ಅಂತರಾಷ್ಟ್ರೀಯ

ಚೀನಾದಿಂದ ಸೌದಿಗೆ ಬಂದ ಮುಸ್ಲಿಮರಿಗೆ ಈಗ ಸಂಕಟ

Pinterest LinkedIn Tumblr


ಸೌದಿ ಅರೇಬಿಯಾ: ಚೀನಾ ದೇಶದ ಶಿನ್​ಜಿಯಾಂಗ್ (Xinjiang) ಪ್ರಾಂತ್ಯದಲ್ಲಿರುವ ಊಯ್ಗೂರ್ ಮುಸ್ಲಿಮರ ಮೇಲೆ ದೌರ್ಜನ್ಯವಾಗುತ್ತಿರುವ ವಿಚಾರ ಸಾಕಷ್ಟು ಪ್ರಚಲಿತದಲ್ಲಿದೆ. ಚೀನಾ ಸರ್ಕಾರವು ಈ ಭಾಗದ ಅನೇಕ ಮುಸ್ಲಿಮರನ್ನು ಬಂಧನ ಕೇಂದ್ರಗಳಲ್ಲಿ ಇರಿಸಲಾಗಿರುವ ಆರೋಪ ಇದೆ. ಈ ವೇಳೆ, ಚೀನಾದಿಂದ ಸೌದಿ ಅರೇಬಿಯಾಗೆ ಹೊಸ ಬದುಕು ಅರಸಿ ಬಂದಿದ್ದ ಅನೇಕ ಊಯ್ಗೂರ್ ಮುಸ್ಲಿಮರ ಬದುಕು ಈಗ ಅತಂತ್ರ ಸ್ಥಿತಿ ತಲುಪುವ ಸಾಧ್ಯತೆ ಕಾಣುತ್ತಿದೆ. ಮುಸ್ಲಿಮರ ಪಾಲಿನ ಧರ್ಮಶ್ರದ್ಧಾ ಕೇಂದ್ರವೆನಿಸಿರುವ ಸೌದಿ ಅರೇಬಿಯಾ ದೇಶದೊಂದಿಗೆ ಚೀನಾ ದೇಶದ ರಾಜತಾಂತ್ರಿಕ ಸಂಬಂಧ ಗಾಢಗೊಳ್ಳುತ್ತಿರುವುದು ಊಯ್ಗುರ್ ವಲಸಿಗ ಮುಸ್ಲಿಮರಿಗೆ ದಾರಿಗಳು ಬಹುತೇಕ ಮುಚ್ಚಿದಂತೆ ತೋರುತ್ತಿವೆ.

ಸೌದಿ ಅರೇಬಿಯಾದಲ್ಲಿ ಸುಮಾರು ಸಾವಿರದಷ್ಟು ಸಂಖ್ಯೆಯಲ್ಲಿ ಊಯ್ಗೂರ್ ಮುಸ್ಲಿಮರು ಇರುವ ಅಂದಾಜು ಇದೆ. ಓದಲು, ವ್ಯಾಪಾರ ಮಾಡಲು ಮತ್ತು ಆಶ್ರಯ ಅರಸಿ ಬಂದವರೇ ಹೆಚ್ಚು. ಊಯ್ಗೂರ್ ಮುಸ್ಲಿಮರು ಭಯೋತ್ಪಾದನೆಯಲ್ಲಿ ತೊಡಗುತ್ತಾರೆಂಬ ಕಾರಣವೊಡ್ಡಿ ಚೀನಾ ಸರ್ಕಾರ ಬಹಳ ಬಿಗಿಯಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಉಗ್ರವಾದದ ಸ್ವಲ್ಪ ಸುಳಿವು ಸಿಕ್ಕರೂ ಡೆಟೆನ್ಷನ್ ಸೆಂಟರ್​ನಲ್ಲಿಡಲಾಗುತ್ತಿದೆ. ದೇಶದಿಂದ ಹೊರಗೆ ಹೋದ, ಅದರಲ್ಲೂ ಇಸ್ಲಾಮೀ ರಾಷ್ಟ್ರವೊಂದಕ್ಕೆ ಹೋದ ಊಯ್ಗೂರ್​ಗಳನ್ನು ವಾಪಸ್ ಕರೆಸಿಕೊಂಡು ಬಂಧನ ಕೇಂದ್ರದಲ್ಲಿಡುವುದು ಚೀನಾದ ಕಮ್ಯೂನಿಸ್ಟ್ ಸರ್ಕಾರದ ಯೋಜನೆಯಾಗಿದೆ.

