲವೂ ಈ ಯಾಂತ್ರಿಕ ತೋಳಿಗೆ ನೈಜ ನೋಟವನ್ನೇ ನೀಡಿವೆ.

ಈ ಯಾಂತ್ರಿಕ ತೋಳಿನಲ್ಲಿರುವ ಬೆರಳುಗಳಿಗೆ ಚಿನ್ನದ ಉಂಗುರ, ಮುಂಗೈಗೆ ಬ್ರೇಸ್‌ಲೆಟ್‌ ತೊಡಿಸಬಹುದು. ಉಗುರಿಗೆ ಮಿನುಗುಟ್ಟುವ ಬಣ್ಣಗಳನ್ನೂ ಹಚ್ಚಬಹುದು. ಅಂದರೆ, ನೈಜವಾದ ಕೈ, ತೋಳುಗಳಿಗೆ ನೀವು ಏನೆನೆಲ್ಲಾ ಮಾಡುತ್ತಿದ್ದಿರೋ ಅದಷ್ಟೂ ಅಲಂಕಾರವನ್ನೂ ಈ ಯಾಂತ್ರಿಕ ತೋಳಿಗೆ ಮಾಡಬಹುದು. ಆಗ ಈ ಕೃತಕ ತೋಳಿನಲ್ಲಿ ನೈಜತೆಯ ಅಂಶಗಳು ಇನ್ನಷ್ಟು ಹೆಚ್ಚುತ್ತವೆ. ಬೇರೆಯವರು ನೋಡಿದರೆ ಖಂಡಿತಾ ಅವರು ಇದನ್ನು ಕೃತಕ ಅಥವಾ ಯಾಂತ್ರಿಕ ಕೈ ಎಂದು ಹೇಳಲು ಸಾಧ್ಯವೇ ಇಲ್ಲ ಎನ್ನುವಷ್ಟು ನೈಜತೆಯನ್ನು ಇದು ಮೈಗೂಡಿಸಿಕೊಂಡಿದೆ!

ಇಷ್ಟೆಲ್ಲದ ಜೊತೆಗೆ ಬರೆಯುವ–ತೊಳೆಯುವ ಕೆಲಸವನ್ನೂ ಈ ಕೃತಕ ಕೈಯಿಂದ ಮಾಡಲೂ ಸಾಧ್ಯವಿದೆ ಎನ್ನುತ್ತಾತೆ ಇದರ ಸೃಷ್ಟಿಕರ್ತರು.

ಹೀಗೆ ಕೆಲಸ..
ಸಂವೇದಕ (ಸೆನ್ಸರ್) –ಸಂಕೇತ ಇದರ ಕಾರ್ಯನಿರ್ವ­ಹಣೆಯ ಜೀವಾಳ! ‘ತೋಳು ಹಾಗೂ ಕೃತಕ ಅಂಗ ಸಂಪರ್ಕ ಹೊಂದುವ ಬಿಂದುಗಳಲ್ಲಿ ಉತ್ಪತ್ತಿಯಾಗುವ ಎಲೆಕ್ಟ್ರಿಕ್‌ ಸಂಕೇತ, ಸಂದೇಶಗಳನ್ನು ಯಾಂತ್ರಿಕ ತೋಳು ಪತ್ತೆ ಮಾಡುತ್ತದೆ. ಸಂವೇದಕ ಈ ಕಾರ್ಯವನ್ನು ಮಾಡುತ್ತದೆ.

