ದುಬೈ: ಆನ್‌ಲೈನ್ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪದ ಮೇರೆಗೆ ಇಬ್ಬರು ಇನ್‌ಸ್ಟಾಗ್ರಾಮ್ ಸೆಲೆಬ್ರಿಟಿ ಸೇರಿದಂತೆ ಒಟ್ಟು 12 ಮಂದಿಯನ್ನು ಬಂಧಿಸಿರುವ ದುಬೈ ಪೊಲೀಸರು, 3,200 ಕೋಟಿ ರೂಪಾಯಿ ನಗದು, 13 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ಹಂಚಿಕೊಂಡ ವೀಡಿಯೋವೊಂದರಲ್ಲಿ ಅಧಿಕಾರಿಗಳು ಇನ್‌ಸ್ಟಾಗ್ರಾಮ್ ಸೆಲೆಬ್ರಿಟಿ ಹಶ್‌ಪಪ್ಪಿ ಎಂದೇ ಖ್ಯಾತರಾದ ರೇಮಂಡ್ ಅಬ್ಬಾಸ್ ಹಾಗು ಒಳಲೆಕನ್ ಜಾಕೋಬ್ ಅಕಾ ಸೇರಿದಂತೆ 12 ಮಂದಿಯನ್ನು ಹೇಗೆ ಬಂಧಿಸಿದರು ಎಂಬುದನ್ನು ಸವಿವಾರವಾಗಿ ವಿವರಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಎರಡು ಮಿಲಿಯನ್ಗಿಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಅಬ್ಬಾಸ್, ಆಸ್ತಿ ಹೂಡಿಕೆದಾರ ಮತ್ತು ಉದ್ಯಮಿ ಎಂದು ಬಿಂಬಿಸಿಕೊಂಡಿದ್ದ. ಈತನ ಐಷಾರಾಮಿ ಜೀವನ ಕಂಡು ಎಲ್ಲರೂ ಬೆರಗಾಗಿದ್ದರು.
ಬಂಧಿತ ಆರೋಪಿಗಳೆಲ್ಲ ನೈಜೀರಿಯಾ ಮೂಲದವರಾಗಿದ್ದು, ಪ್ರಸಿದ್ಧ ಕಂಪನಿಗಳು ಮತ್ತು ಬ್ಯಾಂಕುಗಳಿಗೆ ಹೋಲುವ ನಕಲಿ ವೆಬ್‌ಸೈಟ್‌ಗಳನ್ನು ಮಾಡಿ ಆನ್ಲೈನ್ ಮೂಲಕ ಜನರನ್ನು ವಂಚಿಸುತ್ತಿದ್ದರು.
ನಕಲಿ ವೆಬ್‌ಸೈಟ್‌ಗಳಿಗೆ ಈಮೇಲ್ ಮತ್ತು ಮೆಸೇಜ್ ಮೂಲಕ ಹಣ ಹಾಕುವಂತೆ ಪ್ರೇರೇಪಿಸಿ ಆರೋಪಿಗಳು ಜನರಿಗೆ ವಂಚಿಸುತ್ತಿದ್ದರು. ದುಬೈ ಪೊಲೀಸರಿಗೆ ಸಿಕ್ಕಿದ ಖಚಿತ ಮಾಹಿತಿಯಂತೆ ಪೋಲೀಸರ 6 ತಂಡಗಳನೂ ರಚಿಸಿ ಹಶ್‌ಪಪ್ಪಿ ಎಂದೇ ಖ್ಯಾತರಾದ ರೇಮಂಡ್ ಅಬ್ಬಾಸ್ ಹಾಗು ಒಳಲೆಕನ್ ಜಾಕೋಬ್ ಅಕಾ ಸೇರಿದಂತೆ 12 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಬಂಧಿಸುವ ವೇಳೆ 3,200 ಕೋಟಿ ರೂಪಾಯಿ ನಗದು, 13 ಐಷಾರಾಮಿ ಕಾರು, 21 ಕಂಪ್ಯೂಟರ್ ಮತ್ತು 47 ಸ್ಮಾರ್ಟ್‌ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರ ಬಳಿ 8,00,000 ಮಂದಿಯ ಈಮೇಲ್ ವಿಳಾಸ ಪತ್ತೆಯಾಗಿದ್ದು, ಅವರಿಂದ ದೋಚಿದ 3,200 ಕೋಟಿ ರೂಪಾಯಿ ನಗದು ಕೂಡ ವಶಪಡಿಸಿಕೊಂಡಿದ್ದಾರೆ.
Comments are closed.