ರಾಷ್ಟ್ರೀಯ

ಆರ್ಥಿಕ ಮುಗ್ಗಟ್ಟಿನಲ್ಲಿ ಸ್ಪೈಸ್ ಜೆಟ್; ಶೇರು ಮಾರುಕಟ್ಟೆಯಲ್ಲಿ ಶೇ. 17ರಷ್ಟು ಕುಸಿತ

Pinterest LinkedIn Tumblr

SPICEJET__12

ಚೆನ್ನೈ:ಈಗಾಗಲೇ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಸ್ಪೈಸ್ ಜೆಟ್ ಏರ್‌ಲೈನ್ಸ್ ಮಂಗಳವಾರ ಶೇರು ಮಾರುಕಟ್ಟೆಯಲ್ಲಿ ಶೇ. 17ರಷ್ಟು ಕುಸಿತ ಕಂಡುಕೊಂಡಿದೆ.

ಕಲಾನಿಧಿ ಮಾರನ್ ಅವರ ಸನ್‌ಗ್ರೂಪ್‌ಗೆ ಸೇರಿದ ಸ್ಪೈಸ್ ಜೆಟ್ ಈಗಾಗಲೇ ರು.200 ಕೋಟಿ ಸಾಲದಲ್ಲಿದೆ. ಮಂಗಳವಾರ ಶೇರು ಮಾರುಕಟ್ಟೆಯಲ್ಲಿ ಸ್ಪೈಸ್ ಜೆಟ್ ಶೇರು ಶೇ. 16.95 ರಷ್ಟು ಕುಸಿತ ಕಂಡುಕೊಳ್ಳುವ ಮೂಲಕ ಮತ್ತಷ್ಟು ಸಂಕಷ್ಟಕ್ಕೀಡಾಗಿದೆ.

ಪ್ರಸ್ತುತ ವಿಮಾನಯಾನ ಸಂಸ್ಥೆ ಇಷ್ಟೊಂದು ಆರ್ಥಿಕ ಮುಗ್ಗಟ್ಟಲ್ಲಿ ಸಿಲುಕಿರುವ ಕಾರಣ ವಿಮಾನಯಾನ ನಿಯಂತ್ರಣ ಪ್ರಾಧಿಕಾರ ರು. 200 ಕೋಟಿ ಸಾಲವನ್ನು ಪಾವತಿ ಮಾಡಲು ಒತ್ತಡ ಹೇರುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ದಿನ ಸ್ಪೈಸ್ ಜೆಟ್ ಚೀಫ್ ಆಪರೇಟಿಂಗ್ ಆಫೀಸರ್ ಸಂಜೀವ್ ಕಪೂರ್, ವಿಮಾನಯಾನ ಸಚಿವ ಅಶೋಕ್ ಗಜಪತಿ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಮುಂದಿನ 15 ದಿನಗಳ ಕಾಲ ಸ್ಪೈಸ್ ಜೆಟ್ ಸಂಚಾರ ಮುಂದುವರಿಸುವಂತೆ ಸರ್ಕಾರ ಹೇಳಿತ್ತು ಎಂದು ವಿಮಾನಯಾನ ಸಂಸ್ಥೆಯ ಮೂಲಗಳು ಹೇಳಿದ್ದವು.

ಆದಾಗ್ಯೂ, ಸಾಲ ಮರುಪಾವತಿಸಲು ಸರ್ಕಾರ ಅವಧಿ ವಿಸ್ತರಿಸಿದ್ದರೂ ಮಂಗಳವಾರ ಮಧ್ಯಾಹ್ನದ ವರೆಗೆ ಸ್ಪೈಸ್ ಜೆಟ್ ಕೆಲವೊಂದು ವಿಮಾನಯಾನಗಳನ್ನು ರದ್ದುಗೊಳಿಸಿತ್ತು. ಹಾಗೆಯೇ ಇನ್ನು ಕೆಲವು ವಿಮಾನಗಳು ತಡವಾಗಿ ಹಾರಾಟ ಮಾಡಿದ್ದವು.

Write A Comment