ರಾಷ್ಟ್ರೀಯ

ಮರು ಮತಾಂತರ ಗದ್ದಲಕ್ಕೆ ಮತ್ತೆ ರಾಜ್ಯಸಭೆ ಕಲಾಪ ಬಲಿ

Pinterest LinkedIn Tumblr

mulay

ಹೊಸದಿಲ್ಲಿ: ಮರು ಮತಾಂತರದ ಗಲಾಟೆ ರಾಜ್ಯಸಭೆಯಲ್ಲಿ ಮಂಗಳವಾರವೂ ಮುಂದುವರಿಯಿತು. ಆರೆಸ್ಸೆಸ್‌ನ ಅಂಗ ಸಂಸ್ಥೆಗಳು ನಡೆಸುತ್ತಿರುವ ಮರು ಮತಾಂತರದ ವಿರುದ್ಧ ಪ್ರಮುಖ ಒಂಬತ್ತು ಪ್ರತಿಪಕ್ಷಗಳೂ ಒಟ್ಟಾಗಿ ಸರಕಾರದ ವಿರುದ್ಧ ಮುಗಿಬಿದ್ದು ಗದ್ದಲ ನಡೆಸಿದ್ದರಿಂದ ಯಾವುದೇ ಚರ್ಚೆಗಳು ನಡೆಯದೇ ಇಡೀ ಕಲಾಪ ವ್ಯರ್ಥವಾಯಿತು.

ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಪ್ರತಿಪಕ್ಷಗಳ ಸದಸ್ಯರು, ಮುಸ್ಲಿಮರನ್ನು ಮರಳಿ ಹಿಂದೂ ಧರ್ಮಕ್ಕೆ ಮತಾಂತರಗೊಳಿಸುತ್ತಿರುವ ‘ಘರ್ ವಾಪಸಿ’ ಕಾರ‌್ಯಕ್ರಮದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸದನಕ್ಕೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿ ಗದ್ದಲ ನಡೆಸಿದರು. ಇದೇ ವೇಳೆ ಕ್ರಿಸ್ಮಸ್ ದಿನದಂದು ‘ಜವಾಹರ್ ನವೋದಯ ವಿದ್ಯಾಲಯ’ಗಳಲ್ಲಿ ದಕ್ಷ ಆಡಳಿತ ದಿನವನ್ನು ಆಚರಿಸಲು ಮಾನವ ಸಂಪನ್ಮೂಲ ಸಚಿವಾಲಯ ಸುತ್ತೋಲೆ ಹೊರಡಿಸಿರುವುದರ ಬಗ್ಗೆಯೂ ಪ್ರಧಾನಿ ವಿವರಣೆ ನೀಡಬೇಕೆಂದು ಪಟ್ಟು ಹಿಡಿದು ಕೋಲಾಹಲ ಎಬ್ಬಿಸಿದರು. ಸಂಯಮದಿಂದ ವರ್ತಿಸುವಂತೆ ಸಭಾಪತಿಗಳು ಪದೇಪದೆ ಮಾಡಿಕೊಂಡ ಮನವಿಗೆ ಸದಸ್ಯರು ಕಿವಿಗೊಡದಿದ್ದರಿಂದ ಕಲಾಪ ದಿನದ ಮಟ್ಟಿಗೆ ಮುಂದೂಡಿಕೆಯಾಯಿತು.

ಪ್ರತಿಪಕ್ಷಗಳ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ, ”ಸರಕಾರ ಮತಾಂತರ ಕುರಿತು ಈ ಬಗ್ಗೆ ಚರ್ಚೆಗೆ ಸಿದ್ಧವಿದೆ. ಆದರೆ ನಿಮಗೆ (ಪ್ರತಿಪಕ್ಷಗಳ ಸದಸ್ಯರು) ಕಲಾಪ ಅಡ್ಡಿಪಡಿಸುವುದೇ ಕಾಯಕವಾಗಿದೆ,” ಎಂದು ತಿರುಗೇಟು ನೀಡಿದರು. ಇನ್ನು ಕ್ರಿಸ್ಮಸ್ ದಿನದಂದು ದಕ್ಷ ಆಡಳಿತ ದಿನ ನಡೆಸುವ ವಿಚಾರದ ಕುರಿತು ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ”ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಅಂದು ಎಂದಿನಂತೆ ಶಾಲೆಗೆ ರಜೆ ಇರಲಿದೆ. ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದ್ದರೂ ಅದೂ ಸಹ ಕಡ್ಡಾಯವಲ್ಲ,” ಎಂದು ಹೇಳಿದರು. ಇದಕ್ಕೆ ಸುಮ್ಮನಾಗದೇ ಪ್ರತಿಪಕ್ಷಗಳ ಸದಸ್ಯರು ಪ್ರಧಾನಿಯಿಂದ ಸ್ಪಷ್ಟನೆ ಬಯಸಿ ಗದ್ದಲ ಮುಂದುವರಿದಿದ್ದರಿಂದ ಸಭಾಪತಿಗಳು ದಿನದ ಮಟ್ಟಿಗೆ ಕಲಾಪವನ್ನು ಮುಂದೂಡಿದರು.

