ವಿಜಯಪುರ: ಬಸವನ ಬಾಗೇವಾಡಿ ಭಾಗದ ಕಾಂಗ್ರೆಸ್ ಮುಖಂಡನೊಬ್ಬನಿಗೆ ಯುವತಿಯೊಬ್ಬಳು ಥಳಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಸವನ ಬಾಗೇವಾಡಿ ತಾಲೂಕಿನ ಮುಳವಾಡ ತಾಂಡಾ ನಿವಾಸಿ ಹುನ್ನು ರಾಠೋಡ ಒದೆ ತಿಂದ ಆಸಾಮಿಯಾಗಿದ್ದಾನೆ. ಹುನ್ನು ರಾಠೋಡನ ಮಗಳ ಗೆಳತಿ ಲಕ್ಷ್ಮೀಬಾಯಿ ಈತನಿಗೆ ಒದೆ ಕೊಟ್ಟ ಯುವತಿಯಾಗಿದ್ದಾಳೆ.
ಕಳೆದ ವರ್ಷ ಹುನ್ನು ರಾಠೋಡ ಲಕ್ಷ್ಮೀಬಾಯಿಗೆ ಎಂಟು ಸಾವಿರ ರೂಪಾಯಿಗಳನ್ನು ಸಾಲ ಕೊಟ್ಟಿದ್ದರಂತೆ. ಆ ಹಣವನ್ನು ವಾಪಸ್ ಕೊಡು ಇಲ್ಲವಾದರೆ ನನ್ನ ಬಳಿ ಬಾ, ನನ್ನೊಂದಿಗೆ ಬೇರೆ ರೀತಿಯಲ್ಲಿ ಸಹಕರಿಸು ಎಂದು ಆಕೆಯನ್ನು ಪೀಡಿಸಿದ್ದರಂತೆ. ಈತನ ಕಿರುಕುಳಕ್ಕೆ ಬೇಸತ್ತ ಯುವತಿ ಹಣ ಕೊಡ್ತೆನೆ ಬಾ ಎಂದು ಕರೆಯಿಸಿ ತನ್ನ ಸ್ನೇಹಿತರಾದ ಕಾಶಿನಾಥ ಹಾಗೂ ಸಮೀರ್ ಶೇಖ್ ಅವರೊಂದಿಗೆ ಸೇರಿ ಒದೆ ಕೊಟ್ಟು ಕಳಿಸಿದ್ದಾಳೆ.
ಕಳೆದ ತಿಂಗಳು ವಿಜಯಪುರ ಹೊರವಲಯದಲ್ಲಿನ ಜಮೀನೊಂದರಲ್ಲಿ ಈ ಘಟನೆ ನಡೆದಿದ್ದು, ನನ್ನನ್ನು ಮಲಗು ಬಾ ಅಂತೀಯಾ ಎಂದು ಯುವತಿ ಹೊಡೆಯುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ವಿಡಿಯೋ ಲೀಕ್ ಆಗುತ್ತಿದ್ದಂತೆ ಎಚ್ಚೆತ್ತ ಹುನ್ನು ರಾಠೋಡ ಇದೇ ಜುಲೈ 7ರಂದು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ವಿಡಿಯೋದಲ್ಲಿರುವ ಮೂವರ ವಿರುದ್ಧ ಅಪಹರಣ ಹಾಗೂ ಹಲ್ಲೆಯ ಕುರಿತು ದೂರು ದಾಖಲಿಸಿದ್ದಾನೆ.
ಲಕ್ಷ್ಮೀಬಾಯಿಗೆ ಸಾಲ ಕೊಟ್ಟಿದ್ದ ಎಂಟು ಸಾವಿರ ರೂಪಾಯಿ ವಾಪಸ್ ಕೇಳಿದ್ದಕ್ಕೆ ಹೀಗೆ ಮಾಡಿದ್ದಾರೆ ಎಂದು ದೂರಿದ್ದಾನೆ. ಯುವತಿ ಒದೆ ನೀಡಿದ್ದ ವಿಡಿಯೋವನ್ನೇ ಸಾಕ್ಷಿಯಾಗಿಸಿಕೊಂಡ ಪೊಲೀಸರು ಲಕ್ಷ್ಮೀಬಾಯಿ, ಕಾಶಿನಾಥ ಹಾಗೂ ಸಮೀರ್ ನನ್ನು ಬಂಧಿಸಿದ್ದಾರೆ.
ಸಾಲ ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ರಾ? ಅಥವಾ ಯುವತಿಯನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಕ್ಕೆ ಒದೆ ಬಿದ್ದವಾ? ಎಂಬುದು ಪೊಲೀಸರ ತನಿಖೆ ಬಳಿಕ ತಿಳಿದುಬರಲಿದೆ. ಆದರೆ, ಗೂಸಾ ಕೊಟ್ಟ ತಪ್ಪಿಗೆ ಯುವತಿ ಸೇರಿ ಮೂವರು ಆರೋಪಿಗಳು ಇದೀಗ ಜೈಲು ಸೇರಿದ್ದಾರೆ.
Comments are closed.