ಗಲ್ಫ್

ವಿದೇಶಿಯರಿಗೂ ಪೌರತ್ವ ನೀಡಲು ಮುಂದಾಗಿರುವ ಯುಎಇ: ಶೇಖ್‌ ಮುಹಮ್ಮದ್‌ ಬಿನ್‌ ರಾಶೀದ್‌

Pinterest LinkedIn Tumblr

ಅಬುಧಾಬಿ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿದೇಶಿಯರಿಗೂ ಪೌರತ್ವ ನೀಡಲು ಮುಂದಾಗಿದ್ದು, ಬಂಡವಾಳ ಹೂಡಿಕೆದಾರರು ಹಾಗೂ ವಿಜ್ಞಾನಿಗಳು ಮತ್ತು ವೈದ್ಯರು ಸೇರಿದಂತೆ ವೃತ್ತಿಪರರು ಮತ್ತು ಅವರ ಕುಟುಂಬ ಸದಸ್ಯರಿಗೆ ಪೌರತ್ವ ನೀಡುವುದಕ್ಕೆ ಸಂಬಂಧಿಸಿದ ತಿದ್ದುಪಡಿಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಂಗೀಕರಿಸಿದೆ.

ಆಯ್ದ ಕೆಲವು ವಿದೇಶಿ ನಾಗರಿಕರಿಗೆ ಪೌರತ್ವ ನೀಡುವುದಾಗಿ ಯುಎಈ ಘೋ‍ಷಣೆ ಮಾಡಿದೆ. ಆ ಮೂಲಕ ಈ ನಿರ್ಧಾರ ತೆಗೆದುಕೊಂಡು ಮೊದಲ ಗಲ್ಫ್‌ ರಾಷ್ಟ್ರವಾಗಿ ಯುಎಇ ಹೊರಹೊಮ್ಮಿದೆ.

ವಿದೇಶಿಯರಿಗೂ ಪೌರತ್ವ ನೀಡುವ ಯೋಜನೆಯನ್ನು ಯುಎಇ ಪ್ರಧಾನಿ ಶೇಖ್‌ ಮುಹಮ್ಮದ್‌ ಬಿನ್‌ ರಾಶೀದ್‌ ಅಲ್‌ ಮೌಕ್ತುಂ ಟ್ವಿಟ್ಟರ್‌ ಮೂಲಕ ಪ್ರಕಟಿಸಿದ್ದು, ಹೂಡಿಕೆದಾರರು, ಪ್ರತಿಭಾವಂತರು, ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು, ಕಲಾವಿದರು ಹಾಗೂ ವೃತ್ತಿ ಪರರಿಗೆ ಪೌರತ್ವ ಕಲ್ಪಿಸಲು ಯುಎಇಯ ಪೌರತ್ವ ಕಾನೂನಿಗೆ ತಿದ್ದುಪಡಿ ತರಲಾಗುತ್ತದೆ ಎಂದು ಹೇಳಿದ್ದಾರೆ.

ಅಲ್ಲದೇ ದೇಶದ ಪೌರತ್ವಕ್ಕೆ ಅರ್ಹರಾದ ವ್ಯಕ್ತಿಗಳನ್ನು ಯುಎಇಯ ಸಂಪುಟ ಸದಸ್ಯರು, ಸ್ಥಳೀಯ ಎಮಿರಿ ನ್ಯಾಯಾಲಯಗಳು ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ನಾಮ ನಿರ್ದೇಶನ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ. ಹೊಸದಾಗಿ ಪೌರತ್ವ ಪಡೆದುಕೊಂಡಿವರಿಗೆ ಯುಎಇ ಪಾಸ್‌ಪೋರ್ಟ್‌ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಯುಎಇಯಲ್ಲಿ ಸುಮಾರು 90 ಲಕ್ಷ ಜನಸಂಖ್ಯೆ ಇದ್ದು, ಇದರಲ್ಲಿ ಶೇ.80 ರಷ್ಟು ಮಂದಿ ವಿದೇಶಿಯರೇ ಇದ್ದಾರೆ. ದಕ್ಷಿಣ ಏಷ್ಯಾದ, ಅದರಲ್ಲೂ ಪ್ರಮುಖವಾಗಿ ಭಾರತದ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದಾರೆ.

ಒಂದು ವೇಳೆ ಈ ಹೊಸ ಕಾನೂನು ಜಾರಿಗೆ ಬಂದರೆ ಭಾರತದ ಹಲವು ಮಂದಿಗೆ ಯುಎಇಯ ಪೌರತ್ವ ಪಡೆದುಕೊಳ್ಳುವ ಅವಕಾಶ ಸಿಗಲಿದೆ.

Comments are closed.