ಮನೋರಂಜನೆ

ಈ–ಟಿವಿಯ ‘ಯಶೋದೆ’ ಧಾರಾವಾಹಿ ಮದುವೆಗೆ 2 ಲಕ್ಷ ಆಮಂತ್ರಣ ಪತ್ರ!

Pinterest LinkedIn Tumblr

psmec17yashode

ಪ್ರಚಾರದ ಗುಂಗು ಸಿನಿಮಾಗಳಿಗಷ್ಟೇ ಎನ್ನುವ ಕಾಲ ಇದಲ್ಲ. ಧಾರಾವಾಹಿಗಳೂ ಅದರ ಹಂಗಿಗೆ ಬಿದ್ದು ವರ್ಷಗಳೇ ಆಗಿವೆ. ಮೊದಲು ಹೋರ್ಡಿಂಗ್‌ಗಳು, ಜಾಹೀರಾತುಗಳ ಪ್ರಚಾರದ ದಾರಿ ಹುಡುಕಿಕೊಂಡ ಧಾರಾವಾಹಿಗಳು ಆಮೇಲೆ ಊರೂರಿನಲ್ಲಿ ‘ಸೀರಿಯಲ್‌ ಸಂತೆ’ ನಡೆಸುವ ತಂತ್ರಕ್ಕೆ ಜೋತುಬಿದ್ದವು.  ಬಹುತೇಕ ಚಾನೆಲ್‌ಗಳಲ್ಲಿ ಪ್ರಚಾರದ ಹೊಸದಾರಿಗಳನ್ನು ಹುಡುಕುವ ವೃತ್ತಿಪರರು ಇರುತ್ತಾರೆ.

ಈ–ಟಿವಿಯ ‘ಯಶೋದೆ’ ಧಾರಾವಾಹಿಯ ಪ್ರಚಾರದ ವೈಖರಿ ಹಳೆಯ ದಾರಿಗಳಿಗಿಂತ ಭಿನ್ನ. ಮೊನ್ನೆ ನಗರದ ಶೇಷಾದ್ರಿಪುರಂ ಕಾಲೇಜಿನ ಕಾರಿಡಾರಿನಲ್ಲಿ ‘ಯಶೋದೆ’ ಧಾರಾವಾಹಿಯ ನಾಯಕ–ನಾಯಕಿಯ ಮದುವೆ ಆಮಂತ್ರಣ ಪತ್ರ ಹಿಡಿದು ಕೆಲವರು ಹಿಂಡುಹಿಂಡಾಗಿ ಚರ್ಚಿಸುತ್ತಿದ್ದರು. ಅಂಚೆ ಅಣ್ಣ ಮದುವೆಯ ಆಹ್ವಾನ ಪತ್ರವಿದ್ದ ಸಣ್ಣ ಚೀಲವೊಂದನ್ನು ತಂದು ಕಾಲೇಜಿನ ಪೋಸ್ಟ್‌ ಬಾಕ್ಸ್‌ಗೆ ತಲುಪಿಸಿ ಹೋಗಿದ್ದರ ಪರಿಣಾಮ ಇದು. ಹೀಗೆ ನಗರದ ಅನೇಕ ಕಡೆಗಳಿಗೆ ಧಾರಾವಾಹಿ ಮದುವೆಯ ಆಮಂತ್ರಣ ಪತ್ರಿಕೆ ವಿಲೇವಾರಿಯಾಗಿದೆ.

‘ನಮ್ಮ ವಾಹಿನಿಯ ರಿಸರ್ಚ್‌ ಟೀಮ್‌ನ ಹುಡುಗ ಕೊಟ್ಟ ಐಡಿಯಾ ಇದು. ಭಾರತೀಯ ಅಂಚೆ ಇಲಾಖೆಯ ಪೋಸ್ಟ್‌ ಬಾಕ್ಸ್‌ಗಳಿಗೆಲ್ಲಾ ಧಾರಾವಾಹಿ ನಾಯಕ–ನಾಯಕಿಯ ಮದುವೆಯ ಪ್ರಸಂಗದ ಆಮಂತ್ರಣ ಪತ್ರಿಕೆಯನ್ನು ವಿಲೇವಾರಿ ಮಾಡಿದ್ದೇವೆ. ಜನರಲ್ಲಿ ಧಾರಾವಾಹಿಯ ಬಗ್ಗೆ ಕುತೂಹಲ ಜನರೇಟ್‌ ಮಾಡುವ ತಂತ್ರವಿದು. ಕಾಲೇಜುಗಳು ಕೂಡ ನಮ್ಮ ಟಾರ್ಗೆಟ್‌ ಆಗಿದ್ದವು.

