ಅಂತರಾಷ್ಟ್ರೀಯ

50ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಪ್ರಧಾನಿ ಮೋದಿ ಚೊಚ್ಚಲ ಅಮೆರಿಕ ಭೇಟಿ

Pinterest LinkedIn Tumblr

Modi44modi

ವಾಷಿಂಗ್ಟನ್/ನ್ಯೂಯಾರ್ಕ್, ಸೆ.23: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರನ್ನು ಭೇಟಿಯಾಗುವುದರಿಂದ ಹಿಡಿದು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ತನ್ನ ಚೊಚ್ಚಲ ಭಾಷಣ ನೀಡುವವರೆಗೆ ಅಮೆರಿಕ ಭೇಟಿಯ ವೇಳೆ ನಿಗದಿಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳ ಪಟ್ಟಿ ಸುದೀರ್ಘವಾಗಿದೆ ಎಂದು ವರದಿಯೊಂದು ತಿಳಿಸಿದೆ.

ಮೋದಿಯವರು ಅಮೆರಿಕದಲ್ಲಿ ತಂಗಲಿರುವ ಒಟ್ಟು 100 ತಾಸುಗಳ ಅವಧಿಯಲ್ಲಿ 50ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.

ಉನ್ನತ ಜಾಗತಿಕ ನಾಯಕರ ಭೇಟಿ, ಭಾರತೀಯ ಸಮುದಾಯದ ಸಾವಿರಾರು ಬೆಂಬಲಿಗರನ್ನುದ್ದೇಶಿಸಿ ಭಾಷಣ, ವಿಶ್ವಸಂಸ್ಥೆಯ ಮಹಾಧಿವೇಶನವನ್ನುದ್ದೇಶಿಸಿ ಭಾಷಣ, ಫಾರ್ಚೂನ್500 ಸಿಇಒಗಳೊಂದಿಗೆ ವಿಚಾರವಿನಿಮಯ, ಅಧ್ಯಕ್ಷ ಬರಾಕ್ ಒಬಾಮರೊಂದಿಗಿನ ಓವಲ್ ಕಚೇರಿಯಲ್ಲಿನ ಸಭೆಯನ್ನೊಳಗೊಂಡಂತೆ 50ಕ್ಕೂ ಅಧಿಕ ಅವಿರತ ಕಾರ್ಯಕ್ರಮಗಳ ಪಟ್ಟಿ ಮೋದಿಯವರಿಗಾಗಿ ಕಾಯುತ್ತಿದೆ.

ಸೆಪ್ಟಂಬರ್ 26ರಂದು ಏರ್‌ಇಂಡಿಯಾ ಒನ್ ವಿಮಾನವು ನ್ಯೂಯಾರ್ಕ್‌ನ ಜಾನ್ ಎಫ್.ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶಗೈಯುವುದರಿಂದ ತೊಡಗಿ ಸೆಪ್ಟಂಬರ್ 30ರಂದು ಸಂಜೆ ವಾಷಿಂಗ್ಟನ್‌ನಲ್ಲಿರುವ ಆ್ಯಂಡ್ರೂಸ್ ವಾಯುಪಡೆ ನೆಲೆಯಲ್ಲಿ ವಿಮಾನವನ್ನೇರಿ ಸ್ವದೇಶಕ್ಕೆ ಮರಳುವ ತನಕವೂ ಕಾರ್ಯಕ್ರಮಗಳು ನಿಗದಿಗೊಂಡಿದ್ದು, ಮೋದಿಯವರ ಕ್ರಿಯಾಶೀಲ ಭಾರತದ ಧ್ಯೇಯವನ್ನು ಗುರಿಯಾಗಿಸಿವೆ ಎಂದು ಮೂಲಗಳು ತಿಳಿಸಿವೆ.

ಮೋದಿಯವರೊಂದಿಗಿನ ವಿಚಾರ ವಿನಿಮಯದಲ್ಲಿ ಪಾಲ್ಗೊಳ್ಳುವವರಲ್ಲಿ ಹೆಚ್ಚಿನವರು ಫಾರ್ಚೂನ್ 500ಗೆ ಸೇರಿದವರಾಗಿದ್ದು, ಈ ಸಂದರ್ಭದಲ್ಲಿ ಮೋದಿಯವರು ‘ಕೆಂಪುಹಾಸು ಮತ್ತು ಕೆಂಪುಪಟ್ಟಿಯಲ್ಲ’ ಸಿದ್ಧಾಂತವನ್ನು ಪುನರುಚ್ಚರಿಸುವ ಮೂಲಕ ಅವರನ್ನು ಭಾರತಕ್ಕೆ ಬರುವಂತೆ, ಬಂಡವಾಳ ಹೂಡುವಂತೆ ಹಾಗೂ ಭಾರತದಲ್ಲಿ ಉತ್ಪಾದಿಸುವಂತೆ ಆಹ್ವಾನಿಸಲಿದ್ದಾರೆ.

