ಬೆಂಗಳೂರು, ಜ.9: ದೇಶದ ಹಲವೆಡೆ ಭಯೋತ್ಪಾದಕ ತಾಣಗಳಿವೆ. ಅದು ಕೇವಲ ನಗರ ಹಾಗೂ ಭಟ್ಕಳಕ್ಕೆ ಸೀಮಿತವಾಗಿಲ್ಲ. ಉಗ್ರರ ಅಡಗುತಾಣಗಳನ್ನು ಭೇದಿಸುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2008ರಿಂದಲೂ ಭಟ್ಕಳದಲ್ಲಿ ಉಗ್ರರ ಅಡಗುತಾಣದ ಬಗ್ಗೆ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಬೆಂಗಳೂರಿನಲ್ಲಿ ಇಬ್ಬರು ಹಾಗೂ ಭಟ್ಕಳದಲ್ಲಿ ಒಬ್ಬರನ್ನು ಬಂಧಿಸಿದ್ದಾರೆ.
ಈ ವೇಳೆ ಸಾಕಷ್ಟು ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಉಗ್ರರ ಸಂಚಿನ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು. ಉಗ್ರರ ಅಡಗುತಾಣಗಳು ದೇಶದ ಎಲ್ಲೆಡೆ ಇದೆ. ರಾಜ್ಯದಲ್ಲಿನ ಉಗ್ರರ ಅಡಗುತಾಣಗಳನ್ನು ಭೇದಿಸಲಾಗಿದೆ ಎಂದು ಹೇಳಿದರು. ಗೃಹ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಉಗ್ರರನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಕೈಗೊಂಡಿರುವ ಕ್ರಮ ಅಭಿನಂದನೀಯ ಎಂದು ತಿಳಿಸಿದರು.
ರಾಜ್ಯದಲ್ಲಿ ಅಡಗಿದ್ದ ಉಗ್ರರಿಂದ ಆಗಬಹುದಾಗಿದ್ದ ಅನಾಹುತಗಳು ಅವರ ಬಂಧನದಿಂದ ಬೆಳಕಿಗೆ ಬಂದಿದೆ. ಪೊಲೀಸರು ಇನ್ನಷ್ಟು ಎಚ್ಚರಿಕೆ ವಹಿಸಲಿದ್ದಾರೆ. ಇತ್ತೀಚೆಗೆ ಶಾಲಾ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಸಂಬಂಧ ಉಂಟಾದ ಗಲಭೆಯಲ್ಲಿ ಕಿಡಿಗೇಡಿಗಳ ಕೈವಾಡವಿದೆ. ಬಾಲಕಿಯರ ಪೋಷಕರ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿದರು. ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಪ್ರತಿ ಗ್ರಾಮದಲ್ಲೂ, ಪ್ರತಿ ಮನೆಗಳಲ್ಲೂ ಶೌಚಾಲಯ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಅದರಂತೆ ಸರ್ಕಾರ ಸಮರೋಪಾದಿಯಲ್ಲಿ ಯೋಜನೆ ರೂಪಿಸಿಕೊಂಡು ಕೆಲಸ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಆದರೆ ಮೂತ್ರ ವಿಸರ್ಜನೆ ಚಳವಳಿ ನಡೆಸಲು ಮುಂದಾಗಿರುವ ವಾಟಾಳ್ ನಾಗರಾಜ್ ಅವರು ಚಳವಳಿ ಕೈಬಿಡುವರೆಂಬ ಭರವಸೆ ಇದೆ ಎಂದರು. ರಾಜ್ಯ ಸರ್ಕಾರ ಸ್ವಚ್ಛತೆ ಸೇರಿದಂತೆ ನೈರ್ಮಲ್ಯಕ್ಕೂ ಹೆಚ್ಚಿನ ಆದ್ಯತೆ ನೀಡಿ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕಿಳಿಸಿದೆ ಎಂದು ತಿಳಿಸಿದರು.