ಗಲ್ಫ್

ದ್ವೀಪರಾಷ್ಟ್ರ ಬಹರೈನ್’ನಲ್ಲಿ ಯಶಸ್ವೀ ಯಕ್ಷಗಾನ ಪ್ರದರ್ಶನ

Pinterest LinkedIn Tumblr

ಬಹರೈನ್; ಇತ್ತೀಚೆಗೆ ಇಲ್ಲಿನ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘದ ಆಶ್ರಯದಲ್ಲಿ ದ್ವೀಪದ ಯಕ್ಷಗಾನ ಕಲಾವಿದರಿಂದ ಪ್ರದರ್ಶನಗಂಡ “”ವೀರ ಬಬ್ರುವಾಹನ ಹಾಗು “ಸುದರ್ಶನೋಪಖ್ಯಾನ” ಎಂಬ ಎರಡು ಎರಡು ಅಮೋಘ ಕನ್ನಡ ಪೌರಾಣಿಕ ಪ್ರಸಂಗಳು ಇಲ್ಲಿನ ‘ಸಗಯ್ಯಾ ‘ ಪರಿಸರದಲ್ಲಿರುವ ಕೇರಳ ಕೆಥೋಲಿಕ್ ಅಸೋಸಿಯೇಷನ್ ನ ಭವ್ಯ ಸಭಾಂಗಣದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು ನೆರೆದ ಯಕ್ಷಪ್ರೇಮಿಗಳ ಮನಸೂರ್ರೆಗೊಂಡಿತು.

ಇಲ್ಲಿನ ಕನ್ನಡ ಸಂಘದ ಆಶ್ರಯದಲ್ಲಿ ಯಕ್ಷೋಪಾಸನ ಕೇಂದ್ರದ ಮೂಲಕ ನಾಡಿನ ಖ್ಯಾತ ಯಕ್ಷಗಾನ ಕಲಾವಿದ ದೀಪಕ್ ಪೇಜಾವರ ಇವರ ನಿರ್ದೇಶನದಲ್ಲಿ ಮೂಡಿ ಬಂದ ಈ ಯಕ್ಷಗಾನ ಪ್ರದರ್ಶನದಲ್ಲಿ ಅವರ ಯಕ್ಷೋಪಾಸನ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಬಾಲ ಕಲಾವಿದರು ರಂಗ ಪ್ರವೇಶ ಮಾಡಿ ,ತಮ್ಮ ಅಭಿನಯ,ವಾಕ್ಚಾತುರ್ಯ ಹಾಗು ಕುಣಿತದ ಮೂಲಕ ನೆರೆದ ಯಕ್ಷಪ್ರೇಮಿಗಳನ್ನು ಮಂತ್ರಮುಗ್ದರನ್ನಾಗಿಸಿದರು .

ಬಾಲಕ,ಬಾಲಕಿಯರು ಸೇರಿದಂತೆ ಇಲ್ಲೇ ಹೆಜ್ಜೆಗಾರಿಕೆ,ಅರ್ಥಗಾರಿಕೆ ಹಾಗು ಅಭಿನಯ ಕಲಿತ ಸುಮಾರು ಹತ್ತು ಬಾಲ ಕಲಾವಿದರಿಂದ “ವೀರ ಬಬ್ರುವಾಹನ ” ಎಂಬ ಯಕ್ಷಗಾನ ಪ್ರದರ್ಶನವು ರಂಗದಲ್ಲಿ ಬಹಳ ಸುಂದರವಾಗಿ ಮೂಡಿಬಂತು . ಇದಾಗಲೇ ಸಂಪೂರ್ಣ ಹಿಮ್ಮೇಳ ಹಾಗು ಮುಮ್ಮೇಳವನ್ನು ಹೊಂದಿರುವ ಖ್ಯಾತಿಯನ್ನು ಪಡೆದಿರುವ ಬಹರೈನ್ ಯಕ್ಷಗಾನ ತಂಡಕ್ಕೆ ಇದೀಗ ಬಾಲ ಕಲಾವಿದರುಗಳ ಸೇರ್ಪಡೆಯು ಇನ್ನಷ್ಟು ಹೆಮ್ಮೆಯನ್ನು ತಂದಿದ್ದು ನಮ್ಮ ನಾಡಿನ ಗಂಡು ಕಲೆಯನ್ನು ಯುವ ಪೀಳಿಗೆಗೂ ಕಲಿಸಿ ಕೊಲ್ಲಿಯ ಈ ಮಣ್ಣಿನಲ್ಲೂ ಉಳಿಸಿ ಬೆಳೆಸುವ ಈ ಪ್ರಯತ್ನವು ನಿಜಕ್ಕೂ ಶ್ಲಾಘನೀಯ . ಬಾಲ ಕಲಾವಿದರ ಯಕ್ಷಗಾನ ಪ್ರದರ್ಶನದ ನಂತರ ಹಿರಿಯ ಕಲಾವಿದರುಗಳಿಂದ “ಸುದರ್ಶನೋಪಖ್ಯಾನ” ಎಂಬ ಯಕ್ಷಗಾನ ಪ್ರಸಂಗವನ್ನು ದ್ವೀಪದ ಹಿರಿಯ ಯಕ್ಷಗಾನ ಕಲಾವಿದರುಗಳು ಯಶಸ್ವಿಯಾಗಿ ಆಡಿತೋರಿಸಿದರು .

