ಕರಾವಳಿ

ಕುಂದಾಪುರದ ಬಸ್ರೂರಿನಲ್ಲಿ ಪ್ರಾಚೀನ ತುಳು ಬ್ರಹ್ಮನ ಮೂರ್ತಿ ಪತ್ತೆ!

Pinterest LinkedIn Tumblr

ಕುಂದಾಪುರ: ಬಸ್ರೂರು ಮಾರ್ಗೋಳಿ ಪಾಳುಬಿದ್ದ ಚಿತ್ತೇರಿ ಬ್ರಹ್ಮಗುಂಡದಲ್ಲಿ ತುಳು ನಾಡ ಸಿರಿಯ ಬದುಕಿನ ಪೂರ್ವಾಧ ಭಾಗದ ಪ್ರಾಚೀನ ಕಾಲದ ಬ್ರಹ್ಮ (ಬೆರ್ಮರ್) ಮೂರ್ತಿ ಹತ್ತೆಯಾಗಿದ್ದು, ಹಿಂದೆ ಬ್ರಹ್ಮನ ಆರಾಧನೆ ಮಾಡುತ್ತಿದ್ದರು ಎನ್ನೋದಕ್ಕೆ ಮೂರ್ತಿ ಸಾಕ್ಷಿಯಾಗಿದೆ.

ಪತ್ತೆಯಾದ ಬ್ರಹ್ಮನ ಶಿಲಾಮೂರ್ತಿ ಕುದುರೆಯೇರಿದ ಯೋಧನಂತಿದ್ದು, ಕೈಯಲ್ಲಿ ಛಾವಟಿ ಹಿಡಿದಿ ಭಂಗಿಯಲ್ಲಿದೆ. ಕಾಲಬಳಿಯಲ್ಲಿ ಹುಲಿಯಿದೆ. ಕಿರೀಟ ಧರಿಸಿದ್ದು, ಯೋಗ್ಯವಾದ ಉಡುಗೆ ತೊಡಿಗೆ ಧರಿಸಿದ್ದಾನೆ. ಕುದುರೆ ಏರಿದ ಬ್ರಹ್ಮನ ಕೈಯಲ್ಲಿ ಛಾವಟಿಯಿದ್ದು, ಪ್ರಭಾವಳಿಯಲ್ಲಿ ನಾಗನಂತೆ ಗುರುತಿಸುವ ಕೆತ್ತನೆ ಇದೆ. ಕಾಲಬಳಿ ಹುಲಿ ಸಹಿತ ಈ ಎಲ್ಲಾ ಕುರುಹುಗಳು ಜೈನ ಬ್ರಹ್ಮ ಹಾಗೂ ಯಕ್ಷ ಬ್ರಹ್ಮನ ಕಲ್ಪನೆಯಿಂದ ಭಿನ್ನವಾಗಿದ್ದು ಪುರಾತನ ತುಳು ಕ್ರಮ ಎಂದು ಗುರುತಿಸಬಹುದು. ಲಾಂಛನದಲ್ಲಿ ಅವಳಿ ನಾಗನ ಹೆಡೆಯಿದ್ದು, ನಾಗ ಹಾಗೂ ಬ್ರಹ್ಮನ ಸಂಯುಕ್ತವಾಗಿ ಆರಾಧನೆ ಮಾಡುತ್ತಿರುವ ಪದ್ದತಿಗೆ ಪೂರಕವಾಗಿದೆ ಎಂದು ಬಸ್ರೂರು ಶ್ರೀ ಶಾರದಾ ಕಾಲೇಜ್ ಪ್ರೊ. ಪುರುಷೋತ್ತಮ ಬಲ್ಲಾಯ ಹೇಳಿದ್ದಾರೆ.

ಸುಮಾರು ಎಂಟನೇ ಶತಮನಾದ ಕಾಲದ ಶಿಲಾಮೂರ್ತಿ ಎಂದು ಅಂದಾಜಿಸಲಾಗಿದ್ದು, ಬಸ್ರೂರು ಶ್ರೀ ಶಾರಾದಾ ಕಾಲೇಜ್ ಪ್ರೊ. ಪುರುಶೋತ್ತಮ ಬಲ್ಲಾಯ ಮಾರ್ಗದರ್ಶನದಲ್ಲಿ ಶಶಿಕಾಂತ ಬಸ್ರೂರು ಸಹಕಾರದಲ್ಲಿ ಪ್ರದೀಪ್ ಬಸ್ರೂರು ಮೂರ್ತಿ ಪತ್ತೆ ಮಾಡಿದ್ದಾರೆ. ಮಾರ್ಗೋಳಿ ಪಾಳುಬಿದ್ದ ಕಟ್ಟಡ ಬಳಿ ಮತ್ತಷ್ಟು ಉತ್ಖನನ ನಡೆಸಿದರೆ ಮತ್ತಷ್ಟು ಐತಿಹಾಸಿಕ ಕರುಹುಗಳ ಪತ್ತೆಯಾಗುವ ಸಾಧ್ಯತೆ ಇದೆ ಎಂದು ಪ್ರದೀಪ್ ಬಸ್ರೂರು ಅಭಿಪ್ರಾಯಪಟ್ಟಿದ್ದಾರೆ.

Comments are closed.