ನವದೆಹಲಿ, ಜ.9: ಕೇಂದ್ರದ ಮಾಜಿ ಸಚಿವ ಶಶಿತರೂರ್ ಪತ್ನಿ ಸುನಂದಾ ತರೂರ್ ಸಾವಿನ ಪ್ರಕರಣ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಸುನಂದಾ ಸಾವಿಗೆ ಎರಡು ದಿನಗಳ ಮುಂಚೆ ಸುನಿಲ್ ಸಾಹೆಬ್ ಎಂಬ ವ್ಯಕ್ತಿ ಅವರ ಜತೆಯಲ್ಲಿದ್ದರು ಎಂದು ತರೂರ್ ಮನೆಗೆಲಸದ ನರೈನ್ ಹೇಳಿರುವುದರಿಂದ ಪೊಲೀಸರು ಈಗ ಆ ಸುನಿಲ್ ಎಂಬ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದಾರೆ. ಸುನಂದಾ ಪುಷ್ಕರ್ ಸಾವಿಗೆ ಎರಡು ದಿನದ ಮುಂಚೆ ಈ ಸುನಿಲ್ ಎಂಬ ವ್ಯಕ್ತಿ ಅವರ ಬಳಿ ಇದ್ದ. ಆ ವ್ಯಕ್ತಿ ಸುನಂದಾರ ಕಂಪ್ಯೂಟರ್‌ನ ಟ್ವಿಟರ್, ಫೇಸ್‌ಬುಕ್ ಮುಂತಾದ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದ ಎಂದು ನರೈನ್ ಹೇಳಿದ್ದಾನೆ.
ಆ ಸಂದರ್ಭ ದೆಹಲಿಯ ಲೀಲಾ ಪ್ಯಾಲೇಸ್ ಹೊಟೇಲ್‌ನಿಂದ ಶಶಿತರೂರ್ ಅವರಿಗೆ ಫೋನ್ ಕರೆ ಮಾಡಿದ್ದರು ಎಂಬ ಮಾಹಿತಿಯನ್ನು ನರೈನ್ ನೀಡಿದ್ದಾನೆ. ಇತ್ತೇಚೆಗೆ ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟಂತೆ ಸುನಂದಾ ದಂಪತಿಯಲ್ಲಿ ವಿವಾದ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸುನಂದಾ ಪುಷ್ಕರ್ ಬೇಸರಗೊಂಡಿದ್ದರು ಎಂಬ ಅಂಶವೂ ಬೆಳಕಿಗೆ ಬಂದಿದೆ.
ಇಂದು ತರೂರ್ ಬಿಡುಗಡೆ:
ಕೇರಳದ ಆಯುರ್ವೇದ ಆಸ್ಪತ್ರೆಯೊಂದರಲ್ಲಿ ಚಿಕಿತಸೆ ಪಡೆಯುತ್ತಿರುವ ಶಶಿತರೂರ್ ಅವರ ಚಿಕಿತ್ಸೆ ಇಂದು ಪೂರ್ಣಗೊಳ್ಳಲಿದ್ದು, ಇಂದೇ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಅಗತ್ಯಬಿದ್ದರೆ ವಿಚಾರಣೆ:
ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಅಗತ್ಯ ಕಂಡು ಬಂದರೆ ಮಾಜಿ ಸಚಿವ ಶಶಿತರೂರ್ ಅವರ ನೆರವನ್ನೂ ಪಡೆಯಲಾಗುವುದು ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್.ಭಸ್ಸಿ ತಿಳಿಸಿದ್ದಾರೆ.