ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ಎನ್‌ಆರ್‌ಐ ಅಂತೆ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್

Pinterest LinkedIn Tumblr

lalu-prasad

ರಾಂಚಿ: ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶದಲ್ಲಿ ನೆಲೆಸಿರುವ ಭಾರತೀಯ ಎಂದು ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರು ಹೇಳಿದ್ದಾರೆ.

ರಾಂಚಿಯಲ್ಲಿ ಮಾತನಾಡಿದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸವನ್ನು ಟೀಕಿಸಿದ್ದಾರೆ. ‘ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ದೇಶದಲ್ಲಿರುವುದಕ್ಕಿಂತಲೂ ಹೆಚ್ಚಾಗಿ ವಿದೇಶದಲ್ಲಿಯೇ ಕಾಲ ಕಳೆಯುವ ಎನ್‌ಆರ್‌ಐ’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನಷ್ಟೇ ಅಲ್ಲದೇ ಮಾಧ್ಯಮಗಳ ವಿರುದ್ಧವೂ ಕಿಡಿಕಾರಿರುವ ಲಾಲು ಪ್ರಸಾದ್ ಯಾದವ್ ಅವರು, ಮೋದಿ ತಮ್ಮನ್ನು ಗುಣಗಾನ ಮಾಡುವ ಮಾಧ್ಯಮಗಳನ್ನು ಖರೀದಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಮೋದಿ ಅವರ ಹೊಗಳಿಕೆಯಲ್ಲಿಯೇ ಮುಳುಗಿರುವ ಮಾಧ್ಯಮಗಳು ಗಡಿಯಲ್ಲಿ ನೆರೆಯ ಶತ್ರುರಾಷ್ಟ್ರಗಳು ನಮ್ಮ ದಾಳಿ ಮಾಡುತ್ತಿದ್ದರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮೋದಿ ಹೊಗಳಿಕೆಯಲ್ಲಿಯೇ ಮುಳುಗಿವೆ ಎಂದು ಕಿಡಿಕಾರಿದ್ದಾರೆ.

ಅಂತೆಯೇ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧವೂ ಕಿಡಿಕಾರಿದ ಲಾಲು ಪ್ರಸಾದ್ ಯಾದವ್ ಅವರು, ಅಧಿಕಾರಕ್ಕೆ ಬಂದ 100ದಿನಗಳೊಳಗಾಗಿ ಕಪ್ಪುಹಣವನ್ನು ಭಾರತಕ್ಕೆ ವಾಪಸ್ ತರುವುದಾಗಿ ಭರವಸೆ ನೀಡಿದ್ದರು. ಆದರೆ ಆಗಿದ್ದೇನು..? ಸರ್ಕಾರ ಅಧಿಕಾರಕ್ಕೆ ಬಂದು 100 ದಿನಕ್ಕೂ ಅಧಿಕ ಸಮಯವಾಯಿತು. ಈ ವರೆಗೂ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತಂದಿಲ್ಲ ಎಂದು ಕಿಡಿಕಾರಿದರು. ಅಂತೆಯೇ ಸ್ವಚ್ಛ ಭಾರತ ಅಭಿಯಾನದ ಕುರಿತಾಗಿಯೂ ಕಿಡಿಕಾರಿದ ಲಾಲು ಪ್ರಸಾದ್ ಯಾದವ್, ಇದೊಂದು ಪುಕಟೆ ಪ್ರಚಾರಕ್ಕಾಗಿ ನಡೆಯುತ್ತಿರುವ ಕಾರ್ಯ ಎಂದು ಹೇಳಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯ ಬಳಿಕ ಪ್ರಧಾನಿ ಪಟ್ಟಕೇರಿದ ನರೇಂದ್ರ ಮೋದಿ ಅವರು ಬೂತಾನ್, ಬ್ರೆಜಿಲ್, ನೇಪಾಳ, ಜಪಾನ್, ಅಮೆರಿಕ, ಮ್ಯಾನ್ಮಾರ್, ಆಸ್ಟ್ರೇಲಿಯಾ ಸೇರಿದಂತೆ ಈ ವರೆಗೂ ಸುಮಾರು 7 ದೇಶಗಳನ್ನು ಸುತ್ತಿದ್ದು, ಇದಲ್ಲದೇ ಪಿಜಿ, ನೇಪಾಳ (ಸಾರ್ಕ್ ಶೃಂಗಸಭೆ), ಶ್ರೀಲಂಕಾ ದೇಶಗಳಿಗೂ ಭೇಟಿ ನೀಡಲಿದ್ದಾರೆ.

Write A Comment