ಕರ್ನಾಟಕ

ರಾಜ್ಯದ ಹಲವು ಕಡೆ ಮಳೆಯ ಅರ್ಭಟ: ತುಮಕೂರಿನಲ್ಲಿ ಶೆಡ್​​ ಕುಸಿದು ವೃದ್ಧೆ ಸಾವು

Pinterest LinkedIn Tumblr


ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯದ ಹಲವೆಡೆ ಭಾನುವಾರ ಧಾರಾಕಾರ ಮಳೆಯಿಂದ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದ್ದು, ವೃದ್ದೆ ಮೃತಪಟ್ಟಿದ್ದಾರೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆಯಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದ ರೇಷ್ಮೆ ಶೆಡ್​​ ಕುಸಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಗಮ್ಮ (75) ಮೃತರು. ಜೋರಾಗಿ ಸುರಿದ ಮಳೆಯಿಂದ ಶೆಡ್​​ನಲ್ಲಿ ಆಶ್ರಯ ಪಡೆಯಲು ಹೋದಾಗ ಅವಘಡ ಸಂಭವಿಸಿದೆ. ಸಿದ್ದಪ್ಪ ಎಂಬುವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಹಂದನಕೆರೆ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಹಿರಿಯೂರು ಪಟ್ಟಣದ ರಿಲಾಯನ್ಸ್​​ ಪೆಟ್ರೋಲ್​​ ಬಂಕ್​​ ಪಕ್ಕದಲ್ಲಿನ ತೆಂಗಿನ ಮರಕ್ಕೆ ಸಿಡಿಲು ಬಡಿದು ಧಗಧಗ ಹೊತ್ತಿ ಉರಿದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

ಹಾಸನ ಜಿಲ್ಲೆಯ ಅರಸೀಕೆರೆ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ. ಹತ್ತಾರು ವರ್ಷಗಳಿಂದ ತುಂಬದ ಶಶಿವಾಳ ಕೆರೆ ಧಾರಾಕಾರ ಮಳೆಯಿಂದ ಒಂದೇ ಗಂಟೆಯಲ್ಲಿ ತುಂಬಿದೆ. ಕೆರೆ ತುಂಬಿದ ಕಾರಣ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಸಿಲಿಕಾನ್​ ಸಿಟಿಯಲ್ಲೂ ಮಳೆರಾಯ ಅರ್ಭಟಿಸಿದ್ದಾನೆ. ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಗಳೆಲ್ಲ ಜಲಾವೃತಗೊಂಡಿವೆ. ಶಾಂತಿನಗರ, ಶಿವಾಜಿನಗರ, ವಿಲ್ಸನ್​​ ಗಾರ್ಡನ್​, ಮಡಿವಾಳ, ಆರ್.ಆರ್​ ನಗರ ಸೇರಿಂದತೆ ಹಲವೆಡೆ ಭಾರಿ ಮಳೆಯಿಂದ ವಾಹನ ಸವಾರರು ಪರದಾಡಿದ್ದಾರೆ.

ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್​ಪೇಟೆ ಸೇರಿದಂತೆ ಹೋಬಳಿಯಾದ್ಯಂತ ಗಾಳಿ ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಬಳಿಭಾರಿ ಬಿರುಗಾಳಿ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಬೃಹದಾಕಾರದ ಮರಗಳು ಉರುಳಿ ಸಂಚಾರ ಸ್ಥಗಿತಗೊಂಡಿತ್ತು.

ಇನ್ನೂ ಒಂದು ವಾರ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

Comments are closed.