ಅಮೆರಿಕದ ಪ್ರಮುಖ ಉದ್ಯಮಿ ಹಾಗೂ ನ್ಯೂಯಾರ್ಕ್‌ನ ಮಾಜಿ ಮೇಯರ್ ಮೈಕೆಲ್ ಬ್ಲೂಮ್‌ಬರ್ಗ್‌ರಂತಹ ನಾಯಕರೊಂದಿಗೆ ನಡೆಸುವ ವಿಚಾರ ವಿನಿಮಯದ ವೇಳೆ ಮೋದಿಯವರು, ‘ಸ್ಮಾರ್ಟ್ ಸಿಟಿ’ ಕುರಿತು ಅವರ ಅನುಭವಗಳನ್ನು ತಿಳಿದುಕೊಳ್ಳಲಿದ್ದಾರೆ.

ಸುಮಾರು 20 ಸಾವಿರ ಭಾರತೀಯ ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಮೋದಿಯವರು ಭಾರತೀಯ ಸಮುದಾಯದೊಂದಿಗೆ ಮಾತುಕತೆ ನಡೆಸಲಿದ್ದು, ಕ್ರಿಯಾಶೀಲ ಭಾರತದಲ್ಲಿ ಅವರ ಭಾಗಿದಾರಿಕೆಯನ್ನು ಅಪೇಕ್ಷಿಸಲಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಹಾಗೂ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್‌ರಿಂದ ತೊಡಗಿ ಭಾರತೀಯ ಮೂಲದ ದಕ್ಷಿಣ ಕೆರೊಲಿನಾದ ಗವರ್ನರ್ ನಿಕ್ಕಿ ಹ್ಯಾಲೆಯವರೆಗಿನ ಅಮೆರಿಕದ ಉನ್ನತ ರಾಜಕೀಯ ಮುಖಂಡರೊಂದಿಗೆ ಮೋದಿಯವರು ಮಾತುಕತೆ ನಡೆಸುವ ಕಾರ್ಯಕ್ರಮವಿದೆ.

ನ್ಯೂಯಾರ್ಕ್ ಅಥವಾ ವಾಷಿಂಗ್ಟನ್‌ನಲ್ಲಿ ತಂಗುವ ವೇಳೆ, ಅಮೆರಿಕ ಪ್ರತಿನಿಧಿ ಸಭೆಯ ಸ್ಪೀಕರ್ ಜೋ ಬೊಯೆಹ್ನರ್ ಹಾಗೂ 50ಕ್ಕೂ ಅಧಿಕ ಸಂಸದರು ಮೋದಿಯವರಿಗೆ ಚಹಾಕೂಟ ಏರ್ಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಹಾಗೂ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರ ಭೇಟಿಯು ನಿಯೋಜಿತ ಕಾರ್ಯಕ್ರಮಗಳಲ್ಲೇ ಅತ್ಯಂತ ಮಹತ್ವವನ್ನು ಪಡೆದಿದೆ.

ಭಾರತೀಯ ನಾಯಕನೊಂದಿಗೆ ತನ್ನ ಬಾಂಧವ್ಯವನ್ನು ಬಲಪಡಿಸುವ ಉದ್ದೇಶದಿಂದ ಬರಾಕ್ ಒಬಾಮ ಸೆಪ್ಟಂಬರ್ 29ರಂದು ಮೋದಿಯವರಿಗೆ ಶ್ವೇತಭವನದಲ್ಲಿ ಖಾಸಗಿ ಔತಣಕೂಟವನ್ನು ಏರ್ಪಡಿಸಿದ್ದಾರೆ.

ಶ್ವೇತಭವನದಲ್ಲಿ ಸೆಪ್ಟಂಬರ್ 30ರಂದು ಪ್ರಮುಖ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಮೋದಿಯವರು ವಾಷಿಂಗ್ಟನ್‌ನಲ್ಲಿರುವ ಮಾರ್ಟಿನ್ ಲೂಥರ್ ಕಿಂಗ್ ಸ್ಮಾರಕ ಹಾಗೂ ಲಿಂಕನ್ ಸ್ಮಾರಕಕ್ಕೆ ಭೇಟಿ ನೀಡಲಿದ್ದು, ಭಾರತೀಯ ದೂತಾವಾಸದ ಮುಂಭಾಗದಲ್ಲಿರುವ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ.

ಅಮೆರಿಕ ಭೇಟಿಯ ವೇಳೆ ಅವಿರತವಾಗಿ ಇಷ್ಟೊಂದು ಸಂಖ್ಯೆಯ ಸಾರ್ವಜನಿಕ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಭಾರತೀಯ ಪ್ರಧಾನಿಯವರು ಪಾಲ್ಗೊಳ್ಳಲಿರುವುದು ಇದೇ ಮೊದಲ ಬಾರಿಯಾಗಿದೆ.