ಯುವಜನತೆಯನ್ನು ಧಾರಾವಾಹಿಯತ್ತ ಆಕರ್ಷಿಸುವ ಈ ತಂತ್ರ ಕ್ಲಿಕ್‌ ಆಗಬಹುದೇ ಎಂಬ ಪ್ರಯತ್ನವಿದು’ ಎಂದು ಈ–ಟಿವಿ ಕಾರ್ಯಕ್ರಮ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್‌ ಪ್ರತಿಕ್ರಿಯಿಸಿದರು. ಧಾರಾವಾಹಿ ನಿರ್ಮಾಪಕ ನರಹರಿ ರಾವ್‌ ಅವರಿಗೆ ಈ ಪ್ರಚಾರ ತಂತ್ರದ ಎಳ್ಳಷ್ಟೂ ಅರಿವಿಲ್ಲ. ವಾಹಿನಿಯವರೇ ಇಂಥ ತಂತ್ರಗಳನ್ನು ಆಗಾಗ ಅನುಸರಿಸುತ್ತಾ ಇರುತ್ತಾರೆ. ಪ್ರಚಾರ ಈ ಕಾಲಮಾನದ ಜರೂರು ಎನ್ನುತ್ತಾರೆ ಅವರು.

ಮದುವೆ ಇತ್ಯಾದಿ ಸಮಾರಂಭಗಳನ್ನು ಕಂತುಗಟ್ಟಲೆ ತೋರಿಸುವ ಧಾರಾವಾಹಿಗಳ ನಿರ್ದೇಶಕರು ಅದನ್ನೊಂದು ಸಂಭ್ರಮದ ಆಚರಣೆಯಾಗಿ ಚಿತ್ರೀಕರಿಸತೊಡಗಿದ್ದಾರೆ. ‘ಜನ ಚೇಂಜ್‌ ಕೇಳ್ತಾರೆ’ ಎನ್ನುವ ಕ್ಲೀಷೆಯೇ ಆಗದ ನುಡಿಗಟ್ಟನ್ನು ಇದಕ್ಕೆ ಕಾರಣವಾಗಿ ಕೊಡುತ್ತಾರೆ.

‘ಯಶೋದೆ’ ಧಾರಾವಾಹಿಯ ಮದುವೆ ಪ್ರಸಂಗ ಈಗಾಗಲೇ ಕಂತುಗಟ್ಟಲೆ ಪ್ರಸಾರವಾಗಿದ್ದು, ಇನ್ನೂ ಮುಂದುವರಿದಿದೆ.

ಇಷ್ಟಕ್ಕೂ ‘ಯಶೋದೆ’ ಧಾರಾವಾಹಿಯ ಯಶೋದೆ–ಆದಿ (ಈ ಪಾತ್ರಧಾರಿಗಳ ನಿಜವಾದ ಹೆಸರು ನೀತಾ ಹಾಗೂ ಕಾರ್ತಿಕ್‌) ಮದುವೆಯ ಸುಮಾರು ಎರಡು ಲಕ್ಷ ಆಮಂತ್ರಣ ಪತ್ರಿಕೆಗಳನ್ನು ಅಂಚೆ ಇಲಾಖೆ ನಗರದ ಮೂಲೆಮೂಲೆಗೆ ತಲುಪಿಸಿದೆ. ಧಾರಾವಾಹಿ ಮದುವೆಯ ಈ ಆಮಂತ್ರಣ ಪ್ರಸಂಗವನ್ನು ಹೊಸ  ಕಾಲದ ಆಚರಣೆಯ ಅದ್ದೂರಿತನದ ರೂಪಕ ಎನ್ನಬಹುದೇನೋ?

Write A Comment