ನವದೆಹಲಿ, ಡಿ.23: ಜಿದ್ದಾಜಿದ್ದಿನ ಕಣವಾಗಿ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ಜಾರ್ಖಂಡ್ ಹಾಗೂ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಕಣಿವೆ ರಾಜ್ಯದಲ್ಲೂ ಮೋದಿ ಮೋಡಿ ಇತಿಹಾಸ ನಿರ್ಮಾಣ ಮಾಡಿದೆ. ಎರಡು ರಾಜ್ಯಗಳಲ್ಲೂ ಕಾಂಗ್ರೆಸ್ ಧೂಳೀಪಟವಾಗಿದ್ದು, ಸೋಲಿನ ಸರಣಿ ಮುಂದುವರಿಸಿದೆ. ಜಾರ್ಖಂಡ್‌ನಲ್ಲಿ ನೂತನ ರಾಜ್ಯ ರಚನೆಯಾಗಿ14 ವರ್ಷದ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರ ಗದ್ದುಗೆ ಹಿಡಿಯುವತ್ತ ದಾಪುಗಾಲಿಟ್ಟಿದೆ. ಭಾರತದ ಭೂ ಶಿಖರ ಎಂದೇ ಕರೆಯಲ್ಪಡುವ ಜಮ್ಮು ಮತ್ತು ಕಾಶ್ಮೀರದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಿದ್ದು, ಇಲ್ಲಿಯೂ ಕೂಡ ಬಿಜೆಪಿ ಮೈತ್ರಿ ಸರ್ಕಾರ ರಚನೆ ಮಾಡುವತ್ತ ಕಸರತ್ತು ನಡೆಸಿದೆ.
ಇದಕ್ಕೆ ಇಂಬು ನೀಡುವಂತೆ ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್ ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ.
ಜಾರ್ಖಂಡ್‌ನ ಒಟ್ಟು 81 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 41 ಸ್ಥಾನಗಳನ್ನು ಗೆಲ್ಲುವ ಮೂಲಕ ಮೊದಲ ಬಾರಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚನೆಯತ್ತ ದಾಪುಗಾಲಿಟ್ಟಿದೆ. ಸರ್ಕಾರ ರಚನೆ ಮಾಡಲು ಸರಳ ಬಹುಮತವಾಗಿ 42 ಸ್ಥಾನಗಳನ್ನು ಪಡೆಯಬೇಕು. ಈಗಾಗಲೇ ಬಿಜೆಪಿಗೆ ಜೆವಿಎಂ ಬೆಂಬಲ ನೀಡಲು ಮುಂದೆ ಬಂದಿರುವುದರಿಂದ ಸರ್ಕಾರ ರಚನೆಗೆ ಯಾವ ಅಡ್ಡಿಯೂ ಇಲ್ಲ. ಇದೇ ರೀತಿ ಜಮ್ಮು-ಕಾಶ್ಮೀರದ ಒಟ್ಟು 87 ಕ್ಷೇತ್ರಗಳಲ್ಲಿ ಪಿಡಿಪಿ 30, ಬಿಜೆಪಿ 26, ನ್ಯಾಷನಲ್ ಕಾನ್ಫರೆನ್ಸ್ 13, ಕಾಂಗ್ರೆಸ್ 12 ಹಾಗೂ ಇತರರು 6 ಕ್ಷೇತ್ರಗಳಲ್ಲಿ ಗೆಲುವಿನತ್ತ ಮುಖ ಮಾಡಿದ್ದಾರೆ. ಲೋಕಸಭೆ ಚುನಾವಣೆ ನಂತರ ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಯಲ್ಲೂ ಸೋಲು ಕಂಡಿದ್ದ ಕಾಂಗ್ರೆಸ್ ಈ ಎರಡೂ ರಾಜ್ಯಗಳಲ್ಲೂ ಹೀನಾಯ ಪ್ರದರ್ಶನ ಕಂಡಿದೆ.