ಅಸಾಮಾನ್ಯವಾದ ಅತ್ಯಂತ ಕಡಿಮೆ ಸಂಖ್ಯೆಯ ಪ್ರತಿನಿಧಿಗಳನ್ನೊಳಗೊಂಡ ನಿಯೋಗದೊಂದಿಗೆ ಪ್ರಧಾನಿ ಮೋದಿಯವರು ಸೆಪ್ಟಂಬರ್ 26ರಂದು ಅಪರಾಹ್ಣ ಜಾನ್ ಎಫ್.ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವ ವೇಳೆ ಅವರನ್ನು ಅಮೆರಿಕಕ್ಕೆ ಭಾರತೀಯ ರಾಯಭಾರಿಯಾಗಿರುವ ಎಸ್. ಜಯಶಂಕರ್ ಹಾಗೂ ವಿಶ್ವಸಂಸ್ಥೆಗೆ ಭಾರತೀಯ ರಾಯಭಾರಿಯಾಗಿರುವ ಅಶೋಕ್‌ಮುಖರ್ಜಿ ಬರಮಾಡಿಕೊಳ್ಳಲಿದ್ದಾರೆ.

ನ್ಯಾಶನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ಹಾಲಿ ನಿರ್ದೇಶಕರಾಗಿರುವ ನೊಬೆಲ್ ಪುರಸ್ಕೃತ ಹರೋಲ್ಡ್ ಇಲಿಯಟ್ ವರ್ಮಸ್‌ರನ್ನು ಮೋದಿ ಭೇಟಿಯಾಗಲಿದ್ದಾರೆ.

ಸೆಪ್ಟಂಬರ್ 27ರಂದು ಮೋದಿಯವರು ನ್ಯೂಯಾರ್ಕ್‌ನ 9/11 ಸ್ಮಾರಕಕ್ಕೆ ಭೇಟಿ ನೀಡಲಿದ್ದು, ಬಳಿಕ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯುವ ಮಹಾಸಭೆಯಲ್ಲಿ 69ನೆ ವಾರ್ಷಿಕ ಅಧಿವೇಶನವನ್ನುದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್‌ರೊಂದಿಗೂ ಮೋದಿಯವರು ಮಾತುಕತೆ ನಡೆಸಲಿದ್ದಾರೆ.

ಸೆಪ್ಟಂಬರ್ 28ರಂದು ಮೋದಿಯವರು ಭಾರತೀಯ ಸಮುದಾಯದ ಮುಖಂಡರೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದಾರೆ. ಸೆಪ್ಟಂಬರ್ 30ರಂದು ಸಂಜೆ ಅಮೆರಿಕದಿಂದ ಭಾರತಕ್ಕೆ ತೆರಳುವ ಮುನ್ನ ಮೋದಿಯವರು ಆ್ಯಂಡ್ರೂಸ್ ವಾಯುಪಡೆ ನೆಲೆಯಲ್ಲಿ ಭಾಷಣ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಕಾದಿವೆ ಪ್ರತಿಭಟನೆ, ಕಪ್ಪು ಬಾವುಟ ಪ್ರದರ್ಶನ
ವಾಷಿಂಗ್ಟನ್, ಸೆ.23: ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯ ವೇಳೆ ಅವರ ವಿರುದ್ಧ ಸರಣಿ ಪ್ರತಿಭಟನೆಗಳನ್ನು ನಡೆಸಲು ಹಲವು ಮೋದಿ ವಿರೋಧಿ ಸಂಘಟನೆಗಳು ಸಜ್ಜಾಗಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಇತ್ತೀಚೆಗೆ ಸ್ಥಾಪನೆಯಾಗಿರುವ ‘ಅಲಾಯನ್ಸ್ ಫಾರ್ ಜಸ್ಟಿಸ್ ಆ್ಯಂಡ್ ಅಕೌಂಟೆಬಿಲಿಟಿ‘(ಎಜೆಎ), ಮ್ಯಾಡಿಸನ್ ಸ್ಕ್ವೇರ್‌ನಲ್ಲಿ ಮೋದಿ ವಿರುದ್ಧ ಕಪ್ಪುಬಾವುಟ ಪ್ರದರ್ಶಿಸುವುದಾಗಿ ಪ್ರಕಟಿಸಿದೆ.

ಮೋದಿಯವರನ್ನು ದೋಷಿಯನ್ನಾಗಿಸಲು ಸೆಪ್ಟಂಬರ್ 30ರಂದು ಶ್ವೇತಭವನದ ಮುಂಭಾಗದಲ್ಲಿ ‘ನಾಗರಿಕ ನ್ಯಾಯಾಲಯ’ ನಡೆಸುವುದಾಗಿ ‘ಸಿಖ್ ಫಾರ್ ಜಸ್ಟಿಸ್’ (ಎಸ್‌ಎಫ್‌ಜೆ) ಘೋಷಿಸಿದೆ.

Write A Comment