ಐಸಿಸ್ ಪ್ರಭಾವ ಅತ್ಯಲ್ಪ: ಇತ್ತ ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಪಾಲ್ಗೊಂಡು ಗೃಹ ಸಚಿವ ರಾಜನಾಥ್ ಸಿಂಗ್ ಅವರು, ”ಐಸಿಸ್ ಚಟುವಟಿಕೆಗಳನ್ನು ಕೆಲ ಭಾರತೀಯ ಯುವಕರು ಅನುಸರಿಸುತ್ತಿರುವುದು ತನಿಖೆಯಿಂದ ತಿಳಿದುಬಂದಿರುವುದು ವಾಸ್ತವ. ಆದರೆ ಆ ಪ್ರಮಾಣ ಅತ್ಯಲ್ಪ. ಹಾಗಂತ ಸರಕಾರ ಕೈಕಟ್ಟಿ ಕುಳಿತಿಲ್ಲ. ಇತ್ತೀಚಿನ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ತನಿಖಾ ಸಂಸ್ಥೆಗಳು ಸ್ಥೂಲವಾಗಿ ತನಿಖೆ ನಡೆಸುತ್ತಿವೆ. ಗುಪ್ತಚರ ಹಾಗೂ ಭದ್ರತಾ ದಳಗಳನ್ನು ಚುರುಕುಗೊಳಿಸಲಾಗಿದೆ. ಎನ್‌ಎಸ್‌ಜಿ ಕಮಾಂಡೊ ಪಡೆ, ವಿಮಾನ ನಿಲ್ದಾಣವೂ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ತಪಾಸಣೆ ನಿಯಮಗಳನ್ನು ಬಿಗಿಗೊಳಿಸಲಾಗಿದೆ ಎಂದರು. ಆತಂಕ ಪಡುವ ಅಗತ್ಯವಿಲ್ಲ,” ಎಂದು ಹೇಳಿದರು.

ಮೆಚ್ಚುಗೆ: ಬ್ರಿಟನ್ ಮತ್ತು ಫ್ರಾನ್ಸ್ ಸೇರಿದಂತೆ ಕೆಲ ಮುಂದುವರಿದ ದೇಶದ ಅಲ್ಪಸಂಖ್ಯಾತ ಕುಟುಂಬಗಳು ಐಸಿಸ್‌ಗೆ ಬೆಂಬಲ ವ್ಯಕ್ತಪಡಿಸುತ್ತಿವೆ. ಆದರೆ ಈ ಸಂಘಟನೆಗೆ ಭಾರತೀಯ ಅಲ್ಪಸಂಖ್ಯಾತ ಕುಟುಂಬಗಳ ಬೆಂಬಲ ಬೆರಳಣಿಕೆಯದ್ದಾಗಿದ್ದು, ತಮ್ಮ ಮಕ್ಕಳನ್ನು ಉಗ್ರ ಚಿಂತನೆಯ ಪ್ರಲೋಭನೆಗೆ ಒಳಗಾಗದಂತೆ ನಿಯಂತ್ರಿಸುವಲ್ಲಿ ದೇಶದ ಲಕ್ಷಾಂತರ ಅಲ್ಪಸಂಖ್ಯಾತ ಕುಟುಂಬಗಳು ತೋರುತ್ತಿರುವ ಕಳಕಳಿ ಪ್ರಶಂಸಾರ್ಹ ಎಂದು ಗೃಹ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ಶಂಕಿತ ಉಗ್ರ ಚಟುವಟಿಕೆಗಳ ಆರೋಪದ ಮೇರೆಗೆ ಮುಗ್ಧ ಮುಸ್ಲಿಂ ಯುವಕರನ್ನು ವಶಪಡಿಸಿಕೊಂಡು ಕಿರಿಕಿರಿ ನೀಡದಂತೆ ನೋಡಿಕೊಳ್ಳಲಾಗುವುದು ಎಂದೂ ಸದನಕ್ಕೆ ಭರವಸೆ ನೀಡಿದರು.

