ರಾಷ್ಟ್ರೀಯ

ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಕ್ಕಾದ ಅಪಮಾನಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಮೋದಿ

Pinterest LinkedIn Tumblr

ನವದೆಹಲಿ: ಈ ವರ್ಷದ ಮೊದಲ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತನಾಡುತ್ತಿದ್ದು, ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಕ್ಕಾದ ಅಪಮಾನಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

2021ರ ಮೊದಲ ತಿಂಗಳು ಮುಗಿಯುತ್ತಿದೆ. ಈ ತಿಂಗಳಿನಲ್ಲಿ ನಾವು ಹಲವು ಹಬ್ಬಗಳನ್ನು ಆಚರಿಸಿದ್ದೇವೆ. ಜನವರಿ 26ರ ಗಣರಾಜ್ಯೋತ್ಸವ ದಿನದಂದು ರಾಷ್ಟ್ರಧ್ವಜದ ಅಪಮಾನಕ್ಕೆ ಸಾಕ್ಷಿಯಾದ ಇಡೀ ದೇಶ ಆಘಾತಕ್ಕೊಳಗಾಗಿದೆ ಎಂದು ಹೇಳಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಲಾಗಿದೆ. ಅಂದು ನಡೆದ ಘಟನೆಯಿಂದ ಬೇಸರವಾಗಿದೆ. ಇಡೀ ದೇಶಕ್ಕೆ ದುಷ್ಟಶಕ್ತಿಗಳಿಂದ ಅವಮಾನವಾಗಿದೆ ಎಂದು ಭಾಷಣದ ಆರಂಭದಲ್ಲಿಯೇ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಸಂಭವಿಸಿದ ಘಟನೆಯನ್ನು ಸ್ಮರಿಸಿ ಖಂಡಿಸಿದರು.

ಈ ತಿಂಗಳು ಕ್ರಿಕೆಟ್ ಮೈದಾನದಿಂದ ಒಳ್ಳೆಯ ಸುದ್ದಿಯೊಂದನ್ನು ಕೇಳಿದೆವು. ಆರಂಭಿಕ ಸೋಲಿನ ಬಳಿಕ ಆಸ್ಟ್ರೇಲಿಯಾದ ನೆಲದಲ್ಲಿಯೇ ಆಸಿಸ್ ವಿರುದ್ಧ ತಿರುಗಿಬಿದ್ದು ಟೆಸ್ಟ್ ಸರಣಿ ಗೆಲ್ಲುವ ಮೂಲಕ ಟೀಂ ಇಂಡಿಯಾ ಇತಿಹಾಸ ಬರೆದಿದೆ. ನಮ್ಮ ತಂಡದ ಶ್ರಮ ಮತ್ತು ತಂಡದ ಕೆಲಸ ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಟೀಂ ಇಂಡಿಯಾವನ್ನು ಪ್ರಶಂಸಿಸಿದ್ದಾರೆ.

ಕೊರೋನಾ ವಿರುದ್ಧ ಒಂದು ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ದೇಶದಲ್ಲಿ ಅತೀದೊಡ್ಡ ಕೊರೋನಾ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಲಸಿಕಾ ಅಭಿಯಾನದಿಂದ ನಾವು ಗಮಿನಿಸಬೇಕಾದ ಅಂಶವೆಂದರೆ, ಭಾರತ ಇಂದು ಇತರೆ ರಾಷ್ಟ್ರಗಳಿಗೆ ನೆರವು ನೀಡುವಷ್ಟು ಸಮರ್ಥವಾಗಿದೆ ಎಂಬುದು. ಭಾರತ ಇಂದು ಔಷಧಿ ಮತ್ತು ಲಸಿಕೆ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುತ್ತಿದೆ. 30 ಲಕ್ಷ ಜನರಿಗೆ ಲಸಿಕೆ ಪೂರೈಸಲಾಗುತ್ತಿದೆ. ಇದಕ್ಕಾಗಿ ಇತರೆ ರಾಷ್ಟ್ರಗಳು ನಮಗೆ ಕೃತಜ್ಞತೆ ಸಲ್ಲಿಸಿವೆ ಎಂದು ಹೇಳಿದ್ದಾರೆ.

