ಅಂತರಾಷ್ಟ್ರೀಯ

ದುಬೈ: ಅಕ್ರಮ ಸಂಬಂಧದ ಆರೋಪ-ಭಾರತೀಯ ಮೂಲದ ಪತ್ನಿಗೆ ಇರಿದು ಹತ್ಯೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ

Pinterest LinkedIn Tumblr


ದುಬೈ: ದಾಂಪತ್ಯ ಜೀವನದಲ್ಲಿ ಅಕ್ರಮ ಹಾಗೂ ದ್ರೋಹವೆಸಗಿದ ಸಂಶಯದ ಮೇಲೆ ತನ್ನ ಪತ್ನಿಯನ್ನು ಆಕೆಯ ಕಚೇರಿಯ ಪಾರ್ಕಿಂಗ್​ ಏರಿಯಾದಲ್ಲಿ ಹಗಲಿನ ವೇಳೆಯಲ್ಲೇ ಚಾಕುವಿನಿಂದ ಇರಿದು ಕೊಂದ ಭಾರತೀಯ ಮೂಲದ ದುಬೈ ವ್ಯಕ್ತಿಗೆ ಅಲ್ಲಿನ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿರುವುದಾಗಿ ಭಾನುವಾರ ವರದಿಯಾಗಿದೆ.

ಶಿಕ್ಷೆ ಗುರಿಯಾದ ವ್ಯಕ್ತಿಯನ್ನು ಉಗೇಶ್​ (44) ಎಂದು ಗುರುತಿಸಲಾಗಿದ್ದು, ತನ್ನ ಪತ್ನಿ ವಿದ್ಯಾ ಚಂದ್ರನ್​ (40)ರನ್ನು ಕಳೆದ ವರ್ಷ ಸೆಪ್ಟೆಂಬರ್​ 9ರಂದು ಚಾಕುವಿನಿಂದ ಇರಿದು ಕೊಂದಿದ್ದ. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ಕೇರಳ ಮೂಲದ ವಿದ್ಯಾ ಸಾಯುವ ದಿನದ ರಾತ್ರಿ ತನ್ನ ಮಕ್ಕಳೊಂದಿಗೆ ಓಣಂ ಹಬ್ಬ ಆಚರಿಸಲು ತೆರಳಬೇಕಿತ್ತು. ಆದರೆ, ಅಂದೇ ಪತಿಯ ಕೈಯಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದು ದುರ್ದೈವದ ಸಂಗತಿ. ಅನೇಕ ವರ್ಷಗಳಿಂದಲೂ ಉಗೇಶ್​, ವಿದ್ಯಾಗೆ ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನು ಕೊಲೆಗೆ ಕಾರಣ ತಿಳಿಸಿರುವ ಆರೋಪಿ, ತನ್ನ ಪತ್ನಿ ನನಗೆ ಮೋಸ ಮಾಡಿ ಇನ್ನೊಬ್ಬನ ಜತೆಯಲ್ಲಿ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

ಅಲ್ಲದೆ, ಪತ್ನಿ ಕೆಲಸ ಮಾಡುವ ಕಚೇರಿಯ ಮ್ಯಾನೇಜರ್​ನಿಂದ ನಾನು ಎಸ್​ಎಂಎಸ್ ಒಂದನ್ನು​ ಸ್ವೀಕರಿಸಿದೆ. ಪತ್ನಿ ಇನ್ನೊಬ್ಬನ ಜತೆ ಸಂಬಂಧ ಹೊಂದಿರುವುದಾಗಿ ಎಸ್​ಎಂಎಸ್​ ಸಂದೇಶದಲ್ಲಿತ್ತು. ಅಲ್ಲದೇ ಪತ್ನಿಯ ಮೇಲೆ ತುಂಬಾ ಅನುಮಾನವಿದ್ದುದ್ದರಿಂದ ಮ್ಯಾನೇಜರ್​ ಭೇಟಿ ಮಾಡಿ ಮಾತನಾಡಿದೆ. ಈ ವಿಚಾರ ಪತ್ನಿಗೆ ತಿಳಿದು, ನನ್ನ ಬಳಿ ಬಂದಾಗ ಕೋಪಗೊಂಡಿದ್ದಳು. ಇದು ಇಬ್ಬರ ನಡುವಿನ ಜಗಳಕ್ಕೆ ಕಾರಣವಾಯಿತು. ಜಗಳ ತಾರಕಕ್ಕೇರಿತು, ನಿಯಂತ್ರಿಸಲಾಗದೇ ಮೂರು ಬಾರಿ ಚಾಕು ಇರಿದು, ಅಲ್ಲಿಂದ ಪರಾರಿಯಾದೆ ಎಂದಿದ್ದಾನೆ.

ಆರೋಪ ಸಾಬೀತಾದ ಬಳಿಕ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ, ಆತನನ್ನು ಗಡಿಪಾರು ಮಾಡಿದೆ. ಜುಲೈ 20 ರಿಂದ 15 ದಿನದೊಳಗೆ ಮೇಲ್ಮನವಿ ಸಲ್ಲಿಸಲು ಸಹ ಕೋರ್ಟ್​ ಅನುಮತಿ ಮಾಡಿಕೊಟ್ಟಿದೆ. ಇನ್ನು ಕೋರ್ಟ್​ ತೀರ್ಪಿನ ಬಗ್ಗೆ ಮಾತನಾಡಿರುವ ವಿದ್ಯಾ, ಹಿರಿಯ ಸಹೋದರ ವಿನಯ್​ ಚಂದ್ರನ್​, ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಸರಿಯಾಯಿತು. ನಮ್ಮ ಕುಟುಂಬವು ಸಹ ಕಠಿಣ ಶಿಕ್ಷೆಯ ನಿರೀಕ್ಷೆಯಲ್ಲಿತ್ತು.

ದುಬೈನಲ್ಲಿರುವ ವಿದ್ಯಾ ಸ್ನೇಹಿತೆಯೊಬ್ಬರು ಮಾತನಾಡಿ, ಆಕೆ ತುಂಬಾ ಕಷ್ಟಪಡುತ್ತಿದ್ದಳು. ಮನೆಗೆ ಹಣ ಕಳುಹಿಸುವುದಕ್ಕಾಗಿ ಕೆಲವೊಮ್ಮೆ ಬಿಸ್ಕತ್​ ತಿಂದೇ ಜೀವನ ಸಾಗಿಸುತ್ತಿದ್ದಳು. ಆದರೆ, ಅವಳ ಬದುಕು ಇಂದು ದುರಂತ ಅಂತ್ಯವಾಗಿದೆ. ಅಲ್ಲದೆ, ಗಂಡ ನಿರಂತರವಾಗಿ ಕಿರುಕುಳ ನೀಡುತ್ತಿದ್ರೂ ಎಲ್ಲವನ್ನು ನುಂಗಿಕೊಂಡು ತನ್ನ ಹೆಣ್ಣು ಮಕ್ಕಳಿಗಾಗಿ ಕೆಲಸದ ಕಡೆ ಗಮನ ಹರಿಸಿದ್ದಳು ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ಯುಎಇನಲ್ಲಿ ಜೀವಾವಧಿ ಶಿಕ್ಷೆಯೆಂದರೆ 25 ವರ್ಷಗಳ ಕಾಲ ಜೈಲುವಾಸ ಅನುಭವಿಸಬೇಕಾಗಿದೆ.

Comments are closed.