ಗಲ್ಫ್

ಇಂಧನ ಸ್ಥಾವರಗಳ ಮೇಲೆ ದಾಳಿಯಾದ ಬೆನ್ನಲ್ಲೇ ಸೌದಿಗೆ ಅತ್ಯಾಧುನಿಕ ಕ್ಷಿಪಣಿಗಳ ಜೊತೆ ತನ್ನ ಸೇನೆಯನ್ನು ರವಾನಿಸಿದ ಅಮೆರಿಕ

Pinterest LinkedIn Tumblr

ವಾಷಿಂಗ್ಟನ್: ಸೌದಿ ಅರೇಬಿಯಾದಲ್ಲಿ ಇಂಧನ ಸ್ಥಾವರಗಳ ಮೇಲೆ ದಾಳಿಯಾದ ಬೆನ್ನಲ್ಲೇ ಇದೀಗ ಅಮೆರಿಕ ತನ್ನ ಬೃಹತ್ ಸೇನೆಯನ್ನು ಸೌದಿಗೆ ರವಾನಿಸುತ್ತಿದ್ದು, ಅಷ್ಟು ಮಾತ್ರವಲ್ಲದೇ ಸೇನೆಯೊಂದಿಗೆ ತನ್ನ ಅತ್ಯಾಧುನಿಕ ಕ್ಷಿಪಣಿಗಳನ್ನು ಕೂಡ ರವಾನೆ ಮಾಡುತ್ತಿದೆ ಎನ್ನಲಾಗಿದೆ.

ಈ ಬಗ್ಗೆ ಅಂತಾರಾಷ್ಟ್ರೀಯ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದ್ದು, ವರದಿಯಲ್ಲಿರುವಂತೆ ಪೆಂಟಗನ್ ತನ್ನ 200ಕ್ಕೂ ಹೆಚ್ಚು ಸೇನಾ ತುಕಡಿಗಳನ್ನು ಸೌದಿ ಅರೇಬಿಯಾಗೆ ರವಾನಿಸಿದ್ದು, ಸೇನೆಯೊಂದಿಗೆ ಕ್ಷಿಪಣಿಗಳೂ ಸೇರಿದಂತೆ ಹಲವು ಅತ್ಯಾಧುನಿಕ ಪರಿಕರಗಳನ್ನು ರವಾನೆ ಮಾಡಿದೆ ಎನ್ನಲಾಗಿದೆ.

ಈ ಬಗ್ಗೆ ಪೆಂಟಗನ್ ಕೂಡ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದು, ತನ್ನ 200ಕ್ಕೂ ಹೆಚ್ಚು ಸೇನಾ ತುಕಡಿಯನ್ನು ಮತ್ತು ಏರ್ ಡಿಫೆನ್ಸ್ ಸಿಸ್ಟಮ್ ಗಳನ್ನು, ನಾಲ್ಕು ಸೆಂಟಿನೆಲ್ ರಾಡಾರ್ ವ್ಯವಸ್ಥೆಯನ್ನು ಕೂಡ ಸೌದಿಗೆ ರವಾನೆ ಮಾಡಿರುವುದಾಗಿ ಹೇಳಿದೆ.

ತನ್ನ ಈ ನಿಲುವಿಗೆ ಇತ್ತೀಚೆಗೆ ಸೌದಿಯಲ್ಲಿನ ತೈಲ ಸ್ಥಾವರಗಳ ಮೇಲಿನ ದಾಳಿಯೇ ಕಾರಣ ಎಂದು ಪೆಂಟಗನ್ ಸ್ಪಷ್ಟನೆ ನೀಡಿದ್ದು, ಪೆಂಟಗನ್ ನಿಲುವಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಅನುಮೋದನೆ ನೀಡಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಪೂರ್ವ ಸೌದಿ ಅರೇಬಿಯಾದ ತೈಲ ಉತ್ಪಾದನಾ ಘಟಕಗಳ ಮೇಲೆ ಡ್ರೋನ್ ದಾಳಿ ನಡೆಸಿ ತೈಲ ಸ್ಥಾವರಗಳಿಗೆ ಹಾನಿ ಮಾಡಲಾಗಿತ್ತು. ಈ ಕೃತ್ಯದ ಹಿಂದೆ ಇರಾನ್ ಕೈವಾಡವಿದೆ ಎಂದು ಅಮೆರಿಕ ದೂಷಿಸಿತ್ತಾದರೂ, ಈ ಆರೋಪವನ್ನು ಇರಾನ್ ನಿರಾಕರಿಸಿತ್ತು.

Comments are closed.