ಗಮನಿಸಬೇಕಾದ ಅಂಶವೆಂದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಲೆ ಮತ್ತೆ ಬಿಜೆಪಿಗೆ ಬಲ ತಂದುಕೊಟ್ಟಿದೆ. ಆದರೆ, ಕಾಂಗ್ರೆಸ್ ಯುವನಾಯಕ ರಾಹುಲ್‌ಗಾಂಧಿ ಆಟ ಇಲ್ಲಿಯೂ ಕೂಡ ಹುಸಿಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಬೇಕೆಂಬ ಬಿಜೆಪಿ ಆಸೆ ಈಡೇರದಿದ್ದರೂ ಮೈತ್ರಿ ಪಕ್ಷಗಳ ಮೂಲಕ ಮೊದಲ ಬಾರಿಗೆ ಕಣಿವೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ. ಈಗಾಗಲೇ ಪಿಡಿಪಿ ಬಿಜೆಪಿ ಜತೆ ಸರ್ಕಾರ ರಚನೆಗೆ ಸಿದ್ಧ ಎಂದು ಘೋಷಿಸಿದೆ. ಮತ್ತೊಂದೆಡೆ ಎನ್‌ಸಿ ಕೂಡ ಬಿಜೆಪಿಗೆ ಬಾಹ್ಯ ಬೆಂಬಲ ನೀಡಲು ಮುಂದೆ ಬಂದಿದೆ.ಜಾರ್ಖಂಡ್ ಮತ್ತು ಜಮ್ಮು-ಕಾಶ್ಮೀರದ ಫಲಿತಾಂಶ ಮೇಲ್ನೋಟಕ್ಕೆ ಕೇಂದ್ರ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ ಮೋದಿ ನಾಯಕತ್ವಕ್ಕೆ ಇನ್ನಷ್ಟು ಬಲ ತಂದಿರುವುದು ಸುಳ್ಳ ಲ್ಲ. ಕಾಂಗ್ರೆಸ್‌ನ ಸೋಲಿನ ಸರಣಿ ಇಲ್ಲಿಯೂ ಮುಂದುವರಿದಿರುವುದರಿಂದ ರಾಹುಲ್ ನಾಯಕತ್ವಕ್ಕೆ ಮತ್ತೆ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗಿದೆ.
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಎರಡೂ ಕ್ಷೇತ್ರಗಳಲ್ಲಿ ಪರಾಭವಗೊಂಡು ತೀವ್ರ ಮುಖಭಂಗಕ್ಕೆ ಗುರಿಯಾಗಿದ್ದಾರೆ. ರಾಂಚಿ ವರದಿ: ಬಿಹಾರದಿಂದ 2000ರಲ್ಲಿ ಪ್ರತ್ಯೇಕ ರಾಜ್ಯ ಕಂಡ ಜಾರ್ಖಂಡ್ 14 ವರ್ಷಗಳ ಬಳಿಕ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರ ಗದ್ದುಗೆ ಹಿಡಿದಿದೆ.