ಅದರಂತೆ, ಸೌದಿ ಅರೇಬಿಯಾದಲ್ಲಿರುವ ಊಯ್ಗೂರ್ ಮುಸ್ಲಿಮರನ್ನು ವಾಪಸ್ ಕರೆಸಿ ಬಂಧನದಲ್ಲಿಡಲು ಚೀನಾ ಮಾಸ್ಟರ್ ಪ್ಲಾನ್ ಮಾಡಿದೆ. ಅದರಂತೆ, ಸೌದಿಯಲ್ಲಿರುವ ಊಯ್ಗೂರ್ ಮುಸ್ಲಿಮರ ಚೀನೀ ಪಾಸ್​ಪೋರ್ಟನ್ನು ಎರಡು ವರ್ಷದಿಂದ ನವೀಕರಿಸಲಾಗುತ್ತಿಲ್ಲ. ಇಲ್ಲಿಯ ಬಹುತೇಕ ಊಯ್ಗೂರರ ಪಾಸ್​ಪೋರ್ಟ್ ಅವಧಿಮೀರಿ ಹೋಗಿದೆ. ಇವರಿಗೆ ಈಗ ಒನ್-ವೇ ಟ್ರಾವೆಲ್ ಡಾಕ್ಯುಮೆಂಟ್ ಮಾತ್ರ ನೀಡಲಾಗುತ್ತಿದೆ. ಅಂದರೆ ಇವರು ಚೀನಾಗೆ ಟ್ರಿಪ್ ಹೋಗಬಹುದಷ್ಟೇ. ವಾಪಸ್ ಸೌದಿಗೆ ಬರಲು ಸಾಧ್ಯವಿಲ್ಲ. ಚೀನಾಗೆ ಹೋದರೆ ತಮ್ಮನ್ನು ಬಂಧನ ಕೇಂದ್ರಗಳಲ್ಲಿಟ್ಟು ಶಿಕ್ಷಿಸುತ್ತಾರೆ ಎಂಬ ಆತಂಕ ಈ ಚೀನೀ ಮುಸ್ಲಿಮರಿಗೆ ಎದುರಾಗಿದೆ. ಪಾಸ್​ಪೋರ್ಟ್ ಅವಧಿ ಮುಗಿದಿರುವುದರಿಂದ ಇವರು ಸೌದಿಯಲ್ಲೂ ಇರಲಾಗುತ್ತಿಲ್ಲ. ಚೀನಾಗೆ ಹೋದರೆ ಪಂಜರಕ್ಕೆ ಸಿಲುಕಿಬಿಡುವ ಭಯ. ಸೌದಿ ಈಗಾಗಲೇ ಇಂಥ ವಲಸಿಗರನ್ನು ದೇಶದಿಂದ ಹೊರಕಳುಹಿಸುವ ಕೆಲಸ ಮಾಡುತ್ತಿದೆ. ಒಟ್ಟಿನಲ್ಲಿ ಅತ್ತ ಝರಿ, ಇತ್ತ ಪುಲಿ ಎಂಬ ಸ್ಥಿತಿ ಸೌದಿಯಲ್ಲಿರುವ ಚೀನೀ ಮುಸ್ಲಿಮರ ಪರಿಸ್ಥಿತಿ.

