ರಾಷ್ಟ್ರೀಯ

ಕೇರಳದಲ್ಲಿ ಹಕ್ಕಿ ಜ್ವರ: 2 ಲಕ್ಷ ಕೋಳಿಗಳ ವಧೆಗೆ ನಿರ್ಧಾರ

Pinterest LinkedIn Tumblr

bird-flu

ತಿರುವನಂತಪುರ: ಕೇರಳದ ಕೆಲವು ಜಿಲ್ಲೆಗಳಲ್ಲಿ ಹಕ್ಕಿ ಜ್ವರದ (ಎಚ್5) ರೋಗಾಣುಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸರಕಾರವು ಎರಡು ಲಕ್ಷ ಕೋಳಿಗಳನ್ನು ಕೊಲ್ಲಲು ಮುಂದಾಗಿದೆ.

ಕೊಟ್ಟಾಯಂ, ಅಲಪ್ಪುಳ, ಪಟ್ಟಣಂತಿಟ್ಟ ಜಿಲ್ಲೆಗಳಲ್ಲಿ ಅಸಹಜವಾಗಿ ಸತ್ತ ಬಾತುಕೋಳಿ ಹಾಗೂ ಕೋಳಿಗಳನ್ನು ಮಧ್ಯಪ್ರದೇಶದ ಭೋಪಾಲ್‌ಗೆ ಕಳುಹಿಸಿಕೊಡಲಾಗಿತ್ತು. ಅವುಗಳ ರಕ್ತದಲ್ಲಿ ಎಚ್ 5 ರೋಗಾಣುಗಳಿರುವುದನ್ನು ಪ್ರಯೋಗಾಲಯ ವರದಿಗಳು ದೃಢಪಡಿಸಿವೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉಮನ್ ಚಾಂಡಿ ನೇತೃತ್ವದಲ್ಲಿ ನಡೆದ ಸಭೆಯು ಕೋಳಿಗಳನ್ನು ಕೊಲ್ಲುವ ತೀರ್ಮಾನ ಕೈಗೊಂಡಿದೆ. ”ಭೋಪಾಲ್‌ನಿಂದ ಬಂದಿರುವ ವರದಿಗಳು ಹಕ್ಕಿ ಜ್ವರದ ಭೀತಿಗೆ ಕಾರಣವಾಗಿವೆ. ಹಾಗಾಗಿ 3 ಜಿಲ್ಲೆಯಲ್ಲಿರುವ ಒಟ್ಟು 2 ಲಕ್ಷ ಕೋಳಿಗಳು ಮತ್ತು ಬಾತುಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ. ಒಂದು ಕೋಳಿಗೆ 75 ರೂ. ಪರಿಹಾರ ನೀಡಲಾಗುತ್ತಿದೆ. ಕೋಳಿಗೆ ಎರಡು ತಿಂಗಳಾಗಿದ್ದರೆ 150 ರೂ. ಪರಿಹಾರ ನೀಡಲಾಗುವುದು,” ಎಂದು ಕೃಷಿ ಸಚಿವ ಕೆ ಪಿ ಮೋಹನ್ ದಾಸ್ ತಿಳಿಸಿದ್ದಾರೆ.

”ಹಕ್ಕಿ ಜ್ವರದ ಸಂಬಂಧ ಜಾಗೃತಿ ಕಾರ‌್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೋಳಿ ಸಾಕಣೆ ಕೇಂದ್ರಗಳಲ್ಲಿ ಕೆಲಸ ಮಾಡುವವರಿಗೆ ಎಚ್1ಎನ್1 (ಹಂದಿ ಜ್ವರ) ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೋಳಿಗಳನ್ನು ನಾಶಪಡಿಸುವ ಕೆಲಸಗಾರರಿಗೆ ಮಾಸ್ಕ್‌ಗಳನ್ನು ಕೊಡಲಾಗಿದೆ. ಸಾಕಣೆ ಕೇಂದ್ರದ ಸಿಬ್ಬಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು ಯಾರ ರಕ್ತದಲ್ಲೂ ರೋಗದ ವೈರಸ್‌ಗಳಿಲ್ಲ. ರೋಗ ಲಕ್ಷಣಗಳಿರುವ ಜಿಲ್ಲೆಗಳಿಂದ ಕೋಳಿಗಳು ಬೇರೆಡೆಗೆ ರವಾನೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ,” ಎಂದು ಆರೋಗ್ಯ ಸಚಿವ ವಿ ಎಸ್ ಶಿವಕುಮಾರ್ ತಿಳಿಸಿದ್ದಾರೆ.

ಮೊಟ್ಟೆ ಮತ್ತು ಮಾಂಸವನ್ನು ಚೆನ್ನಾಗಿ ಬೇಯಿಸದೆ ತಿನ್ನಕೂಡದು ಎಂದು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

Write A Comment