ರಾಷ್ಟ್ರೀಯ

ಗುಜರಾತ್‌ನಲ್ಲಿ 100ಕ್ಕೂ ಹೆಚ್ಚು ಬುಡಕಟ್ಟು ಕ್ರೈಸ್ತರ ಮತಾಂತರ: ವಿಎಚ್‌ಪಿಯಿಂದ ಘರ್ ವಾಪಸಿ

Pinterest LinkedIn Tumblr

vhp

ವಲ್ಸಾಡ್, ಡಿ.21: ದಕ್ಷಿಣ ಗುಜರಾತ್‌ನ ವಲ್ಸಾಡ್‌ನಲ್ಲಿ ಶನಿವಾರ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸಂಘಟಿಸಿದ್ದ ‘ಘರ್ ವಾಪಸಿ’ ಕಾರ್ಯಕ್ರಮದಲ್ಲಿ ಬುಡಕಟ್ಟು ಕುಟುಂಬಗಳಿಗೆ ಸೇರಿದ ಸುಮಾರು ನೂರು ಮಂದಿ ಕ್ರೈಸ್ತರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಲಾಯಿತು.

ಈ ಬುಡಕಟ್ಟು ಜನರು ಹಿಂದೂಗಳಾಗಿದ್ದು, ಈ ಮೊದಲು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದರು. ‘ಘರ್ ವಾಪಸಿ’ ಕಾರ್ಯಕ್ರಮದ ಮೂಲಕ ಅವರನ್ನು ಹಿಂದೂ ಧರ್ಮಕ್ಕೆ ಮರಳಿ ಕರೆತರಲಾಗಿದೆ ಎಂದು ವಿಎಚ್‌ಪಿ ಹೇಳಿಕೊಂಡಿದೆ. ಈ ಕಾರ್ಯಕ್ರಮವನ್ನು ವಲ್ಸಾಡ್ ಜಿಲ್ಲೆಯ ಅರ್ನೈ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು.

ಮರುಮತಾಂತರ ಹೊಂದುವವರಿಗೆ ಆಮಿಷ ವೊಡ್ಡಲಾಗಿತ್ತು ಎಂಬ ವರದಿಗಳನ್ನು ವಿಎಚ್‌ಪಿ ನಿರಾಕರಿಸಿದೆ. ಅವರೆಲ್ಲ ಸ್ವಯಂಪ್ರೇರಿತರಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಯಾವುದೇ ಬಗೆಯ ಒತ್ತಡ ಇರಲಿಲ್ಲ ಎಂದು ಅದು ತಿಳಿಸಿದೆ.

ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡವರಿಗೆ ಆಹಾರ ಇಲ್ಲವೇ ಶಿಕ್ಷಣದ ಆಮಿಷವೊಡ್ಡಿಲ್ಲ. ಎಲ್ಲ ಕ್ರೈಸ್ತರು ಹಿಂದೂ ಧರ್ಮಕ್ಕೆ ಮತಾಂತರ ಹೊಂದುವ ತನಕ ನಾವು ಈ ಪ್ರಕ್ರಿಯೆಯನ್ನು ಮುಂದುವರಿಸುತ್ತೇವೆ ಎಂದು ವಲ್ಸಾಡ್‌ನ ವಿಎಚ್‌ಪಿ ಘಟಕದ ಅಧ್ಯಕ್ಷ ಅಜಿತ್ ಸೋಲಂಕಿ ಘೋಷಿಸಿದ್ದಾರೆ.

ಇದು ಸ್ವಯಂಪ್ರೇರಣೆಯ ಮತಾಂತರವಾಗಿದ್ದು, ಇದರಲ್ಲಿ ಸರಕಾರದ ಪಾತ್ರವೇನೂ ಇಲ್ಲ ಎಂದು ಹೇಳಿಕೊಂಡಿರುವ ರಾಜ್ಯ ಸರಕಾರವು, ಕಾರ್ಯಕ್ರಮದಿಂದ ದೂರ ಉಳಿದುಕೊಂಡಿದೆ. ಬಲವಂತದಿಂದ ಮತಾಂತರ ಮಾಡಲಾಗುತ್ತಿದೆ ಎಂಬ ದೂರು, ಇಲ್ಲವೇ ಮಾಹಿತಿ ನಮಗೆ ಲಭಿಸಿಲ್ಲ. ಯಾವುದೇ ಧರ್ಮವನ್ನು ಪಾಲಿಸಲು ಅವರೆಲ್ಲ ಮುಕ್ತ ಸ್ವಾತಂತ್ರವನ್ನು ಹೊಂದಿದ್ದಾರೆ’ ಎಂದು ಗುಜರಾತ್ ಸರಕಾರದ ವಕ್ತಾರ ನಿತಿನ್ ಪಟೇಲ್ ಹೇಳಿದ್ದಾರೆ.

ಬುಡಕಟ್ಟು ಜನರನ್ನು ಹಿಂದೂಧರ್ಮದೊಳಗೆ ಕರೆದುಕೊಳ್ಳುವ ಮೊದಲು ಶುದ್ಧೀಕರಣಕ್ಕಾಗಿ ಮಹಾಯಜ್ಞವೊಂದನ್ನು ಏರ್ಪಡಿಸಲಾಗಿತ್ತು. ಅಲ್ಲದೆ ಮತಾಂತರಗೊಂಡ ಪ್ರತಿಯೊಬ್ಬರಿಗೂ ಭಗವದ್ಗೀತೆಯ ಪ್ರತಿಯೊಂದನ್ನು ನೀಡಲಾಯಿತು. ಸುಮಾರು 3,000 ಜನರು ಸಮಾರಂಭದಲ್ಲಿ ಹಾಜರಿದ್ದರು ಎಂದು ವಿಎಚ್‌ಪಿ ಹೇಳಿಕೊಂಡಿದೆ.

Write A Comment