ಚೀನಾದ ಶಿನ್​ಜಿಯಾಂಗ್ ಪ್ರಾಂತ್ಯದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಬಂಧನ ಕೇಂದ್ರಗಳಲ್ಲಿದ್ದಾರೆ. ಇಲ್ಲಿನ ಮುಸ್ಲಿಮರು ಪ್ರತ್ಯೇಕತಾ ಹೋರಾಟ ಮಾಡುತ್ತಿದ್ದಾರೆಂದು ದೂರುವ ಚೀನಾ ಸರ್ಕಾರ ಉಗ್ರವಾದವನ್ನು ಚಿವುಟಿ ಹಾಕುತ್ತಿರುವುದಾಗಿ ವಾದಿಸುತ್ತದೆ. ಅರಬ್ ನಾಡಿನ ಇಸ್ಲಾಮೀ ಸಂಸ್ಕೃತಿಯ ಪ್ರಭಾವದಿಂದ ಚೀನಾದಲ್ಲಿ ಇವರು ಉಗ್ರವಾದ ಮಾಡುತ್ತಾರೆ ಎಂಬುದ ಚೀನೀ ಆಂಬೋಣ.

“ಅರೇಬಿಯಾ ಭಾಷೆಯಲ್ಲಿ ಶುಭ ಕೋರುವುದು; ಸ್ವತಂತ್ರವಾಗಿ ಕುರಾನ್ ಅಧ್ಯಯನ ಮಾಡುವುದು; ಮಕ್ಕಳಿಗೆ ಮೊಹಮ್ಮದ್ ಅಥವಾ ಸದ್ದಾಂ ಎಂದು ಹೆಸರಿಡುವುದು ಇವುಗಳೆಲ್ಲವನ್ನೂ ಉಗ್ರವಾದಕ್ಕೆ ಆರಂಭಿಕ ಕುರುಹು ಎಂದು ಪರಿಗಣಿಸಲಾಗುತ್ತದೆ. ಆ ರೀತಿ ಮಾಡುವವರನ್ನು ಬಂಧನ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ” ಎಂದು ಅಮೆರಿಕದ ಕೊಲೊರಾಡೋ ವಿಶ್ವವಿದ್ಯಾಲಯದ ಸಂಶೋಧಕ ಡಾರೆನ್ ಬೈಲರ್ ಎಂಬುವವರು ವಿವರ ನೀಡಿದ್ಧಾರೆ.ಚೀನಾ ಸರ್ಕಾರವು ದೇಶದಿಂದ ಹೊರಗೆ ಇಸ್ಲಾಮೀ ರಾಷ್ಟ್ರಗಳಿಗೆ ಹೋದ ತನ್ನ ಮುಸ್ಲಿಮರೆಲ್ಲರನ್ನೂ ವಾಪಸ್ ಕರೆ ತಂದು ಬಂಧನ ಕೇಂದ್ರದಲ್ಲಿಡಲು ಚಿತಾವಣೆ ಮಾಡುತ್ತಿದೆ. ಸೌದಿ ಅರೇಬಿಯಾ, ಈಜಿಪ್ಟ್, ಥಾಯ್ಲೆಂಡ್ ದೇಶಗಳು ತಮ್ಮಲ್ಲಿರುವ ಊಯ್ಗೂರ್ ಮುಸ್ಲಿಮರನ್ನು ವಾಪಸ್ ಕಳುಹಿಸಲು ಪ್ರಾರಂಭಿಸಿವೆ. 50ಕ್ಕೂ ಹೆಚ್ಚು ಮುಸ್ಲಿಮ್ ರಾಷ್ಟ್ರಗಳಿದ್ದರೂ ಊಯ್ಗೂರ್ ಮುಸ್ಲಿಮರು ಅತಂತ್ರ ಸ್ಥಿತಿ ತಲುಪಿದ್ಧಾರೆ. ವಿಶ್ವದ ಪ್ರಮುಖ ಆರ್ಥಿಕ, ಮಿಲಿಟರಿ ಮತ್ತು ರಾಜಕೀಯ ಶಕ್ತಿಯಾಗಿರುವ ಚೀನಾ ದೇಶವನ್ನು ಎದುರುಹಾಕಿಕೊಳ್ಳಲು ಯಾವೊಂದು ಮುಸ್ಲಿಮ್ ರಾಷ್ಟ್ರಗಳಿಗೂ ಸಾಧ್ಯವಿಲ್ಲದಂತಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Comments are closed.