ರಾಜ್ಯ ರಚನೆಯಾದ ಮೇಲೆ ಐವರು ಮುಖ್ಯಮಂತ್ರಿಗಳು ಹಾಗೂ ಮೂರು ಬಾರಿ ರಾಷ್ಟ್ರಪತಿ ಆಡಳಿತ ಕಂಡಿದ್ದ ನಕ್ಸಲ್ ಪೀಡಿತ ಈ ರಾಜ್ಯ ಇದೇ ಮೊದಲ ಬಾರಿಗೆ ಒಂದೇ ಪಕ್ಷ ಆಡಳಿತ ನಡೆಸಲು ಮತದಾರರು ಬಿಜೆಪಿಗೆ ತೀರ್ಪು ನೀಡಿದ್ದಾರೆ. ಲೋಕಸಭೆ ಚುನಾವಣೆಯಿಂದ ಹೊರಬಾರದ ಮತದಾರರು ಈ ಬಾರಿಯೂ ಬಿಜೆಪಿಯನ್ನೇ ಕೈ ಹಿಡಿದಿರುವುದು ಫಲಿತಾಂಶದಿಂದ ಗೋಚರವಾಗಿದೆ. ರಾಜ್ಯದ ಒಟ್ಟು 81 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 41 ವಿಧಾನಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರೆ, ಅದರ ಮಿತ್ರ ಪಕ್ಷ ಜೆವಿಎಂ 8 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆಡಳಿತಾರೂಢ ಜೆಎಂಎಂ ಹಾಗೂ ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಮತದಾರ ಸಾರಾಸಗಟಾಗಿ ತಿರಸ್ಕರಿಸಿದ್ದಾನೆ. 20 ಕ್ಷೇತ್ರಗಳಲ್ಲಿ ಜೆಎಂಎಂ ಹಾಗೂ ಕಾಂಗ್ರೆಸ್ ಕೇವಲ 7 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ರಾಜಧಾನಿ ರಾಂಚಿ, ಹಜರಿಭಾಗ್, ಮೇದಿನಿ ನಗರ್, ಗಿರಿಧ್, ಚೈಬಾಸಾ, ದುಮ್ಕಾ ಸೇರಿದಂತೆ ಮತ್ತಿತರ ಕಡೆ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಮುಖ್ಯಮಂತ್ರಿ ಶಿಬು ಸೊರೇನ್ ನೈತಿಕ ಹೊಣೆ ಹೊತ್ತು, ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಗಳಾದ ಅರ್ಜುನ್ ಮುಂಡಾ ಹಿನ್ನಡೆ ಅನುಭವಿಸಿದ್ದರೆ, ಮಾಜಿ ಮುಖ್ಯಮಂತ್ರಿ ಮಧುಖೋಡಾ ಸೋಲು ಕಂಡಿದ್ದಾರೆ. ಇನ್ನೊಂದೆಡೆ ಬಾಬುಲಾಲ್ ಮೊರಾಂಡಿ ಕೂಡ ಸೋಲಿನ ಸುಲಿಗೆ ಸಿಲುಕಿದ್ದಾರೆ.
ಶ್ರೀನಗರ ವರದಿ: ಶತಾಯ-ಗತಾಯ ಕಣಿವೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಬೇಕೆಂಬ ಬಿಜೆಪಿ ಆಸೆ ಈಡೇರಿಲ್ಲ. ಆದರೆ, ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸುವುದರ ಮೂಲಕ ಇತಿಹಾಸ ಸೃಷ್ಟಿಸಿದೆ. ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಜೆಪಿ 26 ಸ್ಥಾನಗಳನ್ನು ಗೆಲ್ಲುವುದರ ಮೂಲಕ ದಾಖಲೆ ನಿರ್ಮಿಸಿದೆ. ಗಮನಿಸಬೇಕಾದ ಅಂಶವೆಂದರೆ, ವಂಶಾಡಳಿತಕ್ಕೆ ಹೆಸರುವಾಸಿಯಾಗಿದ್ದ ಎನ್‌ಸಿ ಹಾಗೂ ಪಿಡಿಪಿಗೆ ಸಮಬಲವಾಗಿ ಬಿಜೆಪಿ ಸ್ಪರ್ಧೆಯೊಡ್ಡಿದೆ.