ನಾಡಿನ ಖ್ಯಾತ ಹಿಮ್ಮೇಳ ವಾದಕ ಶ್ರೀ ಶ್ರೀಧರ್ ವಿಟ್ಲಾ ರವರು ಈ ಯಕ್ಷಗಾನ ಪ್ರದರ್ಶನದಲ್ಲಿ ವಿಶೇಷವಾಗಿ ಭಾಗವಹಿಸಿ ಚೆಂಡೆಯಲ್ಲಿ ತಮ್ಮ ಕೈ ಚಳಕ ತೋರಿಸಿದರೆ . ಸೌದಿ ಅರೇಬಿಯಾದ ಹವ್ಯಾಸಿ ಭಾಗವತರಾದ ರೋಶನ್ ಕೋಟ್ಯಾನ್ ಹಾಗು ನಾರಾಯಣ ಪಂಜತೊಟ್ಟಿಯವರು ಭಾಗವತರಾಗಿ ತಮ್ಮ ಶುಶ್ರಾವ್ಯ ಕಂಠದಿಂದ ಮೋಡಿಮಾಡಿದರು , ದ್ವೀಪದ ಪ್ರತಿಭಾವಂತ ಕಲಾವಿದರುಗಳು ಈ ಯಕ್ಷಗಾನ ಪ್ರದರ್ಶನದಲ್ಲಿ ತಮ್ಮ ಪ್ರತಿಭೆ ಮೆರೆದು ದ್ವೀಪದ ಕಲಾಪ್ರೇಮಿ ಗಳನ್ನು ರಂಜಿಸಿದರು .

ಈ ಯಕ್ಷಗಾನ ಕಾರ್ಯಕ್ರಮದಲ್ಲಿ ಬಾಲಕಲಾವಿದರಿಂದ ಮೊದಲಿಗೆ ಗುರುವಂದನಾ ಕಾರ್ಯಕ್ರಮವು ಜರುಗಿತು . ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿದ ನಾಡಿನ ಖ್ಯಾತ ಯಕ್ಷಗಾನ ಕಲಾವಿದ ಶ್ರೀ ದೀಪಕ್ ಪೇಜಾವರ ರವರು ವಿದೇಶಿ ನೆಲದಲ್ಲಿ ತಮ್ಮ ಮೆಚ್ಚಿನ ಕಲೆಯನ್ನು ಉಳಿಸಿ,ಬೆಳೆಸಲು ದ್ವೀಪದ ಪುಟಾಣಿಗಳು ತಮ್ಮ ಊಹೆಗೂ ಮೀರಿ ಸ್ಪಂದಿಸಿದ್ದು ಇದರಿಂದಾಗಿಯೇ ಪುಟಾಣಿಗಳಿಂದ ಇಂತಹ ಒಂದು ಉತ್ಕ್ರಷ್ಟ ಯಕ್ಷಗಾನ ಪ್ರದರ್ಶನ ನಾವಿಂದು ಕಾಣಲು ಸಾಧ್ಯವಾಯಿತು ಎಂದರು .

ದ್ವೀಪದ ಹಿರಿಯ ಯಕ್ಷಗಾನ ಸಂಘಟಕ ,ದ್ವೀಪದಲ್ಲಿ ಯಕ್ಷಗಾನದ ಬೆಳವಣಿಗೆಯನ್ನು ಬಹಳ ಹತ್ತಿರದಿಂದ ಕಂಡಿರುವ ಶ್ರೀ ರಮೇಶ್ ಮಂಜೆಶ್ವರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಮೂರು ದಶಕಗಳಿಂದ ದ್ವೀಪದಲ್ಲಿ ಯಕ್ಷಗಾನ ಕಲೆಯು ನಡೆದು ಬಂದ ಹಾದಿಯ ಬಗ್ಗೆ ಮಾತನಾಡಿ ವಿದೇಶಿ ನೆಲದಲ್ಲಿ ಇದೀಗ ನಮ್ಮ ಮೂರನೆಯ ಪೀಳಿಗೆಯು ನಾಡಿನ ಈ ಪುರಾತನ ಕಲೆಯನ್ನು ಮುಂದುವರೆಸಿಕೊಂಡು ಹೋಗುವುದನ್ನು ನೋಡಿ ಅತೀವ ಸಂತಸವಾಗಿದೆ. ವಿದೇಶಿ ನೆಲದಲ್ಲಿ ಯಕ್ಷಗಾನದ ಬೆಳವಣಿಗೆ ಹಾಗು ಪ್ರೋತ್ಸಾಹದ ಬಗ್ಗೆ ಸೂಕ್ತ ಅಧ್ಯಯನ ನಡೆಸುವ ಅಗತ್ಯವಿದೆ ಎಂದರು.

ಇದೆ ಸಂಧರ್ಭದಲ್ಲಿ ಅತಿಥಿ ಕಲಾವಿದರಾದ ಶ್ರೀ ಶ್ರೀಧರ್ ಹಾಗುಸ್ಥಳೀಯ ಕಲಾವಿದರುಗಳನ್ನು ಹಾಗು ಸ್ವಯಂಸೇವಕರುಗಳನ್ನು ಸಮ್ಮಾನಿಸಲಾಯಿತು .

ಈ ಒಟ್ಟು ಕಾರ್ಯಕ್ರಮವನ್ನು ಶ್ರೀ ರಾಮ್ ಪ್ರಸಾದ್ ಅಮ್ಮೆನಡ್ಕ ಹಾಗು ಶ್ರೀ ಮೋಹನ್ ಎಡನೀರ್ ರವರು ಸಂಯೋಜಿಸಿದರೆ ,ಶ್ರೀ ಪ್ರಸಾದ್ ರಾವ್ ರವರು ಕಾರ್ಯಕ್ರಮ ನಿರೂಪಿಸಿದರು .

ವರದಿ-ಕಮಲಾಕ್ಷ ಅಮೀನ್ .

Comments are closed.