ರಾಷ್ಟ್ರೀಯ

ಕಲ್ಲಿದ್ದಲು ಹಗರಣ: ಮನಮೋಹನ್ ಸಿಂಗ್ ಹೇಳಿಕೆ ದಾಖಲಿಸಲು ಸಿಬಿಐಗೆ ಸುಪ್ರೀಂ ನಿರ್ದೇಶನ

Pinterest LinkedIn Tumblr

mana mohan singh

ಹೊಸದಿಲ್ಲಿ: ಕಲ್ಲಿದ್ದಲು ಹಗರಣ ಸಂಬಂಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆ ದಾಖಲಿಸುವಂತೆ ವಿಶೇಷ ನ್ಯಾಯಾಲಯ ಸಿಬಿಐಗೆ ಮಂಗಳವಾರ ನಿರ್ದೇಶಿಸಿದೆ.

ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ ಸೇರಿದಂತೆ ಹಗರಣದಲ್ಲಿ ಭಾಗಿ ಎನ್ನಲಾದ ಇತರರ ಹೇಳಿಕೆಯನ್ನು ದಾಖಲಿಸಲು ಸಿಬಿಐಗೆ ಸೂಚಿಸಲಾಗಿದೆ.

ಈ ಸಂಬಂಧ ತನಿಖಾ ಸಂಸ್ಥೆ ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ಒಪ್ಪಲು ನಿರಾಕರಿಸಿದ ಸಿಬಿಐನ ವಿಶೇಷ ನ್ಯಾಯಮೂರ್ತಿ ಭರತ್ ಪ್ರಸಾದ್, ” ಈ ಸಂಬಂಧ ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆ. ಇತರ ಅಧಿಕಾರಿಗಳ ಜತೆಯಲ್ಲಿ ಅಂದಿನ ಕಲ್ಲಿದ್ದಲು ಸಚಿವರ (ಮನಮೋಹನ್ ಸಿಂಗ್) ಹೇಳಿಕೆ ದಾಖಲಿಸಲು ಸೂಚಿಸಲಾಗಿದೆ,” ಎಂದಿದ್ದಾರೆ.

ಮುಂದಿನ ವರ್ಷ ಜ.27ರೊಳಗೆ ಪ್ರಕರಣದ ಮುಂದಿನ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸುವಂತೆಯೂ ನ್ಯಾಯಾಲಯ ಸಿಬಿಐಗೆ ನಿರ್ದೇಶಿಸಿದೆ.

ಈ ಮೊದಲು, ಪ್ರಕರಣ ಸಂಬಂಧ ಸಿಬಿಐ ಸಲ್ಲಿಸಿದ್ದ ಮುಕ್ತಾಯ ವರದಿ ಕುರಿತ ತನ್ನ ಆದೇಶವನ್ನು ನ್ಯಾಯಾಲಯ ಡಿ.12ಕ್ಕೆ ಕಾಯ್ದಿರಿಸಿತ್ತು. 2005ರಿಂದ 2009ರವರೆಗೆ ಕಲ್ಲಿದ್ದಲು ಖಾತೆ ನಿರ್ವಹಿಸಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ವಿಚಾರಣೆಗೆ ಒಳಪಡಿಸದ ಕಾರಣಕ್ಕೆ ನ.25ರಂದು ನ್ಯಾಯಾಲಯ ತನಿಖಾ ಸಂಸ್ಥೆಯನ್ನು ತರಾಟೆ ತೆಗೆದುಕೊಂಡಿತ್ತು.

2005ರಲ್ಲಿ ಒಡಿಶಾದಲ್ಲಿ ಹಿಂಡಲ್ಕೊಗೆ ಕಲ್ಲಿದ್ದಲು ಘಟಕಗಳನ್ನು ಹಂಚಿಕೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿರ್ಲಾ, ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಪಿ.ಸಿ. ಪ್ರಕಾಶ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಪ್ರಕರಣದ ಸಂಬಂಧ ಕೋರ್ಟ್ ಈ ಆದೇಶ ಹೊರಡಿಸಿದೆ.

ವಿಚಾರಣೆ ಏಕೆ ?
ಆರಂಭದಲ್ಲಿ ಮನಮೋಹನ್ ಸಿಂಗ್ ಅವರ ವಿಚಾರಣೆ ಅಗತ್ಯ ಇದೆ ಎಂದು ತಿಳಿಸಿದ್ದ ಸಿಬಿಐ ನಂತರ, ಅಗತ್ಯ ಇಲ್ಲ ಎಂದು ಹೇಳಿತ್ತು . ಬಿರ್ಲಾ ಅವರ ಹಿಂಡಲ್ಕೊ ಕಂಪನಿಗೆ 2005ರಲ್ಲಿ ತಲಬಿರಾದಲ್ಲಿ 2 ಮತ್ತು 3 ಕಲ್ಲಿದ್ದಲು ಘಟಕಗಳು ಹಂಚಿಕೆಯಾದ ಸಂದರ್ಭದಲ್ಲಿ ಸಿಂಗ್ ಕಲ್ಲಿದ್ದಲು ಖಾತೆ ಹೊಂದಿದ್ದರು.

ಹಿಂಡಲ್ಕೊಗೆ ಕಲ್ಲಿದ್ದಲು ಘಟಕ ಹಂಚಿಕೆ ಮಾಡಲು ಪ್ರಕಾಶ್ ಮೊದಲು ನಿರಾಕರಿಸಿದ್ದರು. ಆದರೆ ಯಾವುದೇ ಸೂಕ್ತ ಕಾರಣ ಅಥವಾ ಸನ್ನಿವೇಶ ಬದಲಾಗದೇ ತಿಂಗಳೊಳಗೆ ಅವರ ನಿರ್ಣಯ ಬದಲಿಸಿದ್ದರು. ಕಂಪನಿ ಪರವಾಗಿ ಇವರ ಕೆಲಸ ಮಾಡಿರುವುದು ಇದರಿಂದ ತಿಳಿಯುತ್ತದೆ ಎಂದು ಆರೋಪಿಸಿತ್ತು. ಪ್ರಕರಣದಲ್ಲಿ ಕೆಲ ಸರಕಾರಿ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧ ವಿಚಾರಣೆ ನಡೆಸಲು ಮೇಲ್ನೋಟಕ್ಕೆ ಪುರಾವೆಗಳು ದೊರೆತಿರುವುದಾಗಿ ನ.10ರಂದು ಸಿಬಿಐ ತಿಳಿಸಿತ್ತು.

Write A Comment