ಅಂತರಾಷ್ಟ್ರೀಯ

ದುಬೈ ಬಸ್‌ ಅವಘಡ :ಇಂದು 12 ಭಾರತೀಯರ ಪಾರ್ಥಿವ ಶರೀರ ಭಾರತಕ್ಕೆ

Pinterest LinkedIn Tumblr


ದುಬೈ : ದುಬೈಯಲ್ಲಿ ನಿನ್ನೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ 12 ಭಾರತೀಯರ ಪಾರ್ಥಿವ ಶರೀರಗಳನ್ನು ಭಾರತಕ್ಕೆ ಕಳುಹಿಸುವ ದಿಶೆಯಲ್ಲಿ ಅಗತ್ಯವಿರುವ ವಿಧಿ ವಿಜ್ಞಾನ ಮತ್ತು ದಾಖಲೆ ಪತ್ರ ರೂಪಣೆ ಪ್ರಕ್ರಿಯೆಯನ್ನು ಭಾರತೀಯ ಕಾನ್ಸುಲೇಟ್‌ ತ್ವರಿತಗತಿಯಲ್ಲಿ ಕೈಗೊಂಡಿದೆ.

ಒಟ್ಟು 31 ಪ್ರಯಾಣಿಕರಿದ್ದ ನಿನ್ನೆಯ ಬಸ್‌ ಅವಘಡದಲ್ಲಿ 17 ಮಂದಿ ಮೃತಪಟ್ಟಿದ್ದು ಇತರ ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಬಸ್ಸಿನಲ್ಲಿದ್ದವರ ಪೈಕಿ ಹೆಚ್ಚಿನವರು ಈದ್‌ ರಜೆಯಲ್ಲಿ ಓಮನ್‌ ರಾಜಧಾನಿ ಮಸ್ಕತ್‌ ನಿಂದ ದುಬೈಗೆ ಬರುತ್ತಿದ್ದರು.

12 ಭಾರತೀಯರ ಪಾರ್ಥಿವ ಶರೀರಗಳ ಪೈಕಿ ಹನ್ನೊಂದಕ್ಕೆ ಫೊರೆನ್ಸಿಕ್‌ ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಸಿಕ್ಕಿದೆ; ಒಂದು ಪ್ರಕರಣದಲ್ಲಿ ಫೊರೆನ್ಸಿಕ್‌ ವರದಿ ಬಾಕಿ ಇದೆ ಎಂದು ದುಬೈಯಲ್ಲಿನ ಭಾರತೀಯ ಕಾನ್ಸುಲ್‌ ಜನರಲ್‌ ವಿಪುಲ್‌ ಟ್ವೀಟ್‌ ಮಾಡಿದ್ದಾರೆ.

ಹನ್ನೆರಡನೇ ಪ್ರಕರಣದ ಕ್ಲಿಯರೆನ್ಸ್‌ ದೊರಕಿದ ತತ್‌ಕ್ಷಣ ಎಲ್ಲ ಪಾರ್ಥಿವ ಶರೀರಗಳ ಸಂರಕ್ಷಣೆ ಪ್ರಕ್ರಿಯೆಯನ್ನು ಕೈಗೊಂಡು ಆ ಬಳಿಕ ಶವಗಳನ್ನು ಭಾರತಕ್ಕೆ ಇಂದು ಶನಿವಾರ ಅಥವಾ ನಾಳೆ ಭಾನುವಾರ ದೊಳಗೆ ರವಾನಿಸಲಾಗುವುದು ಎಂದು ವಿಪುಲ್‌ ಹೇಳಿದರು.

ಈ ನಿಟ್ಟಿನಲ್ಲಿ ಏರಿಂಡಿಯಾ ನಮಗೆ ನೆರವಾಗಲಿದೆ. ದುಬೈ ಪೊಲೀಸರಿಗೆ ಮತ್ತು ಎಲ್ಲ ಆಸ್ಪತ್ರೆ ಅಧಿಕಾರಿಗಳು ನೀಡಿರುವ ಉತ್ತಮ ಸಹಕಾರಕ್ಕೆ ನಾವು ಆಭಾರಿಯಾಗಿದ್ದೇವೆ ಎಂದು ವಿಪುಲ್‌ ಹೇಳಿದರು.

Comments are closed.