ಕೇರಳದ ಯುವಕರೂ ಐಸಿಸ್ ಸೇರಿದ ಪ್ರಕರಣಗಳಿವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಖಾತೆಯ ಸಹಾಯಕ ಸಚಿವ ಕಿರಣ್ ರಿಜಿಜು ಅವರು, ”ಮಹಾರಾಷ್ಟ್ರದ ಕಲ್ಯಾಣ್‌ನಿಂದ ನಾಲ್ವರು ಯುವಕರು ಐಸಿಸ್ ಸೇರಿದ್ದು ಬಿಟ್ಟರೆ ಬೇರೆ ಪ್ರಕರಣಗಳು ವರದಿಯಾಗಿಲ್ಲ. ಆದರೆ ದೇಶದಲ್ಲಿ ಐಸಿಸ್ ಪ್ರಭಾವ ಗಂಭೀರ ಹಾಗೂ ಸೂಕ್ಷ್ಮ ವಿಚಾರವಾಗಿದ್ದು, ಅದರ ತನಿಖೆಯ ವಿವರಗಳನ್ನು ಬಹಿರಂಗಪಡಿಸಲಾಗದು,” ಎಂದರು.

ಮುಂದುವರಿಯಲಿದೆ ಮರು ಮತಾಂತರ: ಆದಿತ್ಯನಾಥ್
ಹೊಸದಿಲ್ಲಿ: ಮತಾಂತರರ ವಿಷಯ ವಿವಾದವಾಗಿದ್ದರೂ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಈ ವಿಷಯವನ್ನು ಮಂಗಳವಾರ ಸಮರ್ಥಿಸಿಕೊಂಡಿದ್ದಾರೆ.

ಸಂಸತ್ ಹೊರಗೆ ಸುದ್ದಿಗಾರರ ಜತೆ ಮಾತನಾಡಿದ ಗೋರಖ್‌ಪುರ ಸಂಸದ ಯೋಗಿ ಆದಿತ್ಯನಾಥ್, , ”ಈ ಘರ್ ವಾಪಸಿ ಕಾರ್ಯಕ್ರಮ ಎಲ್ಲ ಕಾಲದಲ್ಲೂ ನಡೆಯುತ್ತಲೇ ಇದೆ. ಇದೊಂದು ನಿರಂತರ ಪ್ರಕ್ರಿಯೆ. ಅದು ಮುಂದುವರಿಯಲಿದೆ,” ಎಂದರು.

ವಿವಾದಾತ್ಮಕ ಹೇಳಿಕೆ ಮೂಲಕ ಲಕ್ಷ್ಮಣ ರೇಖೆ ದಾಟದಂತೆ ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಖಡಕ್ ಸಂದೇಶ ನೀಡಿದ ನಂತರವೂ ಯೋಗಿ ಆದಿತ್ಯನಾಥ್ ಹೇಳಿಕೆ ಹೊರಬಿದ್ದಿದೆ.

”ಬಾಬರಿ ಮಸೀದಿ ಧ್ವಂಸ ಎಂಬುದು ಹಿಂದೂಗಳ ಏಕತೆಯನ್ನು ತೋರಿಸಿದೆ. ಮರುಮತಾಂತರ ಕಾರ್ಯಕ್ರಮ ನಿಲ್ಲಬಾರದು,” ಬಿಹಾರದಲ್ಲಿ ಇತ್ತೀಚೆಗಷ್ಟೇ ಆದಿತ್ಯನಾಥ್ ಹೇಳಿದ್ದರು.

ಉತ್ತರಪ್ರದೇಶದಲ್ಲಿ ಮತಾಂತರ ನಿಗ್ರಹ ಕಾಯಿದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದ ಆದಿತ್ಯನಾಥ್, ”ಮರು ಮತಾಂತರ ಕಾರ್ಯಕ್ರಮವು ತಪ್ಪೆಂದು ಉತ್ತರ ಪ್ರದೇಶ ಸರಕಾರ ಭಾವಿಸಿದರೆ, ಅದನ್ನು ತಡೆಯುವಂಥ ಕಾಯಿದೆಯನ್ನು ಸರಕಾರ ಜಾರಿ ಮಾಡಲಿ,” ಎಂದರು.

