
Photo:Ashok Belman
ದುಬೈ: ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ‘ಯಾನ’ ಕನ್ನಡ ಸಿನೆಮಾ ಶುಕ್ರವಾರ ದುಬೈ, ಮಸ್ಕತ್ ಮತ್ತು ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಬಿಡುಗಡೆಯಾಗಿದ್ದು, ಹೌಸ್ ಫುಲ್ ಪ್ರದರ್ಶನ ಕಂಡಿದೆ.
ACME ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ನಿರ್ಮಾಪಕರಾಗಿರುವ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಹಾಗು ‘ಐ’ ಎಂಟರ್ಟೈನ್ಮೆಂಟ್’ನ ವೈಭವಿ, ವೈನಿಧಿ ಮತ್ತು ವೈಸಿರಿ ನಿರ್ಮಿಸಿರುವ “ಯಾನ” ಕನ್ನಡ ಸಿನೆಮಾ ನೋಡಲು ಕಿಕ್ಕಿರಿದು ಜನ ಸೇರಿದ್ದು, ಸಿನೆಮಾ ನೋಡಿದ ಜನ ಉತ್ತಮ ಪ್ರತಿಕ್ರಿಯೆ, ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.













ಸಿನೆಮಾ ನೋಡಿದ ಮಂದಿ, ಸಿನೆಮಾವು ಇಂದಿನ ಸಮಾಜಕ್ಕೆ, ಅದರಲ್ಲಿಯೂ ಹುಡುಗಿಯರಿಗೆ ಬದುಕುವ ಛಲ, ಸಮಸ್ಯೆಗಳನ್ನು ಎದುರಿಸುವ ಧೈರ್ಯ, ಮುನ್ನುಗ್ಗುವ ಹಠವನ್ನು ಒಂದೊಳ್ಳೆಯ ಸಂದೇಶದ ಮೂಲಕ ನಿರ್ಮಾಪಕರಾದ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಕಟ್ಟಿಕೊಟ್ಟಿರುವುದಕ್ಕೆ ಅಪಾರ ಮೆಚ್ಚುಗೆ, ಧನ್ಯತಾಭಾವವನ್ನು ವ್ಯಕ್ತಪಡಿಸಿದರು.



















ದುಬೈಯ ಹಯ್ಯತ್ ರೀಜೆನ್ಸಿಯ ಗ್ಯಾಲರಿಯಾ ಸಿನಿಮಾ ಮಂದಿರದಲ್ಲಿ ಆಗಸ್ಟ್ 2 ರಂದು ಸಂಜೆ 4 ಗಂಟೆಗೆ ಚಿತ್ರ ಪ್ರದರ್ಶನ ಕಂಡರೆ, ಒಮಾನಿನ ಮಸ್ಕತ್ತಿನ ಸಿಬಿಡಿ ರುವಿಯ ಸ್ಟಾರ್ ಸಿನೆಮಾ ಮಂದಿರದಲ್ಲಿ ಸಂಜೆ 5.30 ಹಾಗು ರಾತ್ರಿ 8.30 ಕ್ಕೆ ಪ್ರದರ್ಶನವಾಗಿದ್ದು, ಕಿಕ್ಕಿರಿದ ಜನರಿಂದಾಗಿ ಪ್ರದರ್ಶನ ಹೌಸ್ ಫುಲ್ ಆಗಿತ್ತು. ಮಸ್ಕತ್ತಿನಲ್ಲಿ ಮುಂದಿನ ಒಂದು ವಾರಗಳವರೆಗೆ ಚಿತ್ರ ಪ್ರದರ್ಶನವಾಗಲಿದೆ.







ಮತ್ತೊಂದೆಡೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ SF BAY AREA cine loungeನಲ್ಲಿ ಶುಕ್ರವಾರ ರಾತ್ರಿ 7.30ಕ್ಕೆ ಬಿಡುಗಡೆಯಾಗಿದ್ದು, ಕನ್ನಡಿಗರು ಸಿನೆಮಾ ನೋಡಿ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಇಲ್ಲಿ ಕೂಡ ಪ್ರದರ್ಶನ ಹೌಸ್ ಫುಲ್ ಆಗಿತ್ತು. ಆಗಸ್ಟ್ 4 ರ ವರಗೆ ಚಿತ್ರ ಪ್ರದರ್ಶನ ಮುಂದುವರಿಯಲಿದೆ.



ದುಬೈಯ ಹಯ್ಯತ್ ರೀಜೆನ್ಸಿಯ ಗ್ಯಾಲರಿಯಾ ಸಿನಿಮಾ ಮಂದಿರದಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ ಸಿನೆಮಾ ಬಿಡುಗಡೆಯಾಗಿದ್ದು, ನಿರ್ಮಾಪಕರಾದ ಹರೀಶ್ ಶೇರಿಗಾರ್ ಮಾತನಾಡಿ, ಇದೆ ಕುಟುಂಬವೇ ಒಟ್ಟಿಗೆ ಕೂತು ನೋಡುವಂಥ ಸಿನೆಮಾ ಇದಾಗಿದ್ದು, ಸಮಾಜಕ್ಕೆ, ಕುಟುಂಬಕ್ಕೆ ಒಂದೊಳ್ಳೆಯ ಸಂದೇಶ ಈ ಸಿನೆಮಾ ಮೂಲಕ ನೀಡಲಾಗಿದೆ. ಸಿನೆಮಾ ನೋಡಿದ ಜನ ‘ಯಾನ’ವನ್ನು ಮೆಚ್ಚಿದ್ದಾರೆ. ಈ ಹಿಂದೆ ತಾನು ನಿರ್ಮಿಸಿದ್ದ ‘ಮಾರ್ಚ್-22 ‘ ಸಿನೆಮಾ ಕೂಡ ಹಿಟ್ ಆಗಿತ್ತು. ಅದರಲ್ಲಿಯೂ ಸಮಾಜಕ್ಕೆ ಸೌಹಾರ್ದತೆಯ ಸಂದೇಶವನ್ನು ನೀಡಲಾಗಿತ್ತು. ಈಗ ‘ಯಾನ’ದ ಪಯಣವನ್ನು ನೋಡಿದ ಮಾಧ್ಯಮಗಳು ಭಾರೀ ಮೆಚ್ಚುಗೆ, ಪ್ರತಿಕ್ರಿಯೆಯನ್ನೇ ನೀಡಿವೆ. ಇದು ‘ಯಾನ’ಕ್ಕೆ ಸಿಕ್ಕ ಗೆಲುವಾಗಿದೆ ಎಂದರು. ಈ ವೇಳೆ ಹರೀಶ್ ಶೇರಿಗಾರ್ ಅವರ ಧರ್ಮಪತ್ನಿ, ನಿರ್ಮಾಪಕಿಯೂ ಆಗಿರುವ ಶರ್ಮಿಳಾ ಶೇರಿಗಾರ್ ಉಪಸ್ಥಿತರಿದ್ದರು.
ಇನ್ನೊಂದೆಡೆ ಮಸ್ಕತ್ತಿನಲ್ಲಿ ನಟ ಜೈಜಗದೀಶ್ ಸಮ್ಮುಖದಲ್ಲಿ ಸಿನೆಮಾ ಬಿಡುಗಡೆಗೊಂಡಿತು. ಅಲ್ಲಿಯೂ ಜನ ಚಿತ್ರದ ಬಗ್ಗೆ ತುಂಬು ಮನಸ್ಸಿನಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಜಯ ಲಕ್ಷ್ಮಿ ಸಿಂಗ್ ಚಿತ್ರ ಕಥೆ ಬರೆದು ನಿರ್ದೇಶಿಸಿರುವ ಯಾನ ಚಿತ್ರ ಕರ್ನಾಟಕದಲ್ಲಿ ಮನೆಮನೆಗಳಲ್ಲಿ ಸುದ್ದಿ ಮಾಡಿದೆ. ಅಂತ ಒಳ್ಳೆಯ ಕಥೆಯನ್ನಿಟ್ಟುಕೊಂಡು ಈ ಸಿನೆಮಾ ಮಾಡಲಾಗಿದ್ದು, ನಟ ಜೈಜಗದೀಶ್ ಹಾಗು ವಿಜಯ ಲಕ್ಷ್ಮಿ ಸಿಂಗ್ ತಮ್ಮ ಪುತ್ರಿಯರಾದ ವೈಭವಿ, ವೈನಿಧಿ ಮತ್ತು ವೈಸಿರಿಯನ್ನು ಈ ಸಿನೆಮಾದ ಮೂಲಕ ನಾಯಕಿಯರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಅವರಿಗೆ ನಾಯಕರಾಗಿ ಸುಮುಖ, ಚಕ್ರವರ್ತಿ ಹಾಗೂ ಅಭಿಷೇಕ್ ನಟಿಸಿದ್ದಾರೆ.
ವೈಭವಿ, ವೈನಿಧಿ ಮತ್ತು ವೈಸಿರಿಯ ನಟನೆ ನೋಡಿದ ಜನ ಫಿದಾ ಆಗಿದ್ದು, ನಾಯಕರಾದ ಸುಮುಖ, ಚಕ್ರವರ್ತಿ ಹಾಗೂ ಅಭಿಷೇಕ್ ನಟನೆಗೂ ಬಹುಪರಾಕ್ ಅಂದಿದ್ದಾರೆ.
ಇನ್ನು ಚಿತ್ರದ ಪ್ರಮುಖ ಪಾತ್ರದಲ್ಲಿ ಅನಂತ್ ನಾಗ್, ಸುಹಾಸಿನಿ, ಸಾಧುಕೋಕಿಲ, ಚಿಕ್ಕಣ್ಣ, ರಂಗಾಯಣ ರಘು, ಓಂ ಪ್ರಕಾಶ್ ರಾವ್, ರವಿಶಂಕರ್, ಹುಚ್ಚ ವೆಂಕಟ್, ಗಡ್ದಪ್ಪ ನಟನೆಯನ್ನು ಮೆಚ್ಚಿದ್ದಾರೆ.
ಇಡೀ ಸಿನೆಮಾ ಕಥೆ ಮೂವರು ಹುಡುಗಿಯರ ಸುತ್ತ ತಿರುಗುತ್ತೆ. ಒಬೊಬ್ಬರು ಒಂದೊಂದು ದಾರಿ, ದಿಕ್ಕು, ಹಿನ್ನೆಲೆಯಿಂದ ಬಂದವರು. ಅವರೆಲ್ಲರಿಗೂ ವೇದಿಕೆಯಾಗುವುದು ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜು. ಒಬ್ಬಳದ್ದು ಭಯ, ಭಕ್ತಿ ಮತ್ತು ಶಾಂತ ಸ್ವಭಾವ, ಮತ್ತೊಬ್ಬಳದು ಬಿಂದಾಸ್ ಲೈಫ್. ಇನ್ನೊಬ್ಬಳದ್ದು ತಾನು ತಾನಂತೆಯೇ ಸ್ವತಂತ್ರ್ಯವಾಗಿ ಬದುಕಬೇಕು ಎಂಬುದು. ಹಾಗೆ ಈ ಮೂವರಿಗೂ ಒಂದು ಗೋಲು ಇದೆ. ಸಂಗೀತ, ಆರ್ಕಿಟೆಕ್ಟ್, ಲೀಡರ್ ಆಗಬೇಕು ಎಂಬುದು. ಈ ಗೋಲು ಮುಟ್ಟುವ ದಾರಿಯಲ್ಲಿ ಪ್ರೀತಿ- ಪ್ರೇಮ, ಸಂಭ್ರಮ, ಜಗಳ, ಎಮೋಷನ್, ಕಣ್ಣೀರು ಎಲ್ಲವೂ ಬಂದು ಹೋಗುತ್ತದೆ. ಈ ಹೊತ್ತಿಗೆ ಈ ಮೂವರ ಬದುಕು ಮತ್ತೊಂದು ದಿಕ್ಕಿಗೆ ತಿರುಗುತ್ತದೆ. ಜೀವನದಲ್ಲಿ ಈ ಮೂವರಿಗೂ ಎದುರಾಗುವ ಸಮಸ್ಯೆ ಅವರನ್ನು ಹೊಸ ಬದುಕು, ಪಯಣದತ್ತ ಮುಖಮಾಡುವಂತೆ ಮಾಡುತ್ತದೆ. ಒಂದು ದೀರ್ಘ ಪಯಣ, ನೂರು ವರ್ಷ ಬದುಕಿನ ಆಯಸ್ಸು ಹೆಚ್ಚಿಸುತ್ತದೆ ಎನ್ನುವ ಸತ್ಯ ಕಂಡುಕೊಳ್ಳುತ್ತಾರೆ. ಹಾಗೆ ಹೊಸ ‘ಯಾನ’ ಶುರು ಮಾಡುತ್ತಾರೆ, ಅದು ಹೇಗೆ ಕೊನೆಗೊಳ್ಳುತ್ತೆ…ಅವರಲ್ಲಿ ಬದುಕುವ ಆತ್ಮಸ್ಥೈರ್ಯವನ್ನು ಹೇಗೆ ಮೂಡಿಸುತ್ತೆ ಎಂಬುದೇ ಕಥೆ. ಇದು ಮಹಿಳಾ ಪ್ರಧಾನ ಸಿನಿಮಾ. ಹಾಗಂತ ನೋವು, ವ್ಯಥೆಗಳನ್ನು ಹೇಳಿಕೊಳ್ಳುವ ಚಿತ್ರವಲ್ಲ. ಪ್ರಸ್ತುತ ತಲೆಮಾರಿನ ಹುಡುಗ- ಹುಡುಗಿಯರ ಬದುಕು, ತವಕ, ತಲ್ಲಣಗಳನ್ನು ತೆರೆದಿಡುವ ಹೊಸ ಪ್ರಯಣ. ಅದೇ ‘ಯಾನ’ದ ಮುಖ್ಯ ಕೇಂದ್ರಬಿಂದು.
ಜೋಶ್ವಾ ಶ್ರೀಧರ್ ಸಂಗೀತ ಸಂಯೋಜಿಸಿರುವ ಹಾಡುಗಳು ಗುನುಗುವಂತಿವೆ. ಪ್ರತಿ ದೃಶ್ಯವನ್ನೂ ರಂಗುರಂಗಾಗಿ ಕಟ್ಟಿಕೊಟ್ಟಿದ್ದಾರೆ ಛಾಯಾಗ್ರಾಹಕ ಕರಮ್ ಚಾವ್ಲಾ. ಇಡೀ ಚಿತ್ರವೂ ಕುಟುಂಬ ಸಮೇತವಾಗಿ ನೋಡುವಂತಿದೆ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡುವಂತಿದೆ.
Comments are closed.