ಒಟ್ಟು 87 ವಿಧಾನಸಭಾ ಕ್ಷೇತ್ರಗಳಲ್ಲಿ ಮಿಷನ್-44 ಬಿಜೆಪಿ ಕಾರ್ಯಾಚರಣೆ ಈಡೇರಿಲ್ಲ. ಆದರೆ, 26 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಕಣಿವೆ ರಾಜ್ಯದಲ್ಲೂ ಮೋದಿ ಮೋಡಿ ಪಕ್ಷಕ್ಕೆ ಬಲ ತಂದುಕೊಟ್ಟಿದೆ. ಪಿಡಿಪಿ 30 ಕ್ಷೇತ್ರಗಳಲ್ಲಿ ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮತ್ತೊಂದೆಡೆ ಕಾಂಗ್ರೆಸ್ ಕೂಡ ಬೆಂಬಲ ನೀಡಲು ಮುಂದೆ ಬಂದಿರುವುದರಿಂದ ಸರ್ಕಾರ ರಚನೆ ಕಸರತ್ತು ಇನ್ನೂ ಕೆಲ ದಿನಗಳವರೆಗೆ ಮುಂದುವರಿಯಲಿದೆ. ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದ್ದರೂ ಬಿಜೆಪಿ ಸರ್ಕಾರ ರಚನೆ ಮಾಡುವ ಸಾಧ್ಯತೆ ನಿಚ್ಚಳವಾಗಿದೆ. ಈಗಾಗಲೇ ಬಿಜೆಪಿಗೆ ಪಿಡಿಪಿ ಹಾಗೂ ಎನ್‌ಸಿ ಬೆಂಬಲ ನೀಡಲು ಮುಂದೆ ಬಂದಿವೆ.
ಜಮ್ಮು ಪ್ರಾಂತ್ಯದಲ್ಲಿ ಹಿಂದೂ ಮತಗಳ ಧೃವೀಕರಣದಿಂದ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಾಗಿದೆ. ಇದೇ ರೀತಿ ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಮತಗಳ ಒಗ್ಗೂಡುವಿಕೆಯಿಂದ ಪಿಡಿಪಿ ಹೆಚ್ಚಿನ ಸ್ಥಾನ ಗಳಿಸಿದೆ. ಆಡಳಿತಾರೂಢ ಎನ್‌ಸಿ ಹೀನಾಯ ಸೋಲು ಕಂಡಿದ್ದು, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಡಳಿತಾರೂಢ ಎನ್‌ಸಿ ಪಕ್ಷದ ಅನೇಕ ಸಚಿವರು ಮತ್ತು ಶಾಸಕರು ಸೋಲು ಕಂಡಿದ್ದಾರೆ. ಪ್ರತ್ಯೇಕತಾವಾದಿ ಮಾಜಿ ನಾಯಕ ಸಜ್ಜನ್‌ಲೋನ್, ಸೈಯದ್ ಮುಫ್ತಿ ಸೇರಿದಂತೆ ಅನೇಕರು ಗೆಲುವು ಕಂಡಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರೀ ಪ್ರವಾಹ ಎನ್‌ಸಿಯನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿದೆ. ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲರಾದ ಒಮರ್ ಅಬ್ದುಲ್ಲಾಗೆ ಮುಳುವಾಗಿ ಪರಿಣಮಿಸಿದೆ.
* ಬಿರ್ವಾಲ್‌ನಲ್ಲಿ ಗೆಲುವಿನ ನಗೆ ಬೀರಿದ ಒಮರ್.
* ಅನಂತ್‌ನಾಗ್‌ನಲ್ಲಿ ಸತತ ಗೆಲುವು ಕಂಡ ಪಿಡಿಪಿ ಮುಖ್ಯಸ್ಥೆ ಮುಫ್ತಿ ಮಹಮ್ಮದ್ ಸಯ್ಯದ್.
* ಹಂದ್ವಾರ್ ಕ್ಷೇತ್ರದಲ್ಲಿ ವಿಜೇತರಾದ ಸಜ್ಜನ್‌ಲೋನ್.
*ಅಮೀರ್‌ಖದಲ್‌ನಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಹೀನಾಭಟ್‌ಗೆ ಮುಖಭಂಗ.
* ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧುಖೋಡಾಗೆ ಹೀನಾಯ ಸೋಲು.
* ಗೆಲುವಿಗಾಗಿ ತಿಣುಕಾಡುತ್ತಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ.
* ಗಿರಿಧ್ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮೊರಾಂಡಿಗೆ ತೀವ್ರ ಮುಖಭಂಗ.