ಇಲ್ಲಿ ನರಗಳ ಅಂಚಿನಲ್ಲಿ ವ್ಯಕ್ತವಾಗುವ ಉದ್ವೇಗ/ಪ್ರಚೋದನೆ ಮೊದಲಾದ ಸಂಕೇತಗಳು ಈ ಯಾಂತ್ರಿಕ ತೋಳಿನ ಮೈಕ್ರೋ ಕಂಟ್ರೋಲರ್‌ಗೆ (ಕಿರು ನಿಯಂತ್ರಕ) ರವಾನೆಯಾಗುತ್ತವೆ. ಹೀಗೆ ಬರುವ ಸಂಕೇತಗಳನ್ನು ನಿಯಂತ್ರಕವು ಚಿಕ್ಕ ಮೋಟಾರ್‌ಗೆ ಸಾಗಿಸುತ್ತದೆ. ಅದು  ಸಂಕೇತಗಳಿಗೆ ಅನುಸಾರವಾಗಿ ಕೈಯನ್ನು ಮೇಲಕ್ಕೆ, ಕೆಳಕ್ಕೆ, ಎಡಬಲಕ್ಕೆ ಚಲಿಸುವಂತೆ ಮಾಡುತ್ತದೆ’ ಎನ್ನುತ್ತಾರೆ ಈ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಎಂಜಿನಿಯರ್ ಸೆಬಾಸ್ಟಿಯನ್‌ ವಿಕಾರಿಯೊ.

‘ಮೊದಲು ಯಾಂತ್ರಿಕ ತೋಳಿಗೆ, ಕೈಗಳಿಗೆ ಅಸಾಧ್ಯವಾಗಿದ್ದ ಕೆಲಸಗಳು ಇದೀಗ ಈ ಸುಧಾರಿತ ತಂತ್ರಜ್ಞಾನದಿಂದಾಗಿ ಸಾಧ್ಯವಾಗುತ್ತಿವೆ. ವಿಶೇಷವಾಗಿ ಪಾತ್ರೆಗಳನ್ನು ಯಾಂತ್ರಿಕ ಕೈನ ಬೆರಳುಗಳಿಂದ ಹಿಡಿದುಕೊಳ್ಳುವುದು, ಪೆನ್‌ ಹಿಡಿದು ಬರೆಯುವುದು ಮೊದಲಾದ ಕೆಲಸಗಳ ನಿರ್ವಹಣೆ ಸಾಧ್ಯವಾಗಿದೆ’ ಎನ್ನುತ್ತಾರೆ ಕೈಗಾರಿಕಾ ದುರಂತದಲ್ಲಿ ಬಲಗೈ ಕಳೆದುಕೊಂಡು ಕಳೆದ ಎರಡು ವರ್ಷಗಳಿಂದ ಈ ಸಾಧನದ ಪ್ರಯೋಗಕ್ಕೆ ಒಳಪಡುತ್ತಿರುವ ಸ್ಟೆಲ್ಲಾ ಅಜಂಬುಲ್ಲೊ.

‘ಮೊಂಡಾಗಿದ್ದ ನನ್ನ ತೋಳಿಗೆ ಕೊನೆಗೂ ಮುಕ್ತ ಚಲನೆ ದೊರೆತಿದೆ. ಶೇಕಡ 100ರಷ್ಟಲ್ಲದಿದ್ದರೂ ಬಹುತೇಕ ಚಲನೆ ಸಾಧ್ಯವಾಗಿದೆ’ ಎಂದು ಎನ್ನುತ್ತಾರೆ ಅವರು.

ಅಂದಹಾಗೆ, ಎಲ್ಲಾ ಅಂದುಕೊಂಡಂತೆ ನಡೆದರೆ ಈ ಯಾಂತ್ರಿಕ /ಕೃತಕ ಕೈ ಈ ವರ್ಷವೇ ಮಾರುಕಟ್ಟೆಗೆ  ಬರಲಿದೆ.
‘ಸದ್ಯ ಮಾರುಕಟ್ಟೆಯಲ್ಲಿರುವ  ಇಂತಹುದೇ ಮಾದರಿಯ ಇತರೆ ಹಲವು ಕೃತಕ ಕೈ ತೋಳುಗಳಿಗೆ ಹೋಲಿಸಿದರೆ ಇದರ ಬೆಲೆ ಕಡಿಮೆಯೇ  ಇದೆ. ಅಂದರೆ 22 ಸಾವಿರ ಡಾಲರ್ (ಸುಮಾರು ರೂ 13.50 ಲಕ್ಷ)’ ಎನ್ನುತ್ತಾರೆ ತಂತ್ರಜ್ಞ ವಿಕಾರಿಯೊ.

Write A Comment