ರಾಷ್ಟ್ರೀಯ

ಪ್ರತ್ಯೇಕವಾದಿಗಳು ಮುಖ್ಯವಾಹಿನಿಗೆ ಸೇರಲು ಬಾಗಿಲು ತೆರೆದಿದೆ: ಬಿಜೆಪಿ

Pinterest LinkedIn Tumblr

Kashmir_separatists_AP

ಜಮ್ಮು : ಜಮ್ಮು ಕಾಶ್ಮೀರದ ಪ್ರತ್ಯೇಕವಾದಿಗಳಿಗೆ ರಾಜಕೀಯ ಮುಖ್ಯವಾಹಿನಿಗೆ ಸೇರಿಕೊಳ್ಳಲು ಮತ್ತು ಪಾಕಿಸ್ತಾನದ ಪ್ರಧಾನಮಂತ್ರಿಯ ಬಾಗಿಲು ಬಡಿಯುವುದನ್ನು ಬಿಟ್ಟು ಪ್ರಧಾನಿ ನರೇಂದ್ರ ಮೋದಿಯವರ ಹತ್ತಿರ ಬರಲು ಬಿಜೆಪಿ ಮನವಿ ಮಾಡಿದೆ. “ಪಾಕಿಸ್ತಾನಿ ಪ್ರಧಾನ ಮಂತ್ರಿ, ಪಾಕಿಸ್ತಾನಿ ರಾಯಭಾರಿ ಇವುರಗಳ ಬಳಿ ಹೋಗುವ ಬದಲು, (ರಾಜಕೀಯ) ಮುಖ್ಯವಾಹಿನಿಗೆ ಸೇರುವುದು ಮೇಲು. ಪ್ರಧಾನಿ ನರೇಂದ್ರ ಮೋದಿಯವರ ಹತ್ತಿರ ಬನ್ನಿ. ಬಾಗಿಲು ಸದಾ ತೆರೆದಿದೆ” ಎಂದು ಶುಕ್ರವಾರ ಬಿಜೆಪಿ ರಾಷ್ಟ್ರೀಯ ವಕ್ತಾರ ರಾಮ್ ಮಾಧವ್ ವರದಿಗಾರರಿಗೆ ತಿಳಿಸಿದ್ದಾರೆ.

“ನಾವು ಪ್ರತ್ಯೇಕವಾದಿಗಳ ಜೊತೆ ಕೈಜೋಡಿಸುವುದಿಲ್ಲ, ಆದರೆ ಪ್ರತ್ಯೇಕವಾದಿ ರಸ್ತೆಯನ್ನು ತ್ಯಜಿಸಿ ರಾಜಕೀಯ ಮುಖ್ಯವಾಹಿನಿಗೆ ಬರಲು ಸಮಾಜದ ಎಲ್ಲ ವರ್ಗದ ಜನರಿಗೂ ಮನವಿ ಮಾಡಿಕೊಳ್ಳುತ್ತೇವೆ. ಮುಂದೆ ಬನ್ನಿ, ಬಾಗಿಲು ನಿಮಗಾಗಿ ಸದಾ ತೆರೆದಿದೆ” ಎಂದು ಮಾಧವ್ ತಿಳಿಸಿದ್ದಾರೆ. ನರೇಂದ್ರಮೋದಿಯವರ ಜಮ್ಮು ಕಾಶ್ಮೀರ ಅಭಿವೃದ್ದಿ ಕನಸಿಗೆ ಜೊತೆಯಾಗಲು ಎಲ್ಲರನ್ನೂ ಆಹ್ವಾನಿಸುತ್ತೇವೆ. ಆದರೆ ಅವರು ವಂಶಪರಂಪರೆಯ  ಆಳ್ವಿಕೆಯ ವಿರುದ್ಧದ ನಿಲುವನ್ನು ಹೊಂದಿರಬೇಕು.” ಎಂದಿದ್ದಾರೆ. ೩೭೦ ನೇ ವಿಧಿಯ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸದ ಅವರು “ನಮ್ಮ ಸಿದ್ಧಾಂತದ ಮೇರೆಗೆ ಚುನಾವಣಾ ಪ್ರಣಾಳಿಕೆಯಲ್ಲಿ ಈ ವಿಷಯದ ಕುರಿತು ಮಂಡಿಸುತ್ತೇವೆ.” ಎಂದಿದ್ದಾರೆ. ಈ ಮಧ್ಯೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾತನಾಡಿ ಚುನಾವಣೆಯ ನಂತರ ಆಯ್ಕೆಯಾದ ಶಾಸಕರುಗಳಿಗೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಅವಕಾಶ ಕೊಡುತ್ತೇವೆ ಎಂದಿದ್ದಾರೆ.

“ಬಿಜೆಪಿ ಮಾತ್ರ ರಾಜ್ಯದ ಅಭಿವೃದ್ಧಿಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಕೊಡಬಲ್ಲುದು. ಮಧ್ಯಪ್ರದೇಶ ಮತ್ತು ಗುಜರಾತಿನ ಅಭಿವೃದ್ಧಿ ಮಾದರಿಯನ್ನು ಜಮ್ಮು ಕಾಶ್ಮೀರದಲ್ಲೂ ಸೃಷ್ಟಿಸುತ್ತೇವೆ” ಎಂದಿದ್ದಾರೆ ಸಿಂಗ್.

Write A Comment