ಆಗ್ರಾ ಮತಾಂತರದ ಖಂಡಿಸಿ ಸಂಸತ್‌ನಲ್ಲಿ ಧ್ವನಿ ಎತ್ತಿದ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅವರು, ”ಮತಾಂತರ ವಿರೋಧಿಸುವುದಾದರೆ, ಪ್ರತಿಪಕ್ಷಗಳು ಮತಾಂತರ ನಿಗ್ರಹ ಕಾಯಿದೆಗೆ ಒತ್ತಾಯಿಸಿಲಿ. ಇಂಥ ಕಾಯಿದೆ ಜಾರಿಗೆ ಸರಕಾರಕ್ಕೆ ಸಹಕಾರ ನೀಡಲಿ. ಆದರೆ ಈ ಕಾಯಿದೆ ವಿಷಯದಲ್ಲಿ ಪ್ರತಿಪಕ್ಷಗಳು ದೂರ ಓಡುವುದೇಕೆ?” ಎಂದು ಪ್ರಶ್ನಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಬಲಪಂಥೀಯ ಗುಂಪಿನ ಸದಸ್ಯರ ಬಂಧನ ಕುರಿತು ಪ್ರತಿಕ್ರಿಯಿಸಿದ ಅವರು, ”ಸರಕಾರದ ಕ್ರಮ ಅಕ್ರಮ. ಇದು ಅಧಿಕಾರದ ದುರ್ಬಳಕೆ. ಅಖಿಲೇಶ್ ಸರಜಕಾರವು ಹಠಮಾರಿ ಧೋರಣೆ ಹೊಂದಿದೆ,” ಎಂದರು.

ಆಗ್ರಾ ಮತಾಂತರ: ಪ್ರಮುಖ ಆರೋಪಿ ಶರಣು
ಆಗ್ರಾ: ಸಂಸತ್‌ನಲ್ಲಿ ಕೋಲಾಹಲಕ್ಕೆ ಕಾರಣವಾದ ಆಗ್ರಾ ಮತಾಂತರ ಕಾರ್ಯಕ್ರಮದ ಪ್ರಮುಖ ಆರೋಪಿ ನಂದ ಕಿಶೋರ್ ಬಾಲ್ಮಿಕಿ ಮಂಗಳವಾರ ಪೊಲೀಸರಿಗೆ ಶರಣಾಗಿದ್ದಾನೆ.

ಹರಿ ಪ್ರಭಾತ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಬೆಳಗ್ಗೆ ನಂದ ಕಿಶೋರ್ ಶರಣಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಫ್‌ಐಆರ್‌ನಲ್ಲಿದ್ದ ಆರೋಪಿಗಳಲ್ಲಿ ಕಿಶೋರ್ ಪ್ರಮುಖನಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಪ್ರಯತ್ನಿಸಿದ್ದರು. ಆತನ ಬಗ್ಗೆ ಸುಳಿವು ಕೊಡುವವರಿಗೆ 12,000 ರೂ. ನಗದು ಬಹುಮಾನವನ್ನೂ ಪೊಲೀಸರು ಘೋಷಿಸಿದ್ದರು. ಡಿ.14ರಂದು ಬಾಲ್ಮಿಕಿ ಪುತ್ರ ರಾಹುಲ್ ಮತ್ತು ಸಂಬಂಧಿಯೊಬ್ಬರನ್ನು ಪೊಲೀಸರು ಬಂಧಿಸಿದ್ದರು.

ಉತ್ತರ ಪ್ರದೇಶದ ಆಗ್ರಾದ ಕೊಳಗೇರಿಯಲ್ಲಿ ನೆಲೆಸಿದ್ದ ನೂರಕ್ಕೂ ಹೆಚ್ಚು ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಲಾಗಿದೆ ಎನ್ನುವ ಪ್ರಕರಣ, ಸಂಸತ್‌ನಲ್ಲಿ ಪ್ರತಿಧ್ವನಿಸಿತ್ತು.

Write A Comment