ರಾಷ್ಟ್ರೀಯ

ಸೊಮಾಲಿಯ ಕಡಲ್ಗಳ್ಳರಿಂದ 400ಕ್ಕೂ ಅಧಿಕ ಭಾರತೀಯರ ಅಪಹರಣ: 7 ಮಂದಿಯ ಪರಿಸ್ಥಿತಿ ಏನಾಗಿದೆ ಎಂದು ತಿಳಿದಿಲ್ಲ

Pinterest LinkedIn Tumblr

pirateಹೊಸದಿಲ್ಲಿ, ಡಿ. 7: ಸೊಮಾಲಿಯ ಮತ್ತು ನೈಜೀರಿಯ ಸಮುದ್ರ ತೀರಗಳಲ್ಲಿ ದಾಂಧಲೆ ನಡೆಸುತ್ತಿರುವ ಕಡಲ್ಗಳ್ಳರು ನಾಲ್ಕು ವರ್ಷಗಳ ಹಿಂದೆ ಅಪಹರಿಸಿರುವ ಏಳು ಭಾರತೀಯರ ಪರಿಸ್ಥಿತಿ ಏನಾಗಿದೆ ಎಂಬುದು ಗೊತ್ತಿಲ್ಲ ಎಂದು ಸರಕಾರ ತಿಳಿಸಿದೆ. ಕಳೆದ ಆರು ವರ್ಷಗಳ ಅವಧಿಯಲ್ಲಿ 400ಕ್ಕೂ ಹೆಚ್ಚು ಭಾರತೀಯರ ಅಪಹರಣವಾಗಿದೆ ಎಂದಿದೆ.

2008 ಮತ್ತು ಈ ವರ್ಷದ ಎಪ್ರಿಲ್ ನಡುವೆ ವರದಿಯಾದ 42 ಘಟನೆಗಳಲ್ಲಿ ಒಟ್ಟು 416 ಭಾರತೀಯ ಸಿಬ್ಬಂದಿ ಅಪಹರಣಕ್ಕೀಡಾಗಿದ್ದಾರೆ. ಈ ಪ್ರಕರಣಗಳ ಪೈಕಿ ಗರಿಷ್ಠ 10 ಪ್ರಕರಣಗಳು 2010 ಒಂದೇ ವರ್ಷದಲ್ಲಿ ನಡೆದಿವೆ (ಈ ಅವಧಿಯಲ್ಲಿ 100 ಸಿಬ್ಬಂದಿ ಅಪಹರಣಕ್ಕೀಡಾಗಿದ್ದಾರೆ). 2011ರಲ್ಲಿ 9 ಪ್ರಕರಣಗಳು (87 ಮಂದಿಯ ಅಪಹರಣ), 2008, 2009 ಮತ್ತು 2012ರಲ್ಲಿ ತಲಾ ಐದು ಪ್ರಕರಣಗಳು (ಕ್ರಮವಾಗಿ 63, 47 ಮತ್ತು 43 ಭಾರತೀಯ ಸಿಬ್ಬಂದಿ ಅಪಹರಣ) ವರದಿಯಾಗಿವೆ ಎಂದು ಆರ್‌ಟಿಐ ಪ್ರಶ್ನೆಯೊಂದಕ್ಕೆ ಸರಕಾರ ಉತ್ತರಿಸಿದೆ.

2013 ಮತ್ತು 2014ರಲ್ಲಿ ಜನವರಿಯಿಂದ ಎಪ್ರಿಲ್‌ವರೆಗೆ ತಲಾ ನಾಲ್ಕು ಘಟನೆಗಳು ನಡೆದಿದ್ದು ಕಡಲ್ಗಳ್ಳರು ಕ್ರಮವಾಗಿ 46 ಮತ್ತು 30 ಭಾರತೀಯರನ್ನು ಒತ್ತೆಸೆರೆಯಲ್ಲಿರಿಸಿಕೊಂಡಿದ್ದಾರೆ ಎಂದು ನೌಕಾಯಾನ ಮಹಾ ನಿರ್ದೇಶನಾಲಯ ಹೇಳಿದೆ.

ಈ ಎಲ್ಲ ಪ್ರಕರಣಗಳಲ್ಲಿ ಏಳು ಮಂದಿಯನ್ನು ಹೊರತುಪಡಿಸಿ ಬಹುತೇಕ ಎಲ್ಲ ಅಪಹೃತರನ್ನು ಕಡಲ್ಗಳ್ಳರು ಬಿಡುಗಡೆ ಮಾಡಿದ್ದಾರೆ.

2010 ಸೆಪ್ಟಂಬರ್ 29ರಂದು ‘ಆಸ್ಫಾಲ್ಟ್ ವೆಂಚರ್’ ಹಡಗಿನಲ್ಲಿದ್ದ ಒಟ್ಟು 15 ಮಂದಿಯನ್ನು ಕಡಲ್ಗಳ್ಳರು ಅಪಹರಿಸಿದ್ದಾರೆ. ಅವರ ಪೈಕಿ ಎಂಟು ಮಂದಿಯನ್ನು 198 ದಿನಗಳ ಬಂಧನದ ಬಳಿಕ ಬಿಡುಗಡೆ ಮಾಡಲಾಗಿದೆ. ‘‘ಏಳು ಸಿಬ್ಬಂದಿ ಇನ್ನೂ ಒತ್ತೆಯಾಳುಗಳಾಗಿ ಇದ್ದಾರೆ’’ ಎಂದು ಅದು ತಿಳಿಸಿದೆ.

ನೌಕಾಯಾನ ಮಹಾ ನಿರ್ದೇಶನಾಲಯ ನೌಕಾಯಾನ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. ಒತ್ತೆಸೆರೆಯಲ್ಲಿರುವ ವ್ಯಕ್ತಿಗಳ ಹೆಸರು ಮತ್ತು ವಿಳಾಸಗಳನ್ನು ನೀಡಲು ಅದು ನಿರಾಕರಿಸಿದೆ.

Write A Comment