ಈ ವರ್ಷ ಭಾರತ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಆಚರಣೆಗೆ ಸಾಕ್ಷಿಯಾಗಲಿದೆ. ನಿಮ್ಮ ಬರಹಗಳು ಸ್ವಾತಂತ್ರ್ಯ ಚಳುವಳಿಯ ವೀರರಿಗೆ ಆದರ್ಶ ಗೌರವವಾಗಿದೆ. ದೇಶದ ಜನರು ವಿಶೇಷವಾಗಿ ಯುವ ಸ್ನೇಹಿತರಿಗೆ ನಾನು ಕರೆ ನೀಡುವುದೇನೆಂದರೆ, ಸ್ವಾತಂತ್ರ್ಯ ಯೋಧರ ಬಗ್ಗೆ ಬರೆಯಿರಿ. ಅದಕ್ಕೆ ಸಂಬಂಧಿಸಿದ ಘಟನೆಗಳು ಮತ್ತು ಅವರ ಪ್ರದೇಶಗಳಲ್ಲಿ ಸ್ವಾತಂತ್ರ್ಯ ಹೋರಾಟದ ಸಮಯದ ಶೌರ್ಯದ ಕಥೆಗಳ ಬಗ್ಗೆ ಪುಸ್ತಕಗಳನ್ನು ಬರೆಯಿರಿ ಎಂದು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ನಮ್ಮ 4 ಭಾರತೀಯ ಮಹಿಳಾ ಪೈಲಟ್ ಗಳು ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ನೇರವಾಗಿ ವಿಮಾನ ಚಲಾಯಿಸಿದರು. 225 ಜನರನ್ನು ಹೊತ್ತ ವಿಮಾನವು 10 ಸಾವಿರ ಕಿಮೀ ಪ್ರಯಾಣ ಮಾಡಿದೆ. ಯಾವುದೇ ಕ್ಷೇತ್ರವಾಗಲೀ, ರಾಷ್ಟ್ರದ ಮಹಿಳೆಯರ ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಇದೇ ವೇಳೆ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್ ನ ಒಂದು ತರಕಾರಿ ಮಾರುಕಟ್ಟೆಯಲ್ಲಿ ಕೊಳೆತ ತರಕಾರಿಗಳಿಂದ ವಿದ್ಯುತ್ ತಯಾರಿಕೆ ಮಾಡಲಾಗುತ್ತಿದೆ. ಕಸದಿಂದ ರಸ ತೆಗೆಯುವುದು ಎಂದರೆ ಇದೇ. ಪ್ರತಿನಿತ್ಯ ಇಲ್ಲಿ ಬಯೋಗ್ಯಾಸ್ ಕೂಡ ತಯಾರಾಗುತ್ತಿದೆ.

ಹರಿಯಾಣದಲ್ಲಿ ಪರಿಸರ ರಕ್ಷಣೆಗೆ ಒಂದು ಉಪಾಯವನ್ನು ಮಾಡಲಾಗಿದೆ. ಗ್ರಾಮಗಳಿಂದ ಬರುವ ಕೊಳಚೆ ನೀರನ್ನು ಒಂದು ಕಡೆ ಸಂಗ್ರಹ ಮಾಡಲಾಗುತ್ತಿದ್ದು, ಅದನ್ನು ಶುದ್ಧೀಕರಿಸಿ ಕೃಷಿಗೆ ಉಪಯೋಗ ಮಾಡಲಾಗುತ್ತಿದೆ. ಇದು ನೀರನ್ನು ಉಳಿಸುವ ಒಂದು ಪ್ರಯತ್ನವಾಗಿದ್ದು, ಇತರೆ ತಾಲೂಕು ಹಾಗೂ ಜಿಲ್ಲೆಗಳಿಗೆ ಮಾದರಿಯಾಗಿದೆ.

ಕೇರಳದ ಕೊಟ್ಟಾಯಂನ ಅಂಗವಿಕಲ ರಾಜಪ್ಪನ್ ಅವರು ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ. ದೋಣಿಯಲ್ಲಿ ನದಿಯಲ್ಲಿ ಸಾಗಿ ನದಿಗೆ ಎಸೆದಿರುವ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹ ಮಾಡುತ್ತಿದ್ದಾರೆ.

ಝಾನ್ಸಿಯಲ್ಲಿ ಒಂದು ತಿಂಗಳ ಕಾಲ ನಡೆಯುವ ಸ್ಟ್ರಾಬೆರಿ ಮೇಳ ಆರಂಭವಾಗಿದೆ. ಝಾನ್ಸಿಯಲ್ಲಿ ಸ್ಟ್ರಾಬೆರಿ ಬೆಳೆಯಲಾಗುತ್ತದೆಯೇ ಎಂದು ನಿಮಗೆ ಆಶ್ಚರ್ಯವಾಗಬಹುದು. ಇಲ್ಲಿ ಈಗ ಟೆರಾಸ್ ಗಾರ್ಡನ್ ನಲ್ಲಿಯೂ ಸ್ಟ್ರಾಬೆರಿ ಬೆಳೆಯಲಾಗುತ್ತಿದೆ. ಯುವಕರು ಕೂಡ ಇದೀಗ ಈ ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ.

ಕೃಷಿಯನ್ನು ಆಧುನೀಕರಣಗೊಳಿಸಲು ಸರ್ಕಾರ ಬದ್ಧವಾಗಿದೆ. ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈ ಪ್ರಯತ್ನಗಳನ್ನು ಇನ್ನೂ ಮುಂದುವರೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಪ್ರವಾಸೋದ್ಯಮ ಇಲಾಖೆ ಕರಕುಶಲ ಮೇಳವನ್ನು ಆಯೋಜನೆ ಮಾಡುತ್ತಿದೆ. ಇದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಜನರು ಬಿಡಿಸಿದ ಚಿತ್ರಗಳನ್ನು ಕೂಡ ಇಲ್ಲಿ ಮಾರಾಟ ಮಾಡಲಾಗುತ್ತಿದೆ. ರಾಮಾಯಣದ ಬಗ್ಗೆ ಬರೆದ ಚಿತ್ರವೊಂದು ಇಲ್ಲಿ ರೂ.2 ಲಕ್ಷಕ್ಕೆ ಮಾರಾಟವಾಗಿದೆ.

ಜಾರ್ಖಾಂಡ್ ನಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಗ್ರಾಮದ ಗೋಡೆಗಳನ್ನು ಇಂಗ್ಲೀಷ್ ಮತ್ತು ಹಿಂದಿ ಅಕ್ಷರಗಳಿಂದ ತುಂಬಿಸಿದ್ದಾರೆ. ಇಂತಹ ಪ್ರಯತ್ನಗಳನ್ನು ಕಂಡಾಗ ಸಂತೋಷವಾಗುತ್ತದೆ.

ಭಾರತದಿಂದ ಚಿಲಿ ತಲುಪಲು ಹೆಚ್ಚು ಸಮಯಬೇಕಾಗುತ್ತದೆ. ಅಲ್ಲಿ ಭಾರತೀಯ ಸಂಸ್ಕೃತಿಯನ್ನು ಪಾಲಿಸಲಾಗುತ್ತಿದೆ. ಚಿಲಿಯಲ್ಲಿ ಯೋಗ ತರಬೇತಿಯನ್ನು ನೀಡಲಾಗುತ್ತಿದೆ. ರಾಜಧಾನಿಯಲ್ಲಿಯೇ ಹಲವು ಯೋಗ ತರಬೇತಿ ಕೇಂದ್ರಗಳಿವೆ. ಅಂತರಾಷ್ಟ್ರೀಯ ಯೋಗ ದಿನವನ್ನು ಅಲ್ಲಿ ಆಚರಣೆ ಮಾಡಲಾಗುತ್ತಿದೆ. ನವೆಂಬರ್ 4ರಂದು ಅಲ್ಲಿ ರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡಲು ಸಂಸತ್ ನಲ್ಲಿ ನಿರ್ಣಯ ಮಂಡನೆ ಮಾಡಲಾಗಿದೆ.

ರಸ್ತೆ ಸುರಕ್ಷತೆ ಬಗ್ಗೆ ಮನ್ ಕಿ ಬಾತ್ ನಲ್ಲಿ ಮಾತನಾಡುವಂತೆ ಹಲವರು ಆಗ್ರಹಿಸುತ್ತಿದ್ದಾರೆ. ಸರ್ಕಾರದ ಜೊತೆ ರಸ್ತೆ ಸುರಕ್ಷತೆ ಜನರು ಕೈಜೋಡಿಸಬೇಕು. ಜನರ ಜೀವ ಹಾನಿಯನ್ನು ಕೂಡ ತಪ್ಪಿಸಬೇಕು. ರಸ್ತೆ ಸುರಕ್ಷತೆ ಬಗ್ಗೆ ನೀವು ಘೋಷವಾಕ್ಯಗಳನ್ನು ಬರೆದು ಕಳುಹಿಸಬಹುದು. ರಸ್ತೆ ಸುರಕ್ಷತೆ ಸಪ್ತಾಹದಲ್ಲಿ ಇದನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಫಾಸ್ಟ್ ಟ್ಯಾಗ್ ಕ್ರಮದಿಂದಾಗಿ ಟೋಲ್ ಬೂತ್ ಗಳಲ್ಲಿ ಕಾಯುವ ಸಮಯ ಕಡಿತವಾಗಿದೆ ಜೊತೆಗೆ ಇಂಧನವೂ ಕೂಡ ಉಳಿತಾಯವಾಗಲಿದೆ ಎಂದಿದ್ದಾರೆ.

Comments are closed.