ದುಬೈ: ಯುಎಇಯಲ್ಲಿರುವ 12 ವರ್ಷದ ಭಾರತೀಯ ಬಾಲಕನೊಬ್ಬ ಒಂದು ನಿಮಿಷದಲ್ಲಿ ಅತ್ಯಧಿಕ ಏರ್ಲೈನ್ಸ್ಗಳ ಲಾಂಛನಗಳನ್ನು ಗುರುತಿಸಿ ಗಿನ್ನಿಸ್ ವಿಶ್ವ ದಾಖಲೆ ಮಾಡಿದ್ದಾನೆ ಎಂದು ಮಾಧ್ಯಮವೊಂದು ಗುರುವಾರ ಉಲ್ಲೇಖಿಸಿದೆ.
ಅಬುಧಾಬಿಯಲ್ಲಿ ಮನೆಯಲ್ಲಿಯೇ ಶಿಕ್ಷಣ ಪಡೆಯುತ್ತಿರುವ ಬಾಲಕ ಸಿದ್ಧಾಂತ್ ಗಂಬೆರ್, 1 ನಿಮಿಷದಲ್ಲಿ 39 ಏರ್ಲೈನ್ಸ್ಗಳ ಲಾಂಛನವನ್ನು ಗುರುತಿಸಿದ್ದಾನೆ. ಜೊತೆಗೆ ಅತಿ ಕಡಿಮೆ ವಯಸ್ಸಿನಲ್ಲೇ ವಿಶ್ವದ 100 ಅತಿ ಎತ್ತರದ ಕಟ್ಟಡಗಳನ್ನು ಗುರುತಿಸಿದ ಕಾರಣಕ್ಕೆ ಈ ಹಿಂದೆ ‘ಇಂಡಿಯಾ ಬುಕ್ ಆಫ್ ವಲ್ಡ್ ರೆಕಾರ್ಡ್ಸ್’ ಕೀರ್ತಿಯನ್ನು ಹರಿಯಾಣ ಮೂಲದ ಸಿದ್ಧಾಂತ್ ಪಡೆದಿದ್ದಾನೆ. ಕಳೆದ ತಿಂಗಳು ಗಿನ್ನಿಸ್ ವಿಶ್ವ ದಾಖಲೆಯನ್ನು ಸಿದ್ಧಾಂತ್ ಬರೆದಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಸಣ್ಣ ವಯಸ್ಸಿನಿಂದಲೇ ಲಿಗೊ ಆಟದಲ್ಲಿ ನಾನು ಆಸಕ್ತಿ ಹೊಂದಿದ್ದೆ. ನಾನು, ನನ್ನ ತಂದೆ ಸೇರಿಕೊಂಡು ರಾಕೆಟ್, ವಿಮಾನ, ಕಟ್ಟಡ, ವಾಹನ ಮುಂತಾದ ಮಾದರಿಗಳನ್ನು ತಯಾರಿಸುತ್ತಿದ್ದೆವು. ಏರ್ಲೈನ್ಸ್ ಕಂಪನಿಗಳ ಲಾಂಛನವನ್ನು ಗುರುತಿಸಲು ಪವರ್ಪಾಯಿಂಟ್ ಮೂಲಕ ನನ್ನ ತಾಯಿ ಸಹಾಯ ಮಾಡುತ್ತಿದ್ದರು’ ಎಂದು ಸಿದ್ಧಾಂತ್ ಹೇಳಿದ್ದಾರೆ.
‘ಒಂದು ಚಿತ್ರವನ್ನು ನೋಡಿದರೆ, ಅದನ್ನು ಸಿದ್ಧಾಂತ್ ಮರೆಯುವುದಿಲ್ಲ. ಒಂದು ಏರ್ಲೈನ್ ಲಾಂಛನವನ್ನು ಕೇವಲ 1.5 ಸೆಕೆಂಡ್ಗಳಲ್ಲಿ ಆತ ಗುರುತಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ’ ಎಂದು ಸಿದ್ಧಾಂತ್ ತಾಯಿ ಮೋನಿಶಾ ತಿಳಿಸಿದರು.