ಅಂತರಾಷ್ಟ್ರೀಯ

ಮಾವಿನ ಹಣ್ಣು ಕದ್ದು ತಿಂದ ಭಾರತೀಯ; ವಿಚಾರಣೆ ಮುಂದೂಡಿದ ದುಬೈ ಕೋರ್ಟ್​

Pinterest LinkedIn Tumblr


ದುಬೈ (ಸೆ. 13): ದುಬೈ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯನೊಬ್ಬ 2 ವರ್ಷಗಳ ಹಿಂದೆ ಪ್ರಯಾಣಿಕರ ಬ್ಯಾಗ್​ನಿಂದ 2 ಮಾವಿನ ಹಣ್ಣುಗಳನ್ನುಕದ್ದು ತಿಂದಿದ್ದ. ಹಣ್ಣು ಕದ್ದ ಆರೋಪದ ಮೇಲೆ ಭಾರತೀಯ ಸಿಬ್ಬಂದಿ ಮೇಲೆ ದೂರು ದಾಖಲಾಗಿತ್ತು. ಇಂದು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿದೆ.

27 ವರ್ಷದ ಭಾರತೀಯ ಯುವಕ ದುಬೈ ಏರ್​ಪೋರ್ಟ್​ನಲ್ಲಿ ಸಿಬ್ಬಂದಿಯಾಗಿ ಸೇರಿಕೊಂಡಿದ್ದ. 2017ರಲ್ಲಿ ಆತ ಪ್ರಯಾಣಿಕರೊಬ್ಬರ ಬ್ಯಾಗ್​ನಿಂದ 2 ಮಾವಿನ ಹಣ್ಣುಗಳನ್ನು ತಿಂದಿದ್ದ ವಿಷಯ ಹೊರಬಿದ್ದಿತ್ತು. ಸುಮಾರು 116 ರೂ. ಮೌಲ್ಯದ 2 ಮಾವಿನ ಹಣ್ಣುಗಳನ್ನು ಕದ್ದು ತಿಂದಿದ್ದ ಆ ಸಿಬ್ಬಂದಿ ವಿಚಾರಣೆ ನಡೆಸಲಾಗಿದೆ.

ಈ ಬಗ್ಗೆ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿರುವ ಯುವಕ, ‘ನನಗೆ ಆಗ ಬಹಳ ಬಾಯಾರಿಕೆಯಾಗಿತ್ತು. ನೀರಿನ ಬಾಟಲ್​ಗಾಗಿ ಹುಡುಕುತ್ತಿದ್ದಾಗ ಹಣ್ಣಿನ ಬಾಗ್​ ಕಣ್ಣಿಗೆ ಬಿದ್ದಿತು. ಅದರಲ್ಲಿದ್ದ 2 ಮಾವಿನ ಹಣ್ಣುಗಳನ್ನು ತೆಗೆದುಕೊಂಡು ತಿಂದಿದ್ದು ನಿಜ’ ಎಂದು ಹೇಳಿದ್ದ. ಕಳೆದ ವರ್ಷ ಏಪ್ರಿಲ್​ನಲ್ಲಿ ಪೊಲೀಸರು ಆತನನ್ನು ವಿಚಾರಣೆ ನಡೆಸಿದ್ದರು. ಬಳಿಕ ಆತನನ್ನು ಬಂಧಿಸಿ, ಹಣ್ಣುಗಳನ್ನು ಕದ್ದು ತಿಂದ ಆರೋಪದಲ್ಲಿ ಕೇಸ್ ಹಾಕಲಾಗಿತ್ತು.

ವಿಮಾನದ ಸಿಸಿಟಿವಿಯಲ್ಲಿ ಆತನ ಹಣ್ಣುಗಳನ್ನು ಕದ್ದು ತಿಂದ ದೃಶ್ಯ ಸೆರೆಯಾಗಿತ್ತು. ಆದರೆ, ಆತನನ್ನು ಇದೀಗ ಕೋರ್ಟ್​ಗೆ ಯಾಕೆ ಹಾಜರುಪಡಿಸಲಾಯಿತು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಭದ್ರತಾ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸುತ್ತಿದ್ದಾಗ ಈ ಯುವಕ ಭಾರತಕ್ಕೆ ಪ್ರಯಾಣಿಸುತ್ತಿದ್ದವರ ಬ್ಯಾಗ್​ ಓಪನ್ ಮಾಡಿ ಹಣ್ಣುಗಳನ್ನು ತೆಗೆದುಕೊಂಡಿದ್ದು ಗಮನಕ್ಕೆ ಬಂದಿತ್ತು.

ಕದ್ದು ಹಣ್ಣು ತಿಂದ ಏರ್ಪೋರ್ಟ್​ ಸಿಬ್ಬಂದಿಗೆ ಈ ಪ್ರಕರಣದಲ್ಲಿ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಈ ಪ್ರಕರಣದ ವಿಚಾರಣೆಯನ್ನು ಸೆ. 23ಕ್ಕೆ ಮುಂದೂಡಲಾಗಿದೆ. ​

Comments are closed.