ಗಲ್ಫ್

ದುಬೈಯಲ್ಲಿ “ನೂತನ ಮಕ್ಕಳ ಯಕ್ಷಗಾನ ತಂಡದ ಉದ್ಘಾಟನೆ” ಮತ್ತು “ಸಾಧನಾ ಸಂಭ್ರಮ-ಯಕ್ಷಾರಾಧನಾ -2019 ರ ಮುಹೂರ್ತ ಪೂಜೆ”

Pinterest LinkedIn Tumblr

ದುಬೈ ಕರಾವಳಿಗರ – ಯಕ್ಷಗಾನವೆ ಉಸಿರಾಗಿರುವ ತುಳು- ಕನ್ನಡಿಗರ ಬಹು ಕಾಲದ ಕನಸು ನನಸಾಗುವ ಹೊತ್ತು ಸಮೀಪಿಸುತ್ತಿದೆ. ಇದೇ 2019 ಜೂನ್ ತಿಂಗಳ 28 ರಂದು ದುಬೈಯಲ್ಲಿ ಪ್ರಪ್ರಥಮ ಬಾರಿಗೆ ಮಕ್ಕಳ ತಂಡವೊಂದು ದುಬೈಯ ಪ್ರಖ್ಯಾತ ಉದ್ಯಮಿಗಳು, ಕಲಾವಿದರ ಸಮ್ಮುಖದಲ್ಲಿ ದುಬೈ–ಗೀಸೈಸ್ ನ ಫಾರ್ಚೂನ್ ಫ್ಲಾಝದ ಬ್ಯಾಂಕ್ವೆಟ್ ಹಾಲ್ನಲ್ಲಿ ಉದ್ದೀಪನಗೊಳ್ಳಲಿದೆ. ಅಲ್ಲದೇ ಸಂಸ್ಥೆಯ ವಿನೂತನ ಹೆಸರನ್ನೂ ಅದೇ ದಿನ ಅತಿಥಿಗಳು ಅನಾವರಣಗೊಳಿಸಲಿದ್ದಾರೆ. ಈ ಸದವಸರದಲ್ಲೇ ಬಾಲಕಲಾವಿದರ ಪ್ರತಿಭಾವಿಲಾಸಕ್ಕೆ ವೇದಿಕೆ ಸೃಷ್ಟಿಸುವ ಸದಿಚ್ಛೆಯಿಂದ ಹಮ್ಮಿಕೊಳ್ಳಲಿರುವ ಸಾಧನಾ ಸಂಭ್ರಮ ಮತ್ತು ಯಕ್ಷಾರಾಧನ- 2019ಕ್ಕೆ ಮುಹೂರ್ತ ಪೂಜೆಯೂ ನೆರವೇರಲಿದೆ.

ಹಿನ್ನೆಲೆ:- ದುಬೈಯಲ್ಲಿ ಕಳೆದ 4-5 ವóರ್ಷಗಳಿಂದಲೇ ಅನೌಪಚಾರಿಕವಾಗಿ ಕಾರ್ಯಾರಂಭಿಸಿರುವ “ಯಕ್ಷಗಾನ ಅಭ್ಯಾಸ ತರಗತಿ-ದುಬೈ” ಈಗಾಗಲೇ ಸಾಧನಾ ಸಂಭ್ರಮ-2017, ಮಕ್ಕಳ ಯಕ್ಷಗಾನ ಮತ್ತು ತಾಳಮದ್ದಳೆ ಪ್ರದರ್ಶನಗಳ ಮೂಲಕ ಮನೆಮಾತಾಗಿದೆ. ಮಂಗಳೂರು ಅಡ್ಯಾರ್ ಗಾರ್ಡನ್ನಲ್ಲಿ ನಡೆದ ಪಟ್ಲ ಸಂಭ್ರಮ 2017 ರಲ್ಲಿ ಭಾಗವಹಿಸಿ, ದುಬೈಯ ಬಾಲ ಕಲಾವಿದರ ಸಮಾಗಮದ ಮೋಹಿನೀ ಏಕಾದಶಿ ಪ್ರಸಂಗ ಪ್ರದರ್ಶಿಸುವ ಮೂಲಕ ಯಕ್ಷಗಾನ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಸಂಪೂರ್ಣ ವಿದೇಶಿ ತಂಡವೊಂದು ಯಕ್ಷಗಾನದ ತವರೂರಿನಲ್ಲಿ ಪ್ರದರ್ಶನ ಕೊಟ್ಟ ಹೆಗ್ಗಳಿಕೆಗೆ ಪಾತ್ರವಾದ ಸಂಗತಿ ಯಕ್ಷಗಾನ ಅಭಿಮಾನಿಗಳಿಗೆಲ್ಲ ಹೆಮ್ಮೆಯ ಸಂಗತಿ. ಇದೀಗ ತನ್ನ ಸಂಸ್ಥೆಯಲ್ಲಿ ಕಲಿತು ಬೆಳೆಯುತ್ತಿರುವ ಯಕ್ಷ ಪ್ರತಿಭೆಗಳಿಗೆ, ಸೂಕ್ತ ವೇದಿಕೆ ಒದಗಿಸುವ ಮಹತ್ತರ ಸದಾಶಯದಿಂದ ಸಂಪೂರ್ಣ ಮಕ್ಕಳ ತಂಡವೊಂದರ ಲೋಕಾರ್ಪಣೆಗೆ ಮುಹೂರ್ತ ನಿಶ್ಚಯಿಸಿದೆ.

ಉದ್ದೇಶ :- ತಾಯ್ನಾಡಿನ ಮಣ್ಣಿನ ಕಲೆ ಯಕ್ಷಗಾನದ ಕುರಿತಾಗಿ ಮಕ್ಕಳಿಗೆ -ಹೆತ್ತವರಿಗೆ ಇರುವ ತುಡಿತ- ಮಿಡಿತಗಳನ್ನು ಅರ್ಥವಿಸಿಕೊಂಡು, ಅದಕ್ಕೊಂದು ಸಾಂಸ್ಥಿಕ ನೆಲೆಗಟ್ಟು ಮತ್ತು ದಿಸೆಗಳನ್ನು ಒದಗಿಸುವ ಸದಿಚ್ಛೆಯಿಂದಲೇ ದುಬೈಯಲ್ಲಿಯೇ ಮೊತ್ತಮೊದಲ ಬಾರಿಗೆ, ಬಾಲಕಲಾವಿದರ ತಂಡವನ್ನು ಪ್ರಾರಂಭಿಸಲು ಸಮಾನಾಸಕ್ತ ಯಕ್ಷಗಾನ ಕಲಾಸಕ್ತ ಬಂಧುಗಳೆಲ್ಲಾ ಒಟ್ಟಾಗಿ ಈ ಸಂಸ್ಥೆಯ ಮೂಲಕ ಸಂಕಲ್ಪಿಸಿದ್ದಾರೆ. ಇಲ್ಲಿ ಮುಖ್ಯವಾಗಿ ಹೊರನಾಡಿನಲ್ಲಿ, ಯಾವುದೇ ಕಲಾಅಭ್ಯಾಸಿಗಳು ಒಂದೋ –ಎರಡೋ ಕಾರ್ಯಕ್ರಮಗಳ ಉದ್ದೇಶದಿಂದ ಸೀಮಿತ ಅಭ್ಯಾಸ ಮಾಡುವುದು ರೂಢಿ. ಒಂದೊಮ್ಮೆ ಅಭ್ಯಾಸಿಗಳಿಗೆ ಹೆಚ್ಚಿನ ಅಭ್ಯಾಸದ ಇಂಗಿತವಿದ್ದರೂ, ಅದಕ್ಕೆ ಪೂರಕ ಅವಕಾಶಗಳು ಕಡಿಮೆ. ಅದರಲ್ಲೂ ರಾಜಕಲೆಯಾದ ಯಕ್ಷಗಾನದಲ್ಲಿ ಮುಂದುವರಿಯಲು ಸಮೂಲಾಗ್ರ ಅಭ್ಯಾಸ –ವಿಸ್ತ್ರತ ಅಧ್ಯಯನ ಅತೀ ಅಗತ್ಯ. ಇದನ್ನು ಮನಗಂಡೇ ಯಕ್ಷಗಾನ ಅಭ್ಯಾಸ ತರಗತಿಯು ವರ್ಷಪೂರ್ತಿ ನಿರಂತರವಾಗಿ ನಡೆವಂತೆ ಯಕ್ಷಗಾನದ ನಾಟ್ಯ -ಹಿಮ್ಮೇಳಗಳ ಮೂಲ ಅಭ್ಯಾಸ, ಹಾಗೇ ಯಕ್ಷಗಾನ ಕುರಿತಾದ ಮತ್ತು ಪೂರಕ ಪಠ್ಯಗಳ ಅಭ್ಯಾಸ, ಮಾಹಿತಿಗಳ ವಿನಿಮಯ, ಪರಂಪರೆಗಳ ಪರಿಚಯ, ಪರಿಶ್ರಮ, ಪರಿವರ್ತನೆ, ಪ್ರದರ್ಶನಗಳ ಹೆಬ್ಬಯಕೆಯನ್ನು ಹೊಂದಿದೆ. ಇದನ್ನು ಸಾಕಾರಗೊಳಿಸಲು, ನಮ್ಮಲ್ಲಿ ಸಧ್ಯ ಲಭ್ಯವಿರುವ ವಿಶೇಷ ತರಗತಿಗಳು ಈ ರೀತಿ ಇವೆ. •ಯಕ್ಷಗಾನ ನಾಟ್ಯ (ಪ್ರಾಥಮಿಕ ಮತ್ತು ಪ್ರೌಢ ವಿಭಾಗಗಳು )-ಅಭಿನಯ ತರಬೇತಿ. •ಪೂರ್ವರಂಗ-ಉತ್ತರರಂಗ ವೈವಿಧ್ಯಗಳ ತರಬೇತಿ. •ವಿಶೇಷ ರಂಗಕ್ರಮಗಳ ಪ್ರಾತ್ಯಕ್ಷಿಕೆ. •ಆಯ್ದ ಪ್ರಸಂಗ –ರಂಗಪಠ್ಯಗಳ ತರಬೇತಿ. •ರಾಮಾಯಣ-ಮಹಾಭಾರತ ಇತ್ಯಾದಿ ಪುರಾಣ ಕಾವ್ಯ – ಕಥನ ಅಧ್ಯಯನ. •ಭಾಗವತಿಕೆ ಮತ್ತು ಚೆಂಡೆ-ಮದ್ದಳೆ ತರಬೇತಿ. •ಪ್ರಸಾಧನ (ಮೇಕಪ್)- ವೇಷಭೂಷಣ ತರಬೇತಿ. • ತಾಳಮದ್ದಳೆ ಅಭ್ಯಾಸ ಕೂಟ. •ರಜಾಕಾಲದ ವಿಶೇಷ ತರಗತಿ- ಯಕ್ಷಗಾನ ಪೂರಕ ಚಿತ್ರಕಲೆ- ಯೋಗಾಭ್ಯಾಸಗಳ ತರಬೇತಿ. •ಕನ್ನಡ ತಿಳಿಯದ ಮಕ್ಕಳಿಗೆ ಕನ್ನಡ ಭಾಷಾ ಅಭ್ಯಾಸ ಇತ್ಯಾದಿಗಳು. ಇದರ ಸದುಪಯೋಗವನ್ನು ಯು.ಎ.ಇ. ಯ ಎಲ್ಲಾ ಕಲಾಸಕ್ತರು ಮಾಡಿಕೊಳ್ಳಬೇಕೆಂದು ಸಂಘಟಕರ ಪರವಾಗಿ ಮನವಿ.

ಸಂಘಟನೆ:- ಶ್ರೀಯುತ ದಿನೇಶ ಶೆಟ್ಟಿ ಕೊಟ್ಟಿಂಜ ರವರ ನೇತೃತ್ವದಲ್ಲಿ ಕಳೆದ ಐದು ವರ್ಷಗಳಿಂದ “ಯಕ್ಷಗಾನ ಅಭ್ಯಾಸ ತರಗತಿ” ಎಂಬ ಸಂಸ್ಥೆಯ ವತಿಯಿಂದ ಮೇಲೆ ವಿವರಿಸಿದ ಉದ್ದೇಶಗಳ ಈಡೇರಿಕೆಗಾಗಿ ದುಬೈಯ ಯಕ್ಷಗಾನ ಕಲಾವಿದರು ಹಾಗೂ ಇತರ ಕಲಾ ಪ್ರಕಾರಗಳ ಕಲಾವಿದರ ಜೊತೆಗೆ ಕಲಾಪೋಷಕರು ಒಂದಾಗಿ ಶ್ರಮಿಸುತ್ತಿದ್ದಾರೆ. ತುಳು- ಕನ್ನಡ ಪರ ಸಂಘ-ಸಂಸ್ಥೆಗಳು ಪದಾಧಿಕಾರಿಗಳು ಈ ಮಹತ್ಕಾರ್ಯದಲ್ಲಿ ಕೈ ಜೋಡಿಸುತ್ತಿದ್ದಾರೆ. ನಮ್ಮೀ ಮಹದುದ್ದೇಶ ಈಡೇರಿಕೆಯ ಭರವಸೆ ಮೂಡುವಂತೆ ಮಾಡಿದ್ದಾರೆ. ಬಾಲಕಲಾವಿದರಿಗೆ ಪೂರಕವಾಗುವಂತ ಹೊಸ ವೇಷಭೂಷಣ, ಹಿಮ್ಮೇಳ ಸಾಮಾಗ್ರಿಗಳ ವ್ಯವಸ್ಥೆ ಕೂಡ ಉದಾರ ದಾನಿಗಳ ಕೊಡುಗೆಯಿಂದ ನಡೆಯಲಿದೆ. ಸ್ವಯಂಪ್ರೇರಿತರಾಗಿ ಈ ಕುರಿತು ತಮ್ಮ ದೇಣಿಗೆ ನೀಡ ಬಯಸುವವರು ತಮ್ಮನ್ನು ಸಂಪರ್ಕಿಸಬಹುದೆಂದು ಸಂಘಟಕರು ತಿಳಿಸಿದ್ದಾರೆ.

ಗುರುಕುಲ :- ಪ್ರಸಿದ್ಧ ಯಕ್ಷಗಾನ ಕಲಾವಿದ-ನಮ್ಮ ಸಂಸ್ಥೆಯ ಮುಖ್ಯ ಗುರುಗಳು ಮತ್ತು ನಿರ್ದೇಶಕರಾಗಿರುವ ಶ್ರೀಯುತ ಶೇಖರ್ ಡಿ. ಶೆಟ್ಟಿಗಾರರ ಪರಿಕಲ್ಪನೆಯಲ್ಲಿ ಅರಳಿರುವ ಈ ಸಂಸ್ಥೆ ಇದೀಗ ಮತ್ತೊಂದು ಮಜಲನ್ನು ಪಡೆಯುತ್ತಿದೆ. ಈ ತಂಡದಲ್ಲಿ ನಾಟ್ಯ ಗುರುಗಳಾಗಿ ಉದಯೋನ್ಮುಖ ಕಲಾವಿದ ಶ್ರೀಯುತ ಶರತ್ ಕುಮಾರ್ರವರು ತಂಡವನ್ನು ರೂಪಿಸುವಲ್ಲಿ ಶ್ರಮವಹಿಸಿದರೆ, ಚೆಂಡೆ-ಮದ್ದಳೆ ತರಬೇತಿಯ ನೇತೃತ್ವವನ್ನು ಶ್ರೀಯುತರಾದ ಭವಾನಿಶಂಕರ ಶರ್ಮ, ಲಕ್ಷೀಶ ಶರ್ಮ ಮತ್ತು ಪುತ್ತಿಗೆ ವೆಂಕಟೇಶ ಶಾಸ್ತ್ರಿ ವಹಿಸುತ್ತಿದ್ದಾರೆ. ಚಿತ್ರಕಲೆ ತರಬೇತಿಯನ್ನು ಮುಂದಿನ ದಿನಗಳಲ್ಲಿ ಶ್ರೀಯುತ ಗಿರೀಶ್ ನಾರಾಯಣ ಕಾಟಿಪಳ್ಳರವರು ಮುನ್ನಡೆಸಲಿದ್ದಾರೆ. ಕನ್ನಡ ತರಗತಿ ಇತ್ಯಾದಿ ಇನ್ನು ಕೆಲ ಮಂದಿ ಅಧ್ಯಾಪಕರು ನಮ್ಮ ತಂಡವನ್ನು ಸೇರಿಕೊಳ್ಳಲಿದ್ದಾರೆ. ವ್ಯವಸ್ಥಿತವಾದ ತರಗತಿಗಳು ಟ್ಯಾಲೆಂಟ್ ಝೋನ್ ಮ್ಯೂಸಿಕ್ & ಡ್ಯಾನ್ಸ್ ಸೆಂಟರ್, ದುಬೈಆಶ್ರಯದಲ್ಲಿ ಪ್ರಖ್ಯಾತ ವಿದ್ಯಾಲಯ ಬಿಲ್ವ ಸ್ಕೂಲ್ ನಲ್ಲಿ ಶುಕ್ರವಾರ ಮತ್ತ ರಜಾದಿನಗಳಲ್ಲಿ ನಡೆಯುತ್ತಿದೆ.

ಮುಹೂರ್ತ ಪೂಜೆ ಮತ್ತು ಉದ್ಘಾಟನಾ ಸಮಾರಂಭ:- ಶ್ರೀಯುತ ಪುತ್ತಿಗೆ ವಾಸುದೇವ ಭಟ್ಟರ ನೇತೃತ್ವದಲ್ಲಿ ಪೂಜಾ ವಿಧಿಗಳು ಮತ್ತು ರಾಜೇಶ್ ಕುತ್ತಾರ್ ಇವರ ನೇತೃತ್ವದಲ್ಲಿ ಭಜನೆ ಅಲ್ಲದೆ ಅನೇಕ ಗಣ್ಯಾತಿಗಣ್ಯರು ತುಳು-ಕನ್ನಡ ಪರ ಸಂಘ- ಸಂಸ್ಥೆ, ಕಮ್ಯೂನಿಟಿಗಳ ಪ್ರತಿನಿಧಿಗಳು, ಅತಿಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Comments are closed.