ರಾಷ್ಟ್ರೀಯ

ಗೋಡ್ಸೆ ಪ್ರತಿಮೆ ಸ್ಥಾಪನೆಗೆ ಸೋದರ ಸೊಸೆ ಆಕ್ಷೇಪ; ಪ್ರತಿಮೆಗಳನ್ನು ಸ್ಥಾಪಿಸಿಯೇ ಸಿದ್ಧ ಎಂದು ಹಠ ಹಿಡಿದ ಹಿಂದೂ ಮಹಾಸಭಾ

Pinterest LinkedIn Tumblr

nathuram-godse-mahatma-gandhi

ಹೊಸದಿಲ್ಲಿ : ರಾಷ್ಟ್ರಪಿತ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯ ಮಂದಿರ ನಿರ್ಮಿಸಲು ಅಖಿಲ ಭಾರತೀಯ ಹಿಂದೂ ಮಹಾ ಸಭಾ ಮುಂದಾಗಿದ್ದು ದೊಡ್ಡ ವಿವಾದ ಸೃಷ್ಟಿಸಿದೆ. ಇದರ ಮಧ್ಯೆಯೇ ದೇಶಾದ್ಯಂತ ಗೋಡ್ಸೆಯ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲು ಹೊರಟಿರುವ ಹಿಂದೂ ಮಹಾಸಭಾದ ಕ್ರಮಕ್ಕೆ ಅವರ ಸೋದರ ಸೋಸೆ ಹಿಮಾನಿ ಅವರಿಂದಲೇ ಆಕ್ಷೇಪ ಕೇಳಿಬಂದಿದೆ. ವಾಸ್ತವದಲ್ಲಿ ಇದು ಗೌರವಕ್ಕಿಂತ ಹೆಚ್ಚಾಗಿ ಗೋಡ್ಸೆ ಅವರನ್ನು ಕೆಟ್ಟ ದೃಷ್ಟಿಯಿಂದ ನೋಡುವಂತೆ ಮಾಡುತ್ತದೆ ಎಂದವರು ಅಸಮಾಧಾನ ಹೊರಹಾಕಿದ್ದಾರೆ.

67 ವರ್ಷದ ಹಿಮಾನಿ ಅವರು ನಾಥೂರಾಮ್ ಗೋಡ್ಸೆ ಅವರ ಕಿರಿಯ ಸೋದರ ಗೋಪಾಲ ಗೋಡ್ಸೆ ಅವರ ಮಗಳು. ಗಾಂಧಿ ಹತ್ಯೆ ನಡೆದಾಗ ಇವರು 10 ತಿಂಗಳ ಕೂಸು. ಈ ಪ್ರಕರಣದಲ್ಲಿ ಇವರ ತಂದೆಯೂ 18 ವರ್ಷ ಜೈಲುವಾಸ ಅನುಭವಿಸಿದ್ದರು. ಕಾಕತಾಳೀಯ ಎಂಬಂತೆ, ರಾಷ್ಟ್ರಪಿತನ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿದ್ದ ವಿನಾಯಕ ದಾಮೋದರ ಸಾವರ್ಕರ್ ಅವರ ಸೋದರ ಸಂಬಂಧಿಯನ್ನು ವರಿಸಿರುವ ಹಿಮಾನಿ ಅವರಿಗೆ ಹಿಂದೂ ಮಹಾಸಭಾ ನಡೆಸುತ್ತಿರುವ ಗೋಡ್ಸೆಯನ್ನು ಗೌರವಿಸುವ ಕಾರ್ಯಕ್ರಮಗಳು ತೀವ್ರ ಬೇಸರ ಮೂಡಿಸಿವೆ.

ಪುಣೆ ಮೂಲದ ‘ಅಭಿನವ್ ಭಾರತ್’ ಹಿಂದೂ ಸಂಘಟನೆಯ ಮುಖ್ಯಸ್ಥೆಯಾಗಿರುವ ಹಿಮಾನಿ ಅವರು, ”ನಾಥೂರಾಮ್ ಗೋಡ್ಸೆ ಅವರ ಪ್ರತಿಮೆಗಳ ಸ್ಥಾಪನೆಯಿಂದ ಗೌರವ ಹೆಚ್ಚುವುದಕ್ಕಿಂತ ಕುಂದುವುದೇ ಜಾಸ್ತಿ. ಅವರೊಬ್ಬ ದೇಶಭಕ್ತರಾಗಿದ್ದಾರೇ ವಿನಃ ಹುಚ್ಚ ಅಥವಾ ಸುಪಾರಿ ಹಂತಕನಾಗಿರಲಿಲ್ಲ. ಗೋಡ್ಸೆಯ ಪ್ರತಿಮೆಗಳನ್ನು ಸ್ಥಾಪಿಸುವುದರಿಂದ ಅವರನ್ನು ಒಬ್ಬ ಕಪಟ ಹಂತಕ ಇಲ್ಲವೇ ಭಯೋತ್ಪಾದಕನಂತೆ ಬಿಂಬಿಸಿದಂತಾಗುತ್ತದೆ. ಇದಕ್ಕಿಂತಲೂ ಮುಖ್ಯವಾದ ಅಸಂಖ್ಯಾತ ವಿಷಯಗಳು ದೇಶದಲ್ಲಿದ್ದು, ಜನಪ್ರತಿನಿಧಿಗಳು ಅವುಗಳ ಬಗ್ಗೆ ಗಮನಹರಿಸುವುದು ಒಳಿತು,” ಎನ್ನುತ್ತಾರೆ.

”ಗೋಡ್ಸೆ ಅವರ ಚಿಂತನೆಗಳು ಹಾಗೂ ಗಾಂಧಿಯನ್ನು ಕೊಲ್ಲಲು ಅವರು ನೀಡಿದ್ದ ಕಾರಣಗಳನ್ನು ದೇಶದ ಇತಿಹಾಸ ಬೋಧನೆಯ ವಿಧಾನಗಳನ್ನೇ ಬದಲಿಸಬಲ್ಲಂತಹದ್ದಾಗಿದ್ದವು. ದೇಶವು ಇದನ್ನು ಅಮೂಲಾಗ್ರವಾಗಿ ಅರ್ಥೈಸಿಕೊಳ್ಳಬೇಕೇ ಹೊರತು ವಿವಾದಗಳಿಂದಲ್ಲ,” ಎಂದು ಹಿಮಾನಿ ಹೇಳುತ್ತಾರೆ. ಹಾಗೆಯೇ ಈ ದೇಶದಲ್ಲಿ ದಶಕಗಳಿಂದಲೂ ಗೋಡ್ಸೆಯನ್ನು ಗೌರವಿಸುತ್ತಾ ಬಂದಿರುವ ಜನರಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರಿಗೆ ಅಂತಹ ಹಕ್ಕಿದೆ ಎಂದೂ ಪ್ರತಿಪಾದಿಸುತ್ತಾರೆ.

ಅಂದಹಾಗೆ, ಗೋಡ್ಸೆ ಅವರ ಚಿತಾಭಸ್ಮವನ್ನು ಜೋಪಾನವಾಗಿ ಸಂಗ್ರಹಿಸಿಟ್ಟುಕೊಂಡಿರುವ ಇವರು, ಕಳೆದ ಆರು ದಶಕಗಳಿಂದ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾ ಬಂದಿದ್ದಾರೆ.

ಬ್ರಾಹ್ಮಣರ ತುಚ್ಛೀಕರಣ:
ಗೋಡ್ಸೆ ಪ್ರತಿಮೆ ವಿಚಾರವಾಗಿ ಸಂಸತ್ ಕಲಾಪಗಳಿಗೆ ಅಡ್ಡಿಪಡಿಸಿದ ಪ್ರತಿಪಕ್ಷಗಳ ಕ್ರಮದ ವಿರುದ್ಧ ಹರಿಹಾಯುವ ಹಿಮಾನಿ, ”ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದಕ್ಕಾಗಿ ಗೋಡ್ಸೆ ಅವರನ್ನು ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳು ಹೀನಾಯವಾಗಿ ನಡೆಸಿಕೊಳ್ಳುತ್ತಿವೆ. ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಹಂತಕರಿಗಿಂತಲೂ ಹೆಚ್ಚಾಗಿ ಕಾಂಗ್ರೆಸ್ ಗೋಡ್ಸೆಯನ್ನು ರಾಜಕೀಯ ದಾಳವಾಗಿ ಬಳಸಿಕೊಂಡಿದೆ. ಬ್ರಾಹ್ಮಣರನ್ನು ಹೀಗಳೆಯುವುದೇ ಕಾಂಗ್ರೆಸ್ ಉದ್ದೇಶವಾಗಿದೆ,” ಎಂದು ಕಿಡಿಕಾರುತ್ತಾರೆ.

”ಉಗ್ರರನ್ನು ಮಟ್ಟಹಾಕುವ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಒಂದೇ ಬಗೆಯ ಧೋರಣೆ ಅನುಸರಿಸುತ್ತಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಈ ವಿಷಯದಲ್ಲಿ ಇನ್ನು ಮುಂದೆ ದೃಢ ನಿರ್ಧಾರ ತೆಗೆದುಕೊಳ್ಳುತ್ತದೆ,” ಎಂಬ ವಿಶ್ವಾಸ ವ್ಯಕ್ತಪಡಿಸುವ ಹಿಮಾನಿ, ಪ್ರಧಾನಿ ಮುಂದಿನ ದಿನಮಾನಗಳಲ್ಲಿ ಗೋಡ್ಸೆಯ ಬಗೆಗೆ ದೇಶದ ಜನತೆ ಹೊಂದಿರುವ ಚಿತ್ರಣವನ್ನು ಬದಲಿಸುತ್ತಾರೆ ಎಂಬ ಭರವಸೆ ಹೊರಹಾಕಿದ್ದಾರೆ. ಮಹಾರಾಷ್ಟ್ರದಲ್ಲಿ ಈ ಹಿಂದೆ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣವೊಂದರಲ್ಲಿ ಹಿಮಾನಿ ನೇತೃತ್ವದ ‘ಅಭಿನವ್ ಭಾರತ್’ ಸಂಘಟನೆಯ